Advertisement

ಹವ್ಯಕರು ಕನ್ನಡದ ಮೂಲ ನಿವಾಸಿಗಳು

06:25 AM Dec 29, 2018 | |

ಬೆಂಗಳೂರು: “ಕಾರಣಾಂತರಗಳಿಂದ ದಕ್ಷಿಣದಿಂದ ಉತ್ತರದ ಅಹಿತ್ಛತ್ರಕ್ಕೆ ತೆರಳಿ, ಅಲ್ಲಿಂದ ಈಗಿನ ಬನವಾಸಿಗೆ ಬಂದು, ಅಲ್ಲಿಂದ ಈಗಿನ ಗೋಕರ್ಣ, ಗಂಗೊಳ್ಳಿಗೆ ಬಂದವರು ಹವ್ಯಕರು,’ ಎಂದು ವಿದ್ವಾನ್‌ ಜಗದೀಶ ಶರ್ಮಾ ಹೇಳಿದ್ದಾರೆ.

Advertisement

“ಅಗ್ನಿಯ ಮೂಲಕ ದೇವಾನುದೇವತೆಗಳಿಗೆ ಅರ್ಪಿಸುವುದು “ಹವ್ಯ’. ಪಿತೃ ದೇವತೆಗಳನ್ನು ಆರಾಧಿಸುವುದು “ಕವ್ಯ’. ಈ ಎರಡೂ ಕೆಲಸಗಳಲ್ಲಿ ನಿಷ್ಣಾತರಾದ ಬ್ರಾಹ್ಮಣರನ್ನು ಹವ್ಯಕ ಎಂದು ಕರೆಯಲಾಗುತ್ತದೆ. ಇತಿಹಾಸ ಕಾಲದ ಗೋರಾಷ್ಟ್ರ ದೇಶದ ರಾಜ ಲೋಕಾದಿತ್ಯ ಈ ಹೆಸರನ್ನು ಇರಿಸಿದಾಗ ಮೊದಲ ಬಾರಿ ಈ ಹೆಸರು ಪ್ರಸ್ತಾಪವಾಯಿತು,’ ಎಂದು ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿರುವ ರಾಯಲ್‌ ಸೆನೆಟ್‌ ಹಾಲ್‌ನಲ್ಲಿ ಶುಕ್ರವಾರ ಆರಂಭವಾದ ಎರಡನೇ ವಿಶ್ವ ಹವ್ಯಕ ಸಮ್ಮೇಳನ ಪ್ರಯುಕ್ತ ಆಯೋಜಿಸಲಾಗಿದ್ದ ಮೊದಲಗೋಷ್ಠಿಯಲ್ಲಿ ಅವರು, ಈ ವಿಚಾರ ಮಂಡಿಸಿದರು. ಸಮುದಾಯವನ್ನು “ಹೈಗ’, “ಹೈವ’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ ಎಂದರು.

ಹವ್ಯಕ ಬ್ರಾಹ್ಮಣರು ಉತ್ತರದ ಅಹಿತ್ಛತ್ರದಿಂದ ಬಂದವರು. ಈ ಬಗ್ಗೆ ಮಹಾಭಾರತದಲ್ಲಿ ಪ್ರಸ್ತಾಪವಾಗಿದೆ. ಇಂದಿನ ಬನವಾಸಿಯಲ್ಲಿದ್ದ ಮಯೂರವರ್ಮ ಯಜ್ಞ ಯಾಗಾದಿಗಳನ್ನು ನಡೆಸಲು ಉತ್ತರದಿಂದ ದ್ರಾವಿಡ ಕುಟುಂಬ ವರ್ಗಗಳ 32 ಕುಟುಂಬಗಳನ್ನು ಕರೆತಂದಿರುವ ಐತಿಹ್ಯಗಳಿವೆ. ಈ ಸಂದರ್ಭದಲ್ಲಿ ಅವರಿಗೆ “ಹವ್ಯಕ’ ಎಂಬ ಹೆಸರು ಇರಲಿಲ್ಲ.

ಸೊರಬ, ಸಾಗರ, ಶಿರಸಿ, ಸಿದ್ಧಾಪುರದ ಕೆಲ ಭಾಗಗಳಲ್ಲಿ ಕರೆ ತಂದ ದ್ರಾವಿಡ ಬ್ರಾಹ್ಮಣರಿಗೆ ಜಮೀನನ್ನು ಕೊಡುಗೆಯಾಗಿ ನೀಡಲಾಗಿತ್ತು ಎಂದು ಮಾಹಿತಿ ಇದೆ ಎಂದರು. ಹವ್ಯಕರು ಔತ್ತರೇಯರಲ್ಲ ಎಂದ ಅವರು, ಉತ್ತರದಲ್ಲಿ ಮಯೂರವರ್ಮನಿಗೆ ದ್ರಾವಿಡರು ಸಿಕ್ಕಿದ್ದು ಹೇಗೆ ಎನ್ನುವುದು ಪ್ರಶ್ನೆ ಇದೆ. ಜತೆಗೆ ಅಲ್ಲಿಂದ ಬಂದವರಲ್ಲಿ ಆ ಪ್ರದೇಶದ ಛಾಯೆ ಇಲ್ಲ. ಅವರ ಭಾಷೆಯಲ್ಲಿ ಹಳೆ ಕನ್ನಡದ ಸೊಗಡು ಇದೆ.

Advertisement

ಹವ್ಯಕರ ಗೋತ್ರ ಸೂತ್ರಗಳಿಗೂ ಔತ್ತರೇಯರಿಗೂ ಹೊಂದಾಣಿಕೆಯಾಗುತ್ತಿಲ್ಲ. ಅವರ ಯಾವುದೇ ಪದ್ಧತಿಗಳಿಗೂ, ಸಮುದಾಯಕ್ಕೂ ಇದು ಅನ್ವಯಿಸುತ್ತದೆ. ಹೀಗಾಗಿ ಅವರು ನಾಡಿನ ಮೂಲ ನಿವಾಸಿಗಳು. ಕೆಲವೊಂದು ಕಾರಣದಿಂದ ಕ್ರಿಸ್ತಪೂರ್ವದ ಅವಧಿಯಲ್ಲಿ ವೈದಿಕ ಮತದ ಮೇಲೆ ಅವೈದಿಕ ಮತಗಳು ಆಕ್ರಮಣ ಮಾಡಿದವು. ಆ ಮತಗಳಿಗೆ ರಾಜಾಶ್ರಯ ಸಿಕ್ಕಿತು.

ಹೀಗಾಗಿ, ಉತ್ತರಕ್ಕೆ ಹೋಗಿದ್ದವರು ಮತ್ತೆ ವಾಪಸ್‌ ಬಂದಿದ್ದಾರೆ. ಈ ಅಂಶವನ್ನು ಸಂಶೋಧಕರು ಪುಷ್ಟೀಕರಿಸಿದ್ದಾರೆ ಎಂದರು. ಖ್ಯಾತ ಸಂಶೋಧಕ ಮಾಧವ ಗಾಡ್ಗಿàಳ್‌ ನಡೆಸಿದ ಸಂಶೋಧನೆ ಪ್ರಕಾರವೂ ಸಹ್ಯಾದ್ರಿ ಪ್ರದೇಶದಲ್ಲಿ ಹತ್ತು ಸಾವಿರ ವರ್ಷಗಳಿಂದ ನೆಲೆಸಿದ್ದಾರೆ ಎನ್ನುವುದನ್ನು ಉಲ್ಲೇಖೀಸಿದ್ದಾರೆ. ಅವರ ಮೂಲ ಭಾಷೆ ಕನ್ನಡವೇ ಆಗಿದೆ ಎಂದರು.

14, 15ನೇ ಶತಮಾನದಲ್ಲಿ ವಿಟ್ಲ, ಕೊಡಗು, ಕುಂಬಳೆ, ಮಾಯಿಪ್ಪಾಡಿ ಅರಸು ಮನೆತನದವರು ತಮ್ಮ ರಾಜ್ಯದ ವ್ಯಾಪ್ತಿಯಲ್ಲಿ ಈ ಬ್ರಾಹ್ಮಣರನ್ನು ಕರೆಸಿಕೊಂಡರು. ಧಾರ್ಮಿಕ ಕಾರ್ಯಗಳ ಜತೆ ಮಂತ್ರಿ, ಶ್ಯಾನುಭೋಗ, ಕರಣಿಕ ಹುದ್ದೆಗಳಿಗೆ ಹವ್ಯಕರನ್ನೇ ನೇಮಿಸಿದರು ಎಂಬ ವಿಚಾರ ಸಂಶೋಧನೆಗಳಿಂದ ದೃಢಪಟ್ಟಿದೆ ಎಂದು ವಿದ್ವಾನ್‌ ಶರ್ಮಾ ಹೇಳಿದರು.

ಬಳಿಕ ಅಖೀಲ ಹವ್ಯಕ ಮಹಾಸಭೆಯ ಬೆಳವಣಿಗೆ ಬಗ್ಗೆ ನಿವೃತ್ತ ಉಪನ್ಯಾಸಕ ನಾರಾಯಣ ಭಟ್ಟ ಹುಳೇಗಾರು ವಿಚಾರ ಮಂಡಿಸಿದರು. ವ್ಯಕ್ತಿಯ ಬದುಕಿನಲ್ಲಿ 75 ವರ್ಷ ಹೇಗೆ ಮಹತ್ವವೋ ಅದೇ ರೀತಿ ಸಂಸ್ಥೆಯ ನಿಟ್ಟಿನಲ್ಲೂ ಪ್ರಮುಖವಾಗಿದೆ ಎಂದರು.

ಉತ್ತಮ ಶಿಕ್ಷಣ, ವೃತ್ತಿ ನಿಷ್ಠೆಯನ್ನು ಅನುಸರಿಸುತ್ತಾ ಸಮುದಾಯ ಉತ್ತಮ ಸಾಧನೆ ಮಾಡಿದೆ ಎಂದರು. 1942ರಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಈ ಮಹಾಸಭೆ, ವಿಶ್ವದ ಹವ್ಯಕ ಸಮುದಾಯದ ಅಗತ್ಯ ಪೂರೈಸುತ್ತಿದೆ ಎಂದರು. ವಿದ್ವಾನ್‌ ಕೃಷ್ಣಾನಂದ ಶರ್ಮಾ ವಿಚಾರಗೋಷ್ಠಿ ನಡೆಸಿಕೊಟ್ಟರು. ನಾರಾಯಣ ಕೆ. ಶಾನಭಾಗ್‌ ಅಧ್ಯಕ್ಷತೆ ವಹಿಸಿದ್ದರು.

* ಸದಾಶಿವ ಖಂಡಿಗೆ

Advertisement

Udayavani is now on Telegram. Click here to join our channel and stay updated with the latest news.

Next