ಗಂಗಾವತಿ: ರಾಜ್ಯ ಸರಕಾರ ಸೆ. 15ರಂದು ವಿಶ್ವ ಪ್ರಜಾಪ್ರಭುತ್ವ ದಿನದ ಸಂದರ್ಭದಲ್ಲಿ ಶಾಲೆಯ ಪ್ರಾರ್ಥನೆ ಸಂದರ್ಭದಲ್ಲಿ
ಸಂವಿಧಾನದ ಪೀಠಿಕೆ ಓದಿಸುವ ಯೋಜನೆ ಅನುಷ್ಠಾನ ಮಾಡಲಿದ್ದು, ಈ ಕಾರ್ಯವನ್ನು 2020ರಲ್ಲೇ ನಗರದ ಕೊಲ್ಲಿನಾಗೇಶ್ವರರಾವ್ ಸರಕಾರಿ ಮಹಾವಿದ್ಯಾಲಯದಲ್ಲಿ ಆರಂಭ ಮಾಡಲಾಯಿತು.
ಭಾರತದ ಸಂವಿಧಾನದ ಕುರಿತು ಜಾಗೃತಿ ಮೂಡಿಸಲು ಹಾಗೂ ನಾಡಿನಲ್ಲಿ ಸಹಬಾಳ್ವೆಗೆ ಅವಕಾಶ ಕೊಡುತ್ತ, ಪರಸ್ಪರರನ್ನು ಸಮಾನತೆಯ ನೆಲೆಯಲ್ಲಿ ಬೆಸೆಯುವ ಪ್ರಯತ್ನದ ಭಾಗವಾಗಿ ರಾಜ್ಯ ಸರ್ಕಾರ ಸಂವಿಧಾನದ ಪೂರ್ವ ಪೀಠಿಕೆಯನ್ನು ಪಠಿಸುವುದರ ಮೂಲಕ ಸೆ. 15ನ್ನು ಪ್ರಜಾಪ್ರಭುತ್ವ ದಿನ ಆಚರಿಸಬೇಕೆಂದು ಆದೇಶಿಸಿದೆ.
2020ರ ಗಣರಾಜ್ಯೋತ್ಸವ ದಿನದಂದು ಆಗ ರಾಜ್ಯಶಾಸ್ತ್ರ ವಿಭಾಗದ ಪ್ರಭಾರ ವಹಿಸಿಕೊಂಡಿದ್ದ ಪ್ರೊ| ಕರಿಗೂಳಿಯವರು ಇಡೀ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಭಾರತ ಸಂವಿಧಾನದ ಪೂರ್ವ ಪೀಠಿಕೆ ಪಠಿಸಲು ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಒಂದು ವಾರದವರೆಗೂ ಸೂಕ್ತ ಮಾರ್ಗದರ್ಶನ ನೀಡಿದರು. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪೂರ್ವ ಪೀಠಿಕೆ ಓದಿಸಿದ್ದರು.
ದೂರದೃಷ್ಟಿಯ ಹಾಗೂ ರಾಜ್ಯಕ್ಕೆ ಮಾದರಿಯ ಕಾರ್ಯವನ್ನು ಗಂಗಾವತಿ ಕಾಲೇಜಿನಲ್ಲಿ ಮಾಡುವ ಮೂಲಕ ಸಂವಿಧಾನದ ಪೀಠಿಕೆಯನ್ನು ಎಲ್ಲ ವಿದ್ಯಾರ್ಥಿಗಳಿಗೆ ಪರಿಚಯ ಮಾಡಲಾಗಿದೆ. ಅಲ್ಲದೇ ಪತ್ರಿಕೋದ್ಯಮ ವಿದ್ಯಾರ್ಥಿನಿಯಾಗಿದ್ದ ಕೆ. ಚೈತ್ರಾ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜಿಗೆ ಕಾಣಿಕೆಯಾಗಿ ಪೂರ್ವಪೀಠಿಕೆಯ ಚಿತ್ರಪಟವನ್ನು ಕೊಡುಗೆಯಾಗಿ ನೀಡಿದ್ದರು.
ರಾಜ್ಯಶಾಸ್ತ್ರ ವಿಭಾಗದಲ್ಲಿ ಕಾಯಂ ಪ್ರಾಧ್ಯಾಪಕರು ಇಲ್ಲದ್ದರಿಂದ ಅಂದಿನ ಪ್ರಾಚಾರ್ಯರು ನನಗೆ ತಾತ್ಕಾಲಿಕವಾಗಿ ಪ್ರಭಾರ ವಹಿಸಿಕೊಳ್ಳಲು ಸೂಚಿಸಿದ್ದರು. ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಏನಾದರೂ ಸಾರ್ಥಕ ಮತ್ತು ವಿಶಿಷ್ಟ ಕಾರ್ಯಕ್ರಮ ಮಾಡಿಸಿ ನಾವೆಲ್ಲರೂ ಒಂದೇ ಎಂಬ ಸಮಾನತೆ-ಭಾವನೆ ಮೂಡಿಸಿ ಸಾಮಾಜಿಕ ಸಂದೇಶ ಕೊಡುತ್ತ ರಾಜ್ಯಶಾಸ್ತ್ರ
ವಿಭಾಗದ ಘನತೆ ಹೆಚ್ಚಿಸಬೇಕೆಂದು ಸಂವಿಧಾನ ಪೀಠಿಕೆ ಕಂಠಪಾಠ ಮಾಡಿ ಹೇಳುವ ಕಾರ್ಯಕ್ರಮ ನಡೆಸಲಾಯಿತು.ಇದರಿಂದ ಪದವಿ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳು ಸ್ಪಂದಿಸಿ ಸಂವಿಧಾನದ ಪೀಠಿಕೆ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ
ಹೇಳುವ ಮೂಲಕ ಕಿರಿಯ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದರು.
ಪ್ರೊ| ಕರಿಗೂಳಿ