Advertisement
ಜಿಲ್ಲೆಯಲ್ಲಿ ನವೆಂಬರ್ ಮೊದಲ ವಾರ ಆಗಾಗ ಸುರಿದ ಮಳೆಗೆ ಕೆಲ ರೈತರು ತಕ್ಕಮಟ್ಟಿಗೆ ಜೋಳ, ಮೆಕ್ಕೆಜೋಳ, ಹುರುಳಿ, ಅಲಸಂದಿ ಸೇರಿದಂತೆ ಇತರೆ ಬೀಜಗಳನ್ನು ಬಿತ್ತನೆ ಮಾಡಿದ್ದರು. ಮೊಳಕೆಯೊಡೆದು ಬೆಳೆಯುತ್ತಿದ್ದ ಪೈರಿಗೆ ಮಳೆ ಅವಶ್ಯಕವಾಗಿದೆ. ಈಗ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬೆಳೆ ಬಾಡುತ್ತಿದ್ದು, ಹಿಂಗಾರಿನಲ್ಲಿ ಬಿತ್ತನೆ ಮಾಡಿರುವ ಬೀಜಗಳು ಮಣ್ಣು ಪಾಲಾಗುವ ಆತಂಕ ಎದುರಾಗಿದೆ.
Related Articles
Advertisement
ಮಳೆ ಬಾರದ್ದರಿಂದ ತೇವಾಂಶ ಕೊರತೆ ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ಚಳಿ ಬೀಳದ ಕಾರಣ ಬಿಸಿಲಿಗೆ ಬಾಡುತ್ತಿವೆ. ಇದರಿಂದ ಇಳುವರಿ ಬರುವುದಿರಲಿ ಜಾನುವಾರುಗಳಿಗೆ ಮೇವು ಸಹ ಆಗುತ್ತಿಲ್ಲ ಎಂಬ ನೋವು ಅನ್ನದಾತರದ್ದಾಗಿದೆ. ಮಳೆ ಸಮರ್ಪಕವಾಗಿದ್ದರೆ ಜೋಳದ ಮೇವು, ಶೇಂಗಾ, ಕಡಲೆ, ಹುರುಳಿ, ಗೋಧಿ ಹೊಟ್ಟನ್ನು ಸಂಗ್ರಹಿಸಿ ರೈತರು ವರ್ಷಪೂರ್ತಿ ದನಕರುಗಳಿಗೆ ಆಹಾರದ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದರು. ಆದರೆ, ಈ ವರ್ಷ ಮೇವಿನ ಕೊರತೆ ಎದುರಾಗಲಿದೆ ಎನ್ನುತ್ತಾರೆ ರೈತ ಕಿರಣಕುಮಾರ ಗಡಿಗೋಳ.
ನೀರಾವರಿ ಪ್ರದೇಶದಲ್ಲೂ ಬಿತ್ತನೆ ಕುಂಟಿತ: ನೀರಾವರಿ ಸೌಲಭ್ಯ ಹೊಂದಿರುವ ರೈತರು ಹಿಂಗಾರಿನಲ್ಲಿ ಅಷ್ಟಾಗಿ ಬಿತ್ತನೆ ಮಾಡಲು ಮನಸ್ಸು ಮಾಡುತ್ತಿಲ್ಲ. ಒಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆ ಶುರುವಾಗಿದ್ದರೆ, ಮತ್ತೂಂದೆಡೆ ಕೊಳವೆಬಾವಿಗಳಲ್ಲಿ ಈಗಾಗಲೇ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆಲ ಬೋರ್‌ವೆಲ್‌ಗಳು ಈಗಾಗಲೇ ಬತ್ತಿ ಹೋಗಿದ್ದರೆ, ಕೆಲ ಬೋರ್‌ವೆಲ್‌ಗಳಲ್ಲಿ ಸಣ್ಣಗೆ ನೀರು ಬರುತ್ತಿವೆ. ಹೀಗಾಗಿ, ನೀರಾವರಿ ಸೌಲಭ್ಯ ಇರುವ ರೈತರು ಬಿತ್ತನೆಗೆ ಹಿಂದೇಟು ಹಾಕುವಂತಾಗಿದೆ.
ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆಕೊರತೆಯಿಂದಾಗಿ ಈವರೆಗೆ ಶೇ.58ರಷ್ಟು ಬಿತ್ತನೆಯಾಗಿದೆ. ನೀರಾವರಿ ಸೌಲಭ್ಯ ಹೊಂದಿರುವ ರೈತರು ಬಿತ್ತನೆ ಕಾರ್ಯ
ನಡೆಸುತ್ತಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆಗೆ ಅಗತ್ಯ ಬೀಜ ದಾಸ್ತಾನಿದೆ.
*ಮಂಜುನಾಥ ಅಂತರವಳ್ಳಿ
ಜಂಟಿ ಕೃಷಿ ನಿರ್ದೇಶಕರು, ಹಾವೇರಿ