ಹೊಸದಿಲ್ಲಿ : ಲಾಭದಾಯಕ ಹುದ್ದೆ ಹೊಂದಿದ್ದರೆಂಬ ಕಾರಣಕ್ಕೆ 20 ಆಪ್ ಶಾಸಕರನ್ನು ಅನರ್ಹಗೊಳಿಸಲಾದ ಕ್ರಮದ ಹಿಂದಿರುವ ವಾಸ್ತವಿಕ ಸತ್ಯಾಂಶಗಳನ್ನು ಅಫಿದಾವಿತ್ ಮೂಲಕ ತನಗೆ ತಿಳಿಸುವಂತೆ ದಿಲ್ಲಿ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಆದೇಶ ನೀಡಿದೆ.
ಜಸ್ಟಿಸ್ ಸಂಜೀವ್ ಖನ್ನಾ ಮತ್ತು ಜಸ್ಟಿಸ್ ಚಂದರ್ ಶೇಖರ್ ಅವರನ್ನು ಒಳಗೊಂಡ ಪೀಠವು ಚುನಾವಣಾ ಆಯೋಗಕ್ಕೆ “ಆಪ್ ಶಾಸಕರು ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಮನವಿಯಲ್ಲಿ ಮಾಡಿರುವ ಕೆಲವೊಂದು ಆರೋಪಗಳಿಗೆ ಅಫಿದಾವಿತ್ ಮೂಲಕ ಉತ್ತರಿಸುವಂತೆ’ ಚುನಾವಣಾ ಆಯೋಗಕ್ಕೆ ನೊಟೀಸ್ ಜಾರಿ ಮಾಡಿತು.
ಶಾಸಕರಾಗಿರುವ ಸಂಸದೀಯ ಕಾರ್ಯದರ್ಶಿಗಳ ಲಾಭದಾಯಕ ಹುದ್ದೆಯನ್ನು ಹೊಂದಿರುವ ಕಾರಣ 20 ಆಪ್ ಶಾಸಕರನ್ನು ಅನರ್ಹಗೊಳಿಸಲು ರಾಷ್ಟ್ರಪತಿಯವರಿಗೆ ತಾನು ಮಾಡಿದ್ದ ಶಿಫಾರಸಿನ ಅಂಶಗಳನ್ನು ಆಧರಿಸಿಕೊಂಡು ತಾನು ಆರೋಪಗಳಿಗೆ ಉತ್ತರಿಸುವುದಾಗಿ ಚುನಾವಣಾ ಆಯೋಗ ಹೈಕೋರ್ಟಿಗೆ ತಿಳಿಸಿತು.
ಈ ಸಂಬಂಧದ ಕಿರು ಕಲಾಪದ ಬಳಿಕ ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಫೆ.7ಕ್ಕೆ ನಿಗದಿಸಿ ಅಷ್ಟರೊಳಗಾಗಿ ಅಫಿದಾವಿತ್ ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು.
ಅನರ್ಹಗೊಳಿಸಲಾದ 20 ಆಪ್ ಶಾಸಕರ ಸ್ಥಾನವನ್ನು ತುಂಬಲು ಅಗತ್ಯವಿರುವ ಉಪ ಚುನಾವಣೆಯ ವೇಳಾ ಪಟ್ಟಿಯನ್ನು ಪ್ರಕಟಿಸದಂತೆ ಜನವರಿ 24ರ ವರೆಗೆ ಏಕನ್ಯಾಯಾಧೀಶರ ಪೀಠವು ಹೊರಡಿಸಿದ್ದ ಆದೇಶವನ್ನು ಫೆ.7ರ ವರೆಗೆ ದ್ವಿಸದಸ್ಯ ಪೀಠವು ವಿಸ್ತರಿಸಿತು.