Advertisement

ನೀರಿಗಾಗಿ ಹಾಹಾವೇರಿ!

11:40 AM Mar 15, 2019 | |

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ನೀರು ಪೂರೈಸುವ ತುಂಗಭದ್ರಾ ನದಿ ಕಂಚಾರಗಟ್ಟಿ ಬಳಿ ಈಗಲೇ ಸಂಪೂರ್ಣ ಒಣಗಿದ್ದು ನಗರ ಜನರಿಗೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಲಿದೆ.

Advertisement

ನಗರಕ್ಕೆ ಕುಡಿಯುವ ನೀರು ಪೂರೈಸಲು ತುಂಗಭದ್ರಾ ನದಿಗೆ ಕಂಚಾರಗಟ್ಟಿ ಬಳಿ ಜಾಕ್‌ ವೆಲ್‌ ಇದ್ದು ಇಲ್ಲಿಂದ ನೀರು ಎತ್ತಿ ನಗರಕ್ಕೆ ಪೂರೈಸಲಾಗುತ್ತದೆ. ಎರಡು ತಿಂಗಳ ಹಿಂದೆಯೇ ನೀರಿನ ಹರಿವು ಕಡಿಮೆಯಾಗಿತ್ತು. ಆಗ ಪ್ರತಿ ವರ್ಷದಂತೆ ಈ ವರ್ಷವೂ 10 ಲಕ್ಷ ರೂ. ಖರ್ಚು ಮಾಡಿ ಮರಳಿನ ಚೀಲಗಳ ತಡೆಗೋಡೆ ನಿರ್ಮಿಸಿ ತಳಮಟ್ಟದಲ್ಲಿ ಹರಿಯುವ ನೀರನ್ನು ತಡೆಯಲಾಗಿತ್ತು. ಜತೆಗೆ ಮೈಲಾರ ಜಾತ್ರೆ ವೇಳೆ ಭದ್ರಾ ಜಲಾಶಯದಿಂದ ಬಿಟ್ಟ ನೀರನ್ನೂ ಹಿಡಿದಿಡಲಾಗಿತ್ತು. ಈಗ ಹಿಡಿದಿಟ್ಟ ನೀರೆಲ್ಲ ಖಾಲಿಯಾಗಿದ್ದು ಮತ್ತೆ ಭದ್ರಾ ಜಲಾಶಯದಿಂದ ನೀರು ಬಿಟ್ಟರಷ್ಟೇ ನಗರದ ಜನರಿಗೆ ನೀರು ಇಲ್ಲದಿದ್ದರೆ ನಗರದ ಜನರಿಗೆ ಕುಡಿಯಲು ನದಿ ನೀರು ಸಿಗದು. ಜನರು ಕುಡಿಯುವ ನೀರಿಗಾಗಿ ಕೊಳವೆಬಾವಿ, ಶುದ್ಧ ನೀರಿನ ಘಟಕಗಳಿಗೆ ಮೊರೆ ಹೋಗುವುದು ಅನಿವಾರ್ಯವಾಗಿದೆ.

ನಗರದಲ್ಲಿ ಜನರಿಗೆ ನದಿ ನೀರು ಪೂರೈಕೆಯಾಗದೆ ಇರುವುದರಿಂದ ಜನರು ಕುಡಿಯುವ ನೀರಿಗಾಗಿ ಶುದ್ಧ ನೀರಿನ ಘಟಕ ಅರಸುತ್ತ ಅಲೆದಾಡುತ್ತಿದ್ದಾರೆ. ನದಿಯಲ್ಲಿ ನೀರು ಇದ್ದಾಗಲೇ ‘ಮೋಟರ್‌ ಕೆಟ್ಟಿದೆ’, ‘ಪೈಪ್‌ ಒಡೆದಿದೆ’ ಎಂಬ ಸಿದ್ಧ ಉತ್ತರ ನೀಡುತ್ತಿದ್ದ ನಗರಸಭೆ, ಈಗ ನದಿಯಲ್ಲಿ ನೀರಿಲ್ಲ ಎಂದು ಹೇಳುತ್ತಿದ್ದು ನಗರದ ಜನತೆ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ದಿನದಿಂದ ದಿನಕ್ಕೆ ಅಂತರ್ಜಲ ಕುಸಿಯುತ್ತಿರುವುದರಿಂದ ಶುದ್ಧ ನೀರಿನ ಘಟಕಗಳಲ್ಲಿಯೂ ಸಾಕಷ್ಟು ನೀರು ಸಿಗುತ್ತಿಲ್ಲ. ಸಾರ್ವಜನಿಕ ಕೊಳವೆ ಬಾವಿಗಳಲ್ಲಿಯೂ ಸಮರ್ಪಕ ಪ್ರಮಾಣದಲ್ಲಿ ನೀರು ಸಿಗದೆ ಇರುವುದರಿಂದ ಜನರು ಕುಡಿಯುವ ನೀರಿನ ಜತೆಗೆ ಬಳಕೆ ನೀರಿಗೂ ಕೊಡಗಳನ್ನು ಹಿಡಿದು ಅಲೆದಾಡುವಂತಾಗಿದೆ. ಕೆಲವು ಕಡೆಗಳಲ್ಲಿ ಜನರು ಸರದಿಸಾಲಿನಲ್ಲಿ ಎರಡ್ಮೂರು ತಾಸು ಕಾದು ನಿಂತು ನೀರು ಒಯ್ಯುವ ಸ್ಥಿತಿ ಎದುರಾಗಿದೆ.

ತುಂಬದ ಹೆಗ್ಗೇರಿ ತಗ್ಗದ ದಾಹ: ನಗರದ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾದ ನಗರದ ಹೊರವಲಯದಲ್ಲಿರುವ ಹೆಗ್ಗೇರಿ ಕೆರೆಗೆ ನೀರು ತುಂಬಿಸುವುದನ್ನೇ ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿರುವ ಜನಪ್ರತಿನಿಧಿಗಳು, ವರ್ಷಪೂರ್ತಿ ಹೆಗ್ಗೇರಿ ಕೆರೆ ತುಂಬಿಸುವ ಬಗ್ಗೆ ಮಾತನಾಡುತ್ತಾರೆ. ಆದರೆ, ವಾಸ್ತವದಲ್ಲಿ ಹೆಗ್ಗೆರಿ ಕೆರೆ ತುಂಬಿಸುವ ಪ್ರಾಮಾಣಿಕ ಪ್ರಯತ್ನ ಮಾತ್ರ
ಮಾಡುವುದೇ ಇಲ್ಲ. ಹೀಗಾಗಿ ನಗರದ ಜನರು ಕುಡಿಯುವ ನೀರಿಗಾಗಿ ಪರಿತಪಿಸುವುದು ತಪ್ಪುತ್ತಿಲ್ಲ.

Advertisement

ಸಮಸ್ಯಾತ್ಮಕ ಪ್ರದೇಶಗಳು: ಜಿಲ್ಲಾ ಕೇಂದ್ರ ಹಾವೇರಿ ನಗರದಲ್ಲಿ ಉದಯ ನಗರ, ನಾಗೇಂದ್ರಮಟ್ಟಿ, ಶಾಂತಿನಗರ, ವಿಜಯನಗರ, ಹೊಸನಗರ, ಶಿವಲಿಂಗೇಶ್ವರ ನಗರ, ದಾನೇಶ್ವರ ನಗರ, ಕುಂಬಾರ ಓಣಿ, ಮೆಹಬೂಬ್‌ ನಗರ, ಸಿದ್ಧಾರೂಢ ಕಾಲೋನಿ, ಮಾರುತಿ ನಗರ, ಅಶ್ವಿ‌ನಿ ನಗರ, ನೇತಾಜಿ ನಗರ, ದೇಸಾಯಿ ಗಲ್ಲಿ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ತೀವ್ರ ನೀರಿನ ಸಮಸ್ಯೆ ಉಲ್ಬಣಿದ್ದು, ಇಲ್ಲಿಯ ಜನರು ನೀರಿಗಾಗಿ ಒಂದು ವಾರ್ಡ್‌ನಿಂದ ಇನ್ನೊಂದು ವಾರ್ಡ್‌ಗೆ ಅಲೆದಾಡುವಂತಾಗಿದೆ. ನಗರದ ನೀರಿನ ಸಮಸ್ಯೆಗೆ ಪರಿಹಾರವೆಂದರೆ ಅಕಾಲಿಕ ದೊಡ್ಡ ಮಳೆ ಬರಬೇಕು, ಇಲ್ಲವೇ ಭದ್ರಾ ಜಲಾಶಯದಿಂದ ನೀರು ಬಿಡಿಸಿಕೊಳ್ಳಬೇಕು. ಇಲ್ಲದಿದ್ದರೆ ಲೋಕಸಭೆ ಚುನಾವಣೆ ವೇಳೆ ಮತ
ಕೇಳಲು ಮನೆ ಮನೆಗೆ ಬಂದವರು ಜನರ ಆಕ್ರೋಶಕ್ಕೆ ಗುರಿಯಾಗುವುದು ಅನಿವಾರ್ಯವಾಗಲಿದೆ.

ತುಂಗಭದ್ರಾ ನದಿಯಲ್ಲಿ ನೀರು ಪೂರ್ಣಖಾಲಿಯಾಗುವ ಹಂತದಲ್ಲಿದ್ದು,ಸಿಕ್ಕಷ್ಟು ನೀರು ಪೂರೈಸಲು ಕ್ರಮವಹಿಸಲಾಗುತ್ತಿದೆ. ಭದ್ರಾ ಜಲಾಶಯದಿಂದ ನೀರು ಬಿಡುವಂತೆ ಜಿಲ್ಲಾಧಿಕಾರಿಯವರು ಕೋರಿದ್ದು, ಜಲಾಶಯದ ನೀರು ಬಂದರೆ ನೀರಿನ ಸಮಸ್ಯೆ ತಕ್ಕಮಟ್ಟಿಗೆ ಬಗೆಹರಿಯಲಿದೆ.
 ಬಸವರಾಜ ಜಿದ್ದಿ,
 ಪೌರಾಯುಕ್ತರು, ನಗರಸಭೆ

ಜನರಿಗೆ ಕುಡಿಯುವ ನೀರು ಪೂರೈಸುವಲ್ಲಿ ನಗರಸಭೆ ಅಧಿ ಕಾರಿಗಳು, ಜನಪ್ರತಿನಿಧಿಗಳು ಯಾವತ್ತೂ ಕಾಳಜಿವಹಿಸಿಲ್ಲ. ಪ್ರತಿವರ್ಷ ನಗರದ ಜನ ನೀರಿಗಾಗಿ ಪರದಾಡುವುದು ಮಾಮೂಲಾಗಿದೆ. ಪೈಪ್‌ ಒಡೆಯುವುದು, ಮೋಟಾರ್‌ ಕೆಡುವುದು, ಪ್ರತಿವರ್ಷ ಲಕ್ಷಾಂತರ ರೂ. ‘ತುರ್ತು ಕೆಲಸ’ವೆಂದು ಖರ್ಚು ಹಾಕುವುದು ಸಹ ಸಾಮಾನ್ಯ ಎಂಬಂತಾಗಿದೆ. 10-15ವರ್ಷದಲ್ಲಿ ಮೊಟಾರ್‌, ಪೈಪ್‌ಲೈನ್‌ ದುರಸ್ತಿಗಾಗಿ ಕೋಟ್ಯಂತರ ರೂ. ವ್ಯಯಿಸಿದ್ದು, ಈ ಹಣದಲ್ಲಿಯೇ ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವ ಯೋಜನೆ ಅನುಷ್ಠಾನಗೊಳಿಸಬಹುದಿತ್ತು. 
 ರಮೇಶ್‌, ನಾಗರಿಕ

Advertisement

Udayavani is now on Telegram. Click here to join our channel and stay updated with the latest news.

Next