ಹಾನಗಲ್ಲ: ಸರ್ಕಾರದ ಮೇಲೆ ಜನಸಾಮಾನ್ಯರ ನಿರೀಕ್ಷೆಗಳು ಹೆಚ್ಚಿವೆ. ಇಂಥ ವ್ಯವಸ್ಥೆ ದಾರಿ ತಪ್ಪಿದ ಸಂದರ್ಭದಲ್ಲಿ ನಿವೃತ್ತ ನೌಕರರು ತಮ್ಮ ಅನುಭವಗಳಡಿ ಸಕಾಲಿಕವಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕೆಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಜನತಾ ಶಿಕ್ಷಣ ಸೌಹಾರ್ದ ಸಹಕಾರಿ ಸಂಸ್ಥೆ ಆವರಣದಲ್ಲಿರುವ ಕುಮಾರೇಶ್ವರ ಕಲಾಭವನದಲ್ಲಿ ನಡೆದ ತಾಲೂಕು ನಿವೃತ್ತ ನೌಕರರ ಸಂಘದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ತಾಲೂಕಿನ ಜನತೆ ವಿಶ್ವಾಸವಿಟ್ಟು ಪೂರ್ಣಾವಧಿ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಅವಕಾಶ ಬಳಕೆ ಮಾಡಿಕೊಂಡು ಆಡಳಿತ ಸುಧಾರಣೆಗೆ ಶ್ರಮ ವಹಿಸಿದ್ದೇನೆ. ಆಡಳಿತ ವ್ಯವಸ್ಥೆ ಸುಧಾರಿಸಿ, ಜನಸಾಮಾನ್ಯರ ನೋವು-ನಲಿವುಗಳಿಗೆ ತ್ವರಿತವಾಗಿ ಸ್ಪಂದನೆ ಸಿಗಬೇಕು ಎನ್ನುವ ತಮ್ಮ ಆಶಯಕ್ಕೆ ಪೂರಕವಾಗಿ ನಿವೃತ್ತ ನೌಕರರು ಸೂಕ್ತ ಸಲಹೆ, ಸೂಚನೆ ನೀಡಿದರೆ ಸ್ವೀಕರಿಸಿ, ಅನುಷ್ಠಾನಗೊಳಿಸಲು ಬದ್ಧನಿದ್ದೇನೆ ಎಂದು ಹೇಳಿದರು.
ಹಾನಗಲ್ಲ ಪುರಸಭೆ ವ್ಯಾಪ್ತಿಯಲ್ಲಿ ನಿವೃತ್ತ ನೌಕರರ ಸಂಘಕ್ಕೆ ಈಗಾಗಲೇ ಒದಗಿಸಿರುವ ನಿವೇಶನವನ್ನು ಸಂಘದ ಹೆಸರಿಗೆ ವರ್ಗಾಯಿಸಿಕೊಂಡರೆ ಕಟ್ಟಡ ನಿರ್ಮಾಣಕ್ಕೆ ಅನುದಾನ ದೊರಕಿಸುವ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಿ.ಎಸ್.ಬಡಿಗೇರ ಮಾತನಾಡಿ, 1980 ರಿಂದಲೇ ತಾಲೂಕಿನಲ್ಲಿ ನಿವೃತ್ತ ನೌಕರರ ಸಂಘ ಸಕ್ರಿಯವಾಗಿದೆ. ಸಂಘದ ಚಟುವಟಿಕೆಗಳಿಗೆ ಅನುಕೂಲವಾಗಲು ಸ್ವಂತ ಕಟ್ಟಡದ ಅವಶ್ಯಕತೆಯಿದೆ.
ಮುಂದಿನ ದಿನಗಳಲ್ಲಿ ನಿವೃತ್ತ ನೌಕರರ ಆಶೋತ್ತರಗಳಿಗೆ ಸಂಘ ಸ್ಪಂದಿಸಿ ಕೆಲಸ ಮಾಡಲಿದೆ. ಸರ್ಕಾರದ ನಿವೃತ್ತಿ ಸೌಲಭ್ಯಗಳು ದೊರಕುವಂತೆ ಕಾಳಜಿ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಎಚ್.ಎನ್.ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ಖುರ್ಷಿದ್ ಅಹ್ಮದ್ ಹುಲ್ಲತ್ತಿ, ಎಂ.ಕೆ.ಚಂದ್ರಗಿರಿ ಇದ್ದರು.