ಹಾವೇರಿ: ಕೋವಿಡ್ ಲಾಕ್‌ಡೌನ್‌ನ ಕರಾಳ ಛಾಯೆ ಹಣ್ಣುಗಳ ರಾಜ ಎನಿಸಿದ ಮಾವಿನಹಣ್ಣಿಗೂ ಬಿಟ್ಟಿಲ್ಲ. ಮಾವು ವ್ಯಾಪಾರದ ಮೇಲೆಯೂ ಕೊರೊನಾ ಕರಿನೆರಳು ಬಿದ್ದಿದ್ದು, ವ್ಯಾಪಾರ ಗಣನೀಯ ಪ್ರಮಾಣದಲ್ಲಿ ಕ್ಷೀಣಿಸಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಮಳೆ, ಗಾಳಿ ಕಾರಣದಿಂದಾಗಿ ಮಾವು ಇಳುವರಿ ಕಡಿಮೆ ಇದೆ. ಈ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ವ್ಯಾಪಾರ ಭರಪೂರ ನಡೆಯಬೇಕಿತ್ತು. ಆದರೆ, ಲಾಕ್ ಡೌನ್ ಮಾವು ವ್ಯಾಪಾರಕ್ಕೆ ಬಲವಾದ ಪೆಟ್ಟು ನೀಡಿದೆ.
ಹಂಗಾಮು ಬಂತೆಂದರೆ ಜಿಲ್ಲೆಯಲ್ಲಿ ಆಪೂಸ್, ಕಲ್ಮಿ , ಸಿಂಧೂರ, ಮಲ್ಲಿಕಾ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಕಾಲಿಡುತ್ತಿದ್ದವು. ವ್ಯಾಪಾರಸ್ಥರು ಹಾಗನಲ್ಲ, ಆನವಟ್ಟಿ, ಹುಬ್ಬಳ್ಳಿ, ದಾವಣಗೆರೆ, ಹರಿಹರ ಸೇರಿದಂತೆ ವಿವಿಧ ಕಡೆಗಳಿಂದ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಆದರೆ ಈ ಬಾರಿ ಲಾಕ್‌ಡೌನ್‌ನಿಂದಾಗಿ ವಿವಿಧ ಭಾಗಗಳಿಂದ ಬರುತ್ತಿದ್ದ ವೈವಿಧ್ಯಮಯ ತಳಿಯ ಮಾವಿನಹಣ್ಣು ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಬಂದಿಲ್ಲ. ನಗರದ ಮಾರುಕಟ್ಟೆಯಲ್ಲಿ ಆಪೂಸ್ ತಳಿ ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದು, ಇತರ ತಳಿಯ ಹಣ್ಣುಗಳು ಕಾಣುತ್ತಿಲ್ಲ. ಆಪೂಸ್ ಕೆ.ಜಿ.ಗೆ 120ರಿಂದ 180ವರೆಗೆ ಮಾರಾಟವಾಗುತ್ತಿದೆ.
ಲಾಕ್‌ಡೌನ್ ಎಲ್ಲಿವರೆಗೆ ಮುಂದುವರಿಯುತ್ತದೆಯೋ ಮುಂದೆ ಮಾವಿಗೆ ಬೆಲೆ ಸಿಗುತ್ತದೆಯೋ ಇಲ್ಲವೋ ಎಂದು ಅನೇಕ ರೈತರು ಲಾಕ್‌ಡೌನ್ ಅವಧಿಯಲ್ಲಿಯೇ ಪಾಸ್ ಪಡೆದು ತಮ್ಮ ತೋಟದಿಂದ ನೇರವಾಗಿ ಜಿಲ್ಲೆಯ ಹೊರಗಿನ ಮಾರುಕಟ್ಟೆಗಳಿಗೆ ದೊಡ್ಡ ಪ್ರಮಾಣದಲ್ಲಿ ಮಾವು ಕಳುಹಿಸಿದ್ದಾರೆ. ಲಾಕ್‌ಡೌನ್ ನಿಯಮ ಸಡಿಲಿಕೆಯಾದ ಬಳಿಕ ಇತ್ತೀಚೆಗೆ ಅಂದರೆ ಮೇ 4ರಿಂದ ಜನರು ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದು, ರೈತರು ಇತ್ತೀಚೆಗೆ ಕೊಯ್ಲು ಮಾಡಿದ ಹಣ್ಣು ಮಾರುಕಟ್ಟೆಗೆ ಬರುತ್ತಿದೆ.
ಮಾರುಕಟ್ಟೆಗೆ ಬಂದಿರುವ ಮಾವು ಹೆಚ್ಚಾಗಿ ರಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡಲಾಗಿರುತ್ತದೆ ಎಂಬ ಭಾವನೆ ಹೆಚ್ಚು ಜನರಲ್ಲಿ ಇರುವುದರಿಂದ ಹಾಗೂ ಕೊರೋನಾ ಸೋಂಕಿನ ಭಯದಿಂದಾಗಿ ಮಾರುಕಟ್ಟೆಯಲ್ಲಿ ಮಾವು ಖರೀದಿಸುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಇದು ಮಾವು ವ್ಯಾಪಾರಕ್ಕೆ ಕೊಡಲಿ ಏಟು ನೀಡಿದೆ.
ನೈಸರ್ಗಿಕ ಹಣ್ಣಿಗೆ ಬೇಡಿಕೆ: ನೈಸರ್ಗಿಕವಾಗಿ ಮಾಗಿಸಿದ ಅಂದರೆ ಹಣ್ಣಾಗಿಸಿದ ಮಾವಿಗೆ ಭಾರಿ ಬೇಡಿಕೆ ಇದ್ದು, ಅದು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಹೀಗಾಗಿ ಕೆಲವರು ರೈತರ ಹೊಲಗಳಿಗೇ ಹೋಗಿ ಮಾವಿನ ಕಾಯಿಗಳನ್ನು ತಂದು ಮನೆಯಲ್ಲಿಯೇ ಹುಲ್ಲುಹಾಕಿ ಮಾಗಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲ ರೈತ ಸಂಘಟನೆಗಳು ರೈತರಿಂದ ಖರೀದಿಸಿದ ಮಾವನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಮುಂದಾಗಿಯೆಯಾದರೂ ಉತ್ತಮ ತಳಿಯ ಹಣ್ಣುಗಳು ಸಿಗದೆ ಜನರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.
ಒಟ್ಟಾರೆ ಕೊರೊನಾ ಲಾಕ್‌ಡೌನ್ ಮಾವು ವ್ಯಾಪಾರದ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಿದೆ. ಪ್ರತಿವರ್ಷ ಬರುತ್ತಿದ್ದಂತೆ ಈ ಬಾರಿ ಹತ್ತಾರು ತಳಿಯ ಮಾವು ಮಾರುಕಟ್ಟೆಗೆ ಬಂದಿಲ್ಲ. ಲಾಕ್‌ಡೌನ್ ಸಡಿಲಿಕೆ ಆದರೂ ಎಲ್ಲ ಜನ ಹೆಚ್ಚಾಗಿ ಹೊರಗೆ ಬರುತ್ತಿಲ್ಲ. ಕೊರೊನಾ ಭಯದಿಂದ ಕೆಲವರು ಹಣ್ಣು ಖರೀದಿಸಲು ಸಹ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮಾವು ವ್ಯಾಪಾರವೇ ಇಲ್ಲ ಎನ್ನುವಂತಾಗಿದೆ.
ಮಾಬೂಲಿ ದೇವಗಿರಿ,
ಹಣ್ಣಿನ ವ್ಯಾಪಾರಿ