Advertisement

Haveri: ನೈತಿಕ ಪೊಲೀಸ್‌ಗಿರಿ… ಆರೋಪಿಗಳ ವಿರುದ್ಧ ಅತ್ಯಾಚಾರದ ಆರೋಪ

09:25 AM Jan 12, 2024 | Team Udayavani |

ಹಾವೇರಿ: ಖಾಸಗಿ ಲಾಡ್ಜ್ ನಲ್ಲಿ ತಂಗಿದ್ದ ಭಿನ್ನಕೋಮಿನ ಜೋಡಿ ಮೇಲೆ ಹಿಗ್ಗಾಮುಗ್ಗಾ ಥಳಿಸಿ ನೈತಿಕ ಪೊಲೀಸ್‌ಗಿರಿ ಮೆರೆದಿದ್ದ ಯುವಕರ ಗುಂಪು, ಬಳಿಕ ಯುವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪ ಕೇಳಿ ಬಂದಿದೆ.

Advertisement

ಹಾನಗಲ್ಲ ಸಮೀಪದ ಲಾಡ್ಜ್ನಲ್ಲಿ ತಂಗಿದ್ದ ಶಿರಸಿ ಮೂಲದ ಯುವಕ ಹಾಗೂ ಯುವತಿ ಮೇಲೆ 7 ಯುವಕರ ಗುಂಪು ಹಲ್ಲೆ ಮಾಡಿತ್ತು. “ನನ್ನ ಮೇಲೆ ಗ್ಯಾಂಗ್‌ ರೇಪ್‌ ಆಗಿದೆ’ ಎಂದು ಯುವತಿ ಹೇಳಿರುವ ವೀಡಿಯೋ ವೈರಲ್‌ ಆಗಿದೆ. ಯುವಕರ ಗುಂಪು ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಅದರ ವೀಡಿಯೋ ಇದೆ ಎಂದು ಸಂತ್ರಸ್ತೆಯ ಪತಿಯೂ ಹೇಳಿದ್ದಾರೆ.

ಪೊಲೀಸರು ಲಾಡ್ಜ್ನ ಸಿಸಿಕೆಮರಾ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಸಂತ್ರಸ್ತೆಯನ್ನು ಲಾಡ್ಜ್ನಿಂದ ಎಳೆದು ತಂದ ತಂಡ, ಆಕೆ ಹಾಗೂ ಯುವಕನನ್ನು ಬೈಕ್‌ನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿರುವುದು ದಾಖಲಾಗಿದೆ.

ಪೊಲೀಸರು ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡು ಗುರುವಾರ ಹಾನಗಲ್ಲ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ. ಸಂತ್ರಸ್ತೆ ನ್ಯಾಯಾ ಧೀಶರ ಎದುರು ಘಟನೆ ಕುರಿತು ವಿವರಿಸಿದ್ದಾಳೆ.

7 ಜನರ ವಿರುದ್ಧ ದೂರು ದಾಖಲು
ಸಾಮೂಹಿಕ ಅತ್ಯಾಚಾರ ಮಾಡಿರುವ ಕುರಿತು ಸಂತ್ರಸ್ತೆಯು ನ್ಯಾಯಾ ಧೀಶರ ಎದುರು ನೀಡಿರುವ ಹೇಳಿಕೆ ಆಧರಿಸಿ ಹಾನಗಲ್ಲ ಪೊಲೀಸ್‌ ಠಾಣೆಯಲ್ಲಿ 7 ಮಂದಿ ವಿರುದ್ಧ ದೂರು ದಾಖಲಾಗಿದೆ. ಈ ಪೈಕಿ ಮೂವರನ್ನು ಬಂಧಿಸಿದ್ದೇವೆ. ಒಬ್ಬ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಎಸ್ಪಿ ಅಂಶುಕುಮಾರ್‌ ತಿಳಿಸಿದ್ದಾರೆ.

Advertisement

ಕಠಿನ ಕ್ರಮ: ಆಲೋಕ್‌ ಮೋಹನ್
ಬೆಂಗಳೂರು: ರಾಜ್ಯದಲ್ಲಿ ನೈತಿಕ ಪೊಲೀಸ್‌ಗಿರಿಗೆ ಅವಕಾಶ ಇಲ್ಲ. ಒಂದು ವೇಳೆ ಅಂತಹ ಘಟನೆ ನಡೆದರೆ ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಆಲೋಕ್‌ ಮೋಹನ್‌ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಹಾವೇರಿಯಲ್ಲಿ ನಡೆದ ನೈತಿಕ ಪೊಲೀಸ್‌ ಗಿರಿ ಪ್ರಕರಣದಲ್ಲಿ ಈಗಾಗಲೇ ಆರೋಪಿಗಳನ್ನು ಬಂಧಿಸಲಾಗಿದೆ. ಇಂಥ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮ ಜಿಲ್ಲಾ ಹಾಗೂ ವಿಭಾಗದ ಘಟಕದ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಇನ್ಮುಂದೆ ಯಾರೇ ನೈತಿಕ ಪೊಲೀಸ್‌ಗಿರಿಗೆ ಮುಂದಾದರೂ ಕಠಿನ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಎಲ್ಲರಿಗೂ ಒಂದೇ ಎಂದು ಎಚ್ಚರಿಸಿದ್ದಾರೆ.

ಬಾಂಬ್‌ ಬೆದರಿಕೆ ಗಂಭೀರ ಪರಿಗಣನೆ
ಇ ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಕರೆಗಳು ಬರುತ್ತಿರು ವುದನ್ನು ಗಂಭೀರವಾಗಿ ಪರಿಗಣಿಸ ಲಾಗಿದ್ದು, ತಾಂತ್ರಿಕ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಹಾನಗಲ್ಲ ಘಟನೆಗೆ ಸಂಬಂಧಿ ಸಿ ತಲೆಮರೆಸಿಕೊಂಡವರ ಬಂಧನಕ್ಕೆ ತಂಡ ರಚಿಸಲಾಗಿದೆ. ಯುವತಿ ಸಾಮೂಹಿಕ ಅತ್ಯಾಚಾರದ ಬಗ್ಗೆ ನಮ್ಮಲ್ಲಿ ಆರೋಪ ಮಾಡಿಲ್ಲ. ವೈದ್ಯಕೀಯ ಪರೀಕ್ಷೆ ಕೂಡ ಮಾಡಿಸಲಾಗಿದೆ. ನ್ಯಾಯಾಧಿಧೀಶರ ಎದುರು ಏನು ಹೇಳುತ್ತಾರೋ ಅದರ ಮೇಲೆ ತನಿಖೆ ಮಾಡುತ್ತೇವೆ.
-ಅಂಶುಕುಮಾರ, ಎಸ್ಪಿ, ಹಾವೇರಿ

ನೈತಿಕ ಪೊಲೀಸ್‌ಗಿರಿ ಖಂಡನೀಯ. ಯುವತಿ ಮೇಲೆ ಹಲ್ಲೆ ನಡೆಸಿ, ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ತೆರಳಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಪುಂಡರು ರಾಜಾರೋಷವಾಗಿ ನೈತಿಕ ಪೊಲೀಸ್‌ಗಿರಿ ಮಾಡಲು ಬಿಟ್ಟಿರುವುದನ್ನು ನೋಡಿದರೆ ರಾಜ್ಯದಲ್ಲಿ ಸರಕಾರ ಜೀವಂತ ಇದೆಯೋ ಇಲ್ಲವೋ ಎಂಬ ಸಂಶಯ ಮೂಡಿದೆ.
-ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next