Advertisement

ವಿಧಾನ ಕದನ: ರಂಗೇರಿದ ರಣಕಣ-ಮೈಗೊಡವಿ ನಿಂತ ರಾಜಕೀಯ ಪಕ್ಷಗಳು

06:31 PM Mar 31, 2023 | Team Udayavani |

ಹಾವೇರಿ: ರಾಜ್ಯ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮೂಹೂರ್ತ ನಿಗದಿ ಮಾಡುತ್ತಿದ್ದಂತೆ ಜಿಲ್ಲೆಯ ರಾಜಕೀಯ ಪಕ್ಷಗಳು ಮೈಕೊಡವಿ ನಿಂತಿದ್ದು, ಚುನಾವಣಾ ರಣಕಣ ರಂಗೇರುವಂತೆ ಮಾಡಿದೆ.

Advertisement

ಈಗಾಗಲೇ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಿಗೆ ಒಂದೂವರೆ ತಿಂಗಳು ಮೊದಲೇ ತನ್ನ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಚುನಾವಣಾ ರಣತಂತ್ರ ಹಾಗೂ ಪ್ರಚಾರದಲ್ಲಿ ಒಂದು ಹೆಜ್ಜೆ ಮುಂದಿರುವ ಕಾಂಗ್ರೆಸ್‌ ಪಕ್ಷ ಜಿಲ್ಲೆಯಲ್ಲಿ ಬಿಜೆಪಿಗೆ ಸಡ್ಡು ಹೊಡೆಯಲು ಮುಂದಾಗಿದೆ.

ಮತ್ತೊಮ್ಮೆ ಜಿಲ್ಲೆಯನ್ನು ಬಿಜೆಪಿ ವಶ ಮಾಡಿಕೊಳ್ಳುವ ತವಕದಲ್ಲಿರುವ ಆಡಳಿತಾರೂಢ ಬಿಜೆಪಿ ಜಿಲ್ಲೆಯ 6 ಕ್ಷೇತ್ರಗಳಿಗೆ ಇನ್ನೂ ಅಭ್ಯರ್ಥಿಗಳನ್ನು ಘೋಷಿಸದೇ ಇದ್ದರೂ ಕಾಂಗ್ರೆಸ್‌, ಜೆಡಿಎಸ್‌ ಅಭ್ಯರ್ಥಿಗಳಿಗೆ ಠಕ್ಕರ್‌ ಕೊಡಲು ಇನ್ನಿಲ್ಲದ ರಾಜಕೀಯ ತಂತ್ರಗಾರಿಕೆ ಹೆಣೆಯುತ್ತಿದೆ. ಬಿಜೆಪಿ ಅಭ್ಯರ್ಥಿಗಳ ಘೋಷಣೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ಇದರ ನಡುವೆ ಇತ್ತೀಚೆಗಷ್ಟೇ ಕಾಂಗ್ರೆಸ್‌ ಪಕ್ಷ ಜಿಲ್ಲೆಯ ಹಾವೇರಿ, ರಾಣಿಬೆನ್ನೂರು, ಬ್ಯಾಡಗಿ, ಹಾನಗಲ್ಲ ಹಾಗೂ ಹಿರೇಕೆರೂರು ಸೇರಿ 5 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಅಧಿಕೃತ ಅಭ್ಯರ್ಥಿಗಳಾಗಿ ಘೋಷಿಸಿದೆ.

ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರಕ್ಕೆ ಈವರೆಗೂ ಕಾಂಗ್ರೆಸ್‌ ಅಭ್ಯರ್ಥಿಯನ್ನು ಘೋಷಿಸದೇ ಬಾಕಿ ಉಳಿಸಿಕೊಂಡಿರುವುದು ರಾಜಕೀಯವಾಗಿ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಬಾರಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕ್ಷೇತ್ರದಲ್ಲಿಯೇ ಕಟ್ಟಿಹಾಕಲು ಕಾಂಗ್ರೆಸ್‌ ರಣತಂತ್ರಕ್ಕೆ ಮುಂದಾಗಿದ್ದು, ಈ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಯಾಗುತ್ತಾರೆ ಎಂಬ ಯಕ್ಷಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಅದರಲ್ಲೂ ಈ ಬಾರಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತಿಸುತ್ತಿರುವ ಕಾಂಗ್ರೆಸ್‌ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೆ ಮಣೆ ಹಾಕುತ್ತಿದೆ. ಅವರ ಜೊತೆಗೆ ಕ್ಷೇತ್ರದ ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಹಾಗೂ ಶಶಿಧರ ಯಲಿಗಾರ ಹೆಸರು ಚರ್ಚಿಸಲಾಗುತ್ತಿದ್ದು, ಯಾರು ಸಿಎಂ ಬಸವರಾಜ ಬೊಮ್ಮಾಯಿ ಅವರ ಪ್ರತಿಸ್ಪರ್ಧಿಯಾಗುತ್ತಾರೆ ಎಂಬ ಚರ್ಚೆ ಕ್ಷೇತ್ರದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

Advertisement

ಜಿಲ್ಲೆ ಬಿಜೆಪಿ ಭದ್ರಕೋಟೆ: ಈ ಹಿಂದೆ ಕಾಂಗ್ರೆಸ್‌ ಭದ್ರಕೋಟೆಯಾಗಿದ್ದ ಹಾವೇರಿ ಜಿಲ್ಲೆಯಲ್ಲಿ ಈಗ ಬಿಜೆಪಿ ಪ್ರಾಬಲ್ಯ ಸಾಧಿ ಸಿ ಜಿಲ್ಲೆಯನ್ನು ಬಿಜೆಪಿ ಭದ್ರಕೋಟೆಯಾಗಿ ಮಾಡಿಕೊಂಡಿದೆ. ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರಾನೇರ ಸ್ಪರ್ಧೆಯಿದ್ದು, ಜೆಡಿಎಸ್‌ ಆಟಕ್ಕುಂಟು ಲೆಕ್ಕಕ್ಕಿಲ್ಲ
ಎಂಬಂತಿದೆ. ಪ್ರತಿ ಚುನಾವಣೆಯಲ್ಲೂ ಬಿಜೆಪಿ, ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ನಡೆಯುತ್ತಿದ್ದು, ಈ ಬಾರಿ ಸಹ ಬಿಜೆಪಿ, ಕಾಂಗ್ರೆಸ್‌ ನಡುವೆ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಾಗಿದ್ದರಿಂದ ಬಿಜೆಪಿ ತನ್ನ ಪ್ರಾಬಲ್ಯ ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ಇದರ ನಡುವೆ ಈವರೆಗೂ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸದೇ ಇರುವುದು ಸಾಕಷ್ಟು ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದೆ.

ಅದರಲ್ಲೂ ಜಿಲ್ಲೆಯ ಹಾವೇರಿ, ಹಾನಗಲ್ಲ, ರಾಣಿಬೆನ್ನೂರ ಹಾಗೂ ಬ್ಯಾಡಗಿ ಕ್ಷೇತ್ರಗಳಲ್ಲಿ ಹೆಚ್ಚಿನ ಆಕಾಂಕ್ಷಿಗಳು ಇರುವುದರಿಂದ ಯಾರಿಗೆ ಮಣೆ ಹಾಕಿ ಟಿಕೆಟ್‌ ಘೋಷಣೆ ಮಾಡಲಾಗುತ್ತದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.

ಮತ ಬೇಟೆಗೆ ಪೈಪೋಟಿ
ಆಡಳಿತಾರೂಢ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ವಿವಿಧ ಮೋರ್ಚಾಗಳ ಜಿಲ್ಲಾ ಸಮಾವೇಶ ಮೂಲಕ ಮೊದಲ ಹಂತದಲ್ಲಿ ಮತದಾರರನ್ನು ತಲುಪಿದೆ. ಕಾಂಗ್ರೆಸ್‌ ಕೂಡ ಪ್ರಜಾಧ್ವನಿ ಸಮಾವೇಶಗಳ ಮೂಲಕ ಜಿಲ್ಲೆಯಲ್ಲಿ ಚುನಾವಣೆ ಕಹಳೆ ಮೊಳಗಿಸುವ ಮೂಲಕ ಮತ ಬೇಟೆಗೆ ಮುಂದಾಗಿದೆ. ಇನ್ನೂ ಜೆಡಿಎಸ್‌ ಜಿಲ್ಲೆಯಲ್ಲಿ ಜನತಾ ಜಲಧಾರೆ, ಪಂಚರತ್ನ ಯಾತ್ರೆ ಮೂಲಕ ಮತದಾರರನ್ನು ತಲುಪಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅಬ್ಬರದ ಪ್ರಚಾರಗಳಿಗೆ ಜಿಲ್ಲೆ
ಸಾಕ್ಷಿಯಾಗಲಿದೆ.

ಪಕ್ಷಗಳ ಸದ್ಯದ ಬಲಾಬಲ
ಒಟ್ಟು ಕ್ಷೇತ್ರಗಳು:6
ಬಿಜೆಪಿ 5
ಕಾಂಗ್ರೆಸ್ 1

*ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next