ಹಾವೇರಿ: ಕೋವಿಡ್ ಸೋಂಕು ನಿಯಂತ್ರಣದ ಹಿನ್ನೆಲೆಯಲ್ಲಿ ವಿಧಿಸಿದ್ದ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ತಾಲೂಕಿನ ಕರ್ಜಗಿಯಲ್ಲಿ ಕಾರಹುಣ್ಣಿಮೆ ಉತ್ಸವ ಆಚರಿಸಿದ ಆರೋಪದ ಮೇಲೆ ದೇವಸ್ಥಾನ ಸಮಿತಿ ಸದಸ್ಯರು ಸೇರಿದಂತೆ 40 ಜನರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.
ತಾಲೂಕಿನ ಕರ್ಜಗಿಯಲ್ಲಿ ಪ್ರತಿವರ್ಷ ಶ್ರೀಬ್ರಹ್ಮಲಿಂಗೇಶ್ವರ ಜಾತ್ರೆ ಪ್ರಯುಕ್ತ ಕಾರಹುಣ್ಣಿಮೆ ಉತ್ಸವ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆಯುತ್ತದೆ. ಈ ಸಂದರ್ಭದಲ್ಲಿ ನಡೆಯುವ ಬಂಡಿ ಓಟ ವಿಶೇಷವಾಗಿದ್ದು ಇದನ್ನು ನೋಡಲು ಸಾವಿರಾರು ಜನರು ಸೇರುತ್ತಾರೆ. ಈ ವರ್ಷ ಕೋವಿಡ್ ಸೋಂಕಿತನ ಭೀತಿ ಹಿನ್ನೆಲೆಯಲ್ಲಿ ಉತ್ಸವ ನಡೆಸದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಅಷ್ಟೇಅಲ್ಲ ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಊರಗಣ್ಯರ ಸಭೆ ಕರೆದು ಈ ಬಾರಿ ಉತ್ಸವ ನಡೆಸದಂತೆ ತಿಳಿವಳಿಕೆಯೂ ನೀಡಲಾಗಿತ್ತು. ಆದರೂ ಗ್ರಾಮಸ್ಥರು ಉತ್ಸವ ನಡೆಸಲು ಅನುಮತಿ ನೀಡುವಂತೆ ತಹಸೀಲ್ದಾರರಿಗೆ ಮನವಿ ಮಾಡಿದ್ದರು. ಲಾಕ್‌ಡೌನ್ ನಿಯಮದಲ್ಲಿ ಉತ್ಸವ ನಡೆಸಲು ಅವಕಾಶ ಇಲ್ಲದೇ ಇರುವುದರಿಂದ ಅನುಮತಿ ನಿರಾಕರಿಸಲಾಗಿತ್ತು.
ಆದರೆ, ಗ್ರಾಮಸ್ಥರು ಉತ್ಸವದ ಮೊದಲೆರಡು ದಿನಗಳ ಸಂಪ್ರದಾಯಗಳನ್ನು ಮೊಟಕುಗೊಳಿಸಿ, ಮೂರನೇ ದಿನ ಗುರುವಾರ ಸಂಜೆ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಬಂಡಿ ಓಟ ಏರ್ಪಡಿಸಿದ್ದರು. ಇದನ್ನು ನೋಡಲು ಸಾವಿರಾರು ಜನರು ಮಾಸ್ಕ್ ಇಲ್ಲದೇ, ಸಾಮಾಜಿಕ ಅಂತರವಿಲ್ಲದೇ ಸೇರಿದ್ದರು.
ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಹಿನ್ನೆಲೆಯಲ್ಲಿ ಪೊಲೀಸರು ದೇವಸ್ಥಾನ ಸಮಿತಿಯ ಸದಸ್ಯರು, ಸಾರ್ವಜನಿಕರು ಸೇರಿ 40 ಜನರ ವಿರುದ್ಧ ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಗ್ರಾಮೀಣ ಜನರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಉತ್ಸವ ಆಚರಿಸಿದ್ದು ಅಧಿಕಾರಿ ವಲಯಕ್ಕೆ ಗೊತ್ತಾಗಿಯೇ ಇರಲಿಲ್ಲ. ಯಾರೋ ಉತ್ಸವವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಾಗ ಈ ವಿಚಾರ ಬಹಿರಂಗಗೊಂಡಿದೆ.
ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಉತ್ಸವ ಆಚರಿಸಿದ ಪ್ರಮುಖರ ವಿರುದ್ಧ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು.
-ಕೃಷ್ಣ ಭಾಜಪೇಯಿ, ಜಿಲ್ಲಾಧಿಕಾರಿ.