Advertisement

Haveri: ಕಾಂತರಾಜು ಆಯೋಗ ವರದಿ ಶಿಫಾರಸು ಮಾಡಿ

06:07 PM Nov 23, 2023 | Team Udayavani |

ಹಾವೇರಿ: ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಕಾಂತರಾಜು ಆಯೋಗದ ವರದಿ ಮತ್ತು ಸದಾಶಿವ ಆಯೋಗದ ವರದಿಯನ್ನು
ವಿಧಾನಸಭೆಯಲ್ಲಿ ಮಂಡಿಸಿ, ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಇಲ್ಲದಿದ್ದರೆ ಖುರ್ಚಿ ಖಾಲಿ ಮಾಡಿ ಎಂದು ಆಗ್ರಹಿಸಿ ಸಾಮಾಜಿಕ ನ್ಯಾಯಕ್ಕಾಗಿ ಬಿಎಸ್‌ಪಿ ಆಂದೋಲನ ನಡೆಸಿ ಸ್ಥಳೀಯ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ ಮಾತನಾಡಿ, ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿ
ಆಗಿದ್ದಾಗ ಹಿಂದುಳಿದ ವರ್ಗಗಳ ಸಾಮಾಜಿಕ- ಆರ್ಥಿಕ-ಶೈಕ್ಷಣಿಕ ಸ್ಥಿತಿಗತಿ ಕುರಿತು ಅಧ್ಯಯನ ಮತ್ತು ಜಾತಿವಾರು ಜನಗಣತಿ ನಡೆಸಲು ನೇಮಿಸಿದ್ದ ಕಾಂತರಾಜು ಆಯೋಗವು 2015ರಲ್ಲಿ ತನ್ನ ವರದಿಯನ್ನು ಸಿದ್ಧಗೊಳಿಸಿತು. ಈ ವರದಿಯು ಸೋರಿಕೆಯಾದಾಗ ಎಸ್‌ಸಿ/ಎಸ್‌ಟಿಗಳ ಜನಸಂಖ್ಯೆಯು 1 ಕೋಟಿ 50 ಲಕ್ಷ, ಮುಸ್ಲಿಮರು 85ಲಕ್ಷ, ಲಿಂಗಾಯತರು 60 ಲಕ್ಷ ಮತ್ತು ಒಕ್ಕಲಿಗರು 50 ಲಕ್ಷ ಇರುವುದಾಗಿ ತಿಳಿಯಿತು.

ಈ ವರದಿ ಜಾರಿಯಾದರೆ ತಾವು ಇದುವರೆಗೂ ಅನುಭವಿಸಿಕೊಂಡು ಬರುತ್ತಿರುವ ಸವಲತ್ತು, ಅಧಿ ಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಸಹಜವಾಗಿ ಅಳುಕಿದ ಲಿಂಗಾಯತ-ಒಕ್ಕಲಿಗರು ಈ ವರದಿಯು ಬಹಿರಂಗಗೊಳ್ಳುವುದನ್ನು
ತಡೆದರು. ನಂತರ ಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳಾದ ಮೇಲೆ ಸಾಮಾಜಿಕ,
ಆರ್ಥಿಕ, ಶೈಕ್ಷಣಿಕ ಆಧಾರದ ಕಾಂತರಾಜು ಆಯೋಗದ ಜಾತಿಗಣತಿ ವರದಿಯ ಜಾರಿಗೆ ಮುಂದಾಗಲಿಲ್ಲ.

2023ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂತರಾಜ್‌ ವರದಿಯನ್ನು ಮತ್ತು ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಿಯೇ ತೀರುತ್ತೇವೆಂದು ಆಶ್ವಾಸನೆ ನೀಡಿ ಅಧಿಕಾರ ಹಿಡಿದ ಕಾಂಗ್ರೆಸ್‌ ಸರ್ಕಾರವು ಇದೀಗ 6 ತಿಂಗಳಾದರೂ ಸಹ ಈ ಬಗ್ಗೆ ಏನೂ ಮಾತಾಡುತ್ತಿಲ್ಲ. ರಾಜ್ಯದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿರುವ ಎಸ್‌ಸಿ/ಎಸ್‌ಟಿಗಳಾಗಲಿ, ಮುಸ್ಲಿಮರಾಗಲಿ ಇಲ್ಲಿ ತನಕ ಮುಖ್ಯಮಂತ್ರಿಗಳಾಗಿಲ್ಲ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗಳ ಪೈಕಿ ಮಾದಿಗ ಮತ್ತು ಮಾದಿಗ ಸಂಬಂಧಿ ತ 49 ಜಾತಿಗಳ
ಜನಸಂಖ್ಯೆ ಹೆಚ್ಚಾಗಿರುತ್ತದೆ. ಈ ಸಮಾಜಕ್ಕೆ ಶಿಕ್ಷಣ, ಸರ್ಕಾರಿ ಸೇವೆ ಮತ್ತು ರಾಜಕೀಯ ಮತ್ತಿತರರ ಎಲ್ಲ ರಂಗಗಳಲ್ಲಿ ಸೂಕ್ತ ಪ್ರಾತಿನಿಧ್ಯ ಇಲ್ಲದೆ ತೀರ ಹಿಂದುಳಿದಿವೆ.

2005ರಲ್ಲಿ ರಚನೆಯಾದ ನ್ಯಾಯಮೂರ್ತಿ ಸದಾಶಿವ ಆಯೋಗವು ಸತತವಾಗಿ 7 ವರ್ಷ ಅಧ್ಯಯನ ನಡೆಸಿ 2012ರಲ್ಲಿ ಬಿಜೆಪಿಯ ಸದಾನಂದಗೌಡರ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತು. ಆದರೆ ಇದೂವರೆಗೂ ಸದಾಶಿವ ಆಯೋಗದ ವರದಿಯನ್ನು
ಸರ್ಕಾರಗಳು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಈ ಹಿನ್ನಲೆಯಲ್ಲಿ ಸಂವಿಧಾನದ ಅಶಯದಂತೆ ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಕಾಂತರಾಜು ಆಯೋಗದ ವರದಿ ಮತ್ತು ಸದಾಶಿವ ಆಯೋಗದ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

Advertisement

ಈ ಸಂದರ್ಭದಲ್ಲಿ ಬಿಎಸ್‌ಪಿ ಜಿಲ್ಲಾ ಉಪಾಧ್ಯಕ್ಷ ಎಂ.ಕೆ. ಮಕಬೂಲ, ಪ್ರಧಾನ ಕಾರ್ಯದರ್ಶಿ ಬಸವರಾಜ ಹಾದಿ, ಪ್ರಮುಖರಾದ
ವಿಜಯಕುಮಾರ ಬೆನಕವಾಡಿ, ಎಸ್‌.ಎಸ್‌. ಹನಗೋಡಿಮಠ, ವಿಜಯಕುಮಾರ ವಿರಕ್ತಮಠ, ಬಸೀರಹ್ಮದ ಅಗಡಿ, ಶ್ರೀಕಾಂತ ಮರೆಣ್ಣನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next