Advertisement

ಹಿರಿಯ ಸಾಹಿತಿ ಸತೀಶಗೆ ಸಾಹಿತ್ಯ ಶ್ರೀ ಗರಿ

11:47 AM Feb 10, 2019 | |

ಹಾವೇರಿ: ‘ಕಟ್ಟತೇವ ನಾವು ಕಟ್ಟತೇವ ನಾವು
ಕಟ್ಟೇ ಕಟ್ಟತೇವ..ಒಡೆದ ಮನಸುಗಳು ಕಂಡ ಕನಸುಗಳ
ಕಟ್ಟೇ ಕಟ್ಟತೇವ..ನಾವು ಕನಸ ಕಟ್ಟತೇವ
ನಾವು ಮನಸ ಕಟ್ಟತೇವ…’

Advertisement

ಬಹು ಖ್ಯಾತಿ ಹೊಂದಿದ ಈ ಕ್ರಾಂತಿ ಗೀತೆ ಮೊಳಗಿಸಿದ ಜಿಲ್ಲೆಯ ಹಿರಿಯ ಸಾಹಿತಿ ಸತೀಶ ಕುಲಕರ್ಣಿಯರಿಗೆ ಈ ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಸಾಹಿತ್ಯ ಶ್ರೀ’ ಪ್ರಶಸ್ತಿ ನೀಡಿದ್ದು ಜಿಲ್ಲೆಯ ಸಾಹಿತ್ಯ, ಕಲಾ ಕ್ಷೇತ್ರದ ಹಿರಿಮೆ ಹೆಚ್ಚಿಸಿದಂತಾಗಿದೆ.

ದಲಿತ, ಬಂಡಾಯ ಸಾಹಿತ್ಯ ಚಳವಳಿಯ ಹಿನ್ನೆಲೆಯಿಂದ ಬಂದ ಜಿಲ್ಲೆಯ ಪ್ರಮುಖ ಸಾಹಿತಿಗಳಲ್ಲೊಬ್ಬರಾದ ಸತೀಶ ಕುಲಕರ್ಣಿ ಅವರು 1951 ಜು. 13ರಂದು ಧಾರವಾಡದಲ್ಲಿ ಜನಿಸಿದರು. ಮೂಲತಃ ಅದೇ ಜಿಲ್ಲೆಯ ಗುಡಗೇರಿಯವರು. ಬಿಎಸ್ಸಿ, ಎಂಎ ಪದವೀಧರರಾಗಿದ್ದು, ಹೆಸ್ಕಾಂ ಉದ್ಯೋಗದಿಂದ 2011ರಲ್ಲಿ ನಿವೃತ್ತರಾಗಿದ್ದಾರೆ. ಕವಿಯಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಆವರು ಖ್ಯಾತಿಯಾಗಿದ್ದಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ (2000-2004) ಕರ್ನಾಟಕ ನಾಟಕ ಅಕಾಡೆಮಿ ಸಂಚಾಲಕರಾಗಿ (2007-10) ಸೇವೆ ಸಲ್ಲಿಸಿದ್ದಾರೆ. ಡಾ| ವಿ.ಕೃ. ಗೋಕಾಕ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌, ಹುತಾತ್ಮ ಮೈಲಾರ ಮಹಾದೇವ ಟ್ರಸ್ಟ್‌ ಹಾಗೂ ಡಾ| ಬೆಟಗೇರಿ ಕೃಷ್ಣಶರ್ಮ ಟ್ರಸ್ಟಿನ ಸದಸ್ಯರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಸಾಹಿತ್ಯದ ಛಾಪು: ‘ಕಾವ್ಯ ನನಗೆ ಮೊದಲ ಮತ್ತು ಕೊನೆಯ ಪ್ರೀತಿಯ ವಿಷಯ’ ಎನ್ನುವ ಸತೀಶ್‌, ವಿದ್ಯುತ್‌ ಇಲಾಖೆಯಂಥ ನಾನ್‌ ಅಕಾಡೆಮಿಕ್‌ ಸಂಸ್ಥೆಯಲ್ಲಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಇವೆಲ್ಲವುಗಳ ಜತಗೆ ‘ಇಂಗಳೆ ಮಾರ್ಗ’, ’22 ಜುಲೆ„-1947′ ಹಾಗೂ ‘ಸಾವಿತ್ರಿಬಾಯಿ ಫುಲೆ’ ಚಲನಚಿತ್ರಗಳಿಗೆ ಗೀತ ರಚನಾಕಾರರಾಗಿ ಛಾಪು ಮೂಡಿಸಿದ್ದಾರೆ. ಸತೀಶ ಅವರ ಕಾವ್ಯಗಳು ಆಯಾ ಕಾಲ, ಸಂದರ್ಭಕ್ಕೆ ಮುಖಾಮುಖೀಯಾಗುವಂತಿವೆ. ಅತ್ಯಂತ ಸೂಕ್ಷ ್ಮಗ್ರಾಹಿ, ಪರಿಣಾಮಕಾರಿಯೂ ಸ್ವತಂತ್ರ ಕಾವ್ಯ ರಚನಾ ಶೈಲಿ ಹೊಂದಿರುವ ಸತೀಶ ಕುಲಕರ್ಣಿಯವರ ಕವಿತೆಗಳನ್ನು ಓದಿದಷ್ಟು ಹೊಸ ಅರ್ಥ, ಹೊಳಹು ಕೊಡುತ್ತವೆ ಎಂಬುದು ಅವರ ಕಾವ್ಯ ಶೈಲಿಯ ವಿಶೇಷ.

Advertisement

ಚಳವಳಿಯಲ್ಲೂ ಮುಂದೆ: ‘ಸತೀಶ ಕುಲಕರ್ಣಿ’ ಎಂದಾಕ್ಷಣ ಕಣ್ಮುಂದೆ ಬರುವ ಇನ್ನೊಂದು ಪ್ರಮುಖ ಅಂಶವೆಂದರೆ ಅವರ ಕನ್ನಡಪರ ಚಳವಳಿ; ಹೋರಾಟದ ಹಾದಿ. ಚಳವಳಿಯಿಂದ ಮಾತ್ರ ಕನ್ನಡ ಜಾಗೃತಿ ಆಗುವುದಿಲ್ಲ. ಕನ್ನಡ ಜಾಗೃತಿ ಎಂಬುದು ನಿರಂತರ ಪ್ರಕ್ರಿಯೆ ಎಂದು ಅದಕ್ಕಾಗಿ ‘ಸಾಹಿತ್ಯ ಮಂಟಪ’ ಎಂಬ ಕನ್ನಡ ಅರಿವು ಮೂಡಿಸುವ ವೇದಿಕೆ ಹುಟ್ಟುಹಾಕಿದರು. ‘ಸಾಹಿತ್ಯ ಮಂಟಪ’ ಮೂಲಕ ನೂರಾರು ಬೀದಿ ನಾಟಕ, ರಂಗನಾಟಕ, ವಿಚಾರ ಸಂಕಿರಣಗಳು, ಕನ್ನಡಕ್ಕೆ ಅಪಾಯ ಬಂದಾಗ ಎಲ್ಲ ಸಂಘಟನೆಗಳನ್ನು ಕರೆದುಕೊಂಡು ಹೋರಾಟದ ಹೆಜ್ಜೆ ಇಟ್ಟರು.

ಒಟ್ಟಾರೆ ಜಿಲ್ಲೆಯ ಮನೆ ಮನೆಗೆ ಕವಿಯಾಗಿ, ಸಾಹಿತಿಯಾಗಿ, ನಟರಾಗಿ, ನಾಟಕಕಾರರಾಗಿ ಇದಕ್ಕೆಲ್ಲಕ್ಕಿಂತ ಹೆಚ್ಚಾಗಿ ಕನ್ನಡದ ಬಂಧುವಾಗಿ ಚಿರಪರಿಚಿತರಾಗಿರುವ ಸತೀಶ ಕುಲಕರ್ಣಿಯವರಿಗೆ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯ ಶ್ರೀ’ ಪ್ರಶಸ್ತಿ ಲಭಿಸಿರುವುದು ಜಿಲ್ಲೆಯ ಜನರಿಗೆ ಹೆಮ್ಮೆಯ ಸಂಗತಿಯಾಗಿದೆ.

ಸತೀಶರ ಸಾಹಿತ್ಯ ಕೃಷಿ
ಸತೀಶ ಕುಲಕರ್ಣಿಯವರ ಸಾಹಿತ್ಯ ಕೃಷಿ ಸಮೃದ್ಧವಾಗಿದ್ದು, ಹತ್ತಾರು ಕವನ, ಕಥೆ, ನಾಟಕ ಕೃತಿಗಳನ್ನು ಬರೆದು ಜನ ಮೆಚ್ಚುಗೆ ಗಳಿಸಿದ್ದಾರೆ. ಅವರ ‘ಬೆಂಕಿಬೇರು’, ‘ನೆಲದ ನೆರಳು’, ‘ವಿಕ್ಷಿಪ್ತ’, ‘ಸಮಯಾಂತರ’, ‘ಸತೀಶ ಸಮಗ್ರ ಕವಿತೆಗಳು’ ‘ಛಿನ್ನ’ ಎಂಬ ಮರಾಠಿಯಿಂದ ಅನುವಾದಿತ ನಾಟಕ, ‘ಸತೀಶರ ಹತ್ತು ನಾಟಕಗಳು’ ಕೃತಿ ಜನಮನ ಸೂರೆಗೊಂಡಿವೆ. ಹತ್ತಿರದ ಅನುಭವಗಳನ್ನು ಕಲಾತ್ಮಕವಾಗಿ ಕಾವ್ಯವಾಗಿಸುವ ‘ಲೈನ್‌ ಮಡಿವಾಳರ ಭೀಮಪ್ಪ’, ‘ಪಂಜಾಬನ ಆ ಪುಟ್ಟ ಹುಡುಗಿಯ ಪತ್ರ’, ‘ಕಟ್ಟತೇವ ನಾವು ಕಟ್ಟತೇವ’, ‘ಚಪ್ಪಲಿಗಳು’ ‘ವಿಷಾದಯೋಗ’ ತುಂಬ ಚರ್ಚಿತ ಕವಿತೆಗಳಾಗಿವೆ. ತುರ್ತು ಪರಿಸ್ಥಿತಿಯ ವಿರುದ್ಧ ಬರೆದ ‘ಒಡಲಾಳ ಕಿಚ್ಚು’, ಸಾಮರಸ್ಯಕ್ಕೆ ಧಕ್ಕೆ ತಂದ ಬಾಬರಿ ಮಸೀದಿ ನಾಶದ ಹಿನ್ನೆಲೆಯ ‘ವಿಷಾದಯೋಗ’, ತಮ್ಮ ಕಾವ್ಯಕ್ಕೆ ಒಟ್ಟು ಉತ್ತರ ಕಂಡುಕೊಳ್ಳುವ ‘ಗಾಂಧಿ ಗಿಡ’ ಹಾಗೂ ಜಾಗತೀಕರಣದ ಮರುಉತ್ತರವಾಗಿ ‘ಕಂಪನಿ ಸವಾಲ್‌’ ಸಂಕಲನಗಳು ಜನಪ್ರಿಯಗೊಂಡಿವೆ.

ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿದ್ದು, ಖುಷಿ ತಂದಿದೆ. ಈ ಹಿಂದೆ ಜಿಲ್ಲೆಯ ಸಾಹಿತಿಗಳಾದ ಗೋಕಾಕ್‌, ರಾಮಚಂದ್ರ ಕುಲಕರ್ಣಿ, ಚಂಪಾ ಅವರಿಗೆ ಈ ಪ್ರಶಸ್ತಿ ಲಭಿಸಿದ್ದು, ನಾಲ್ಕನೇ ಬಾರಿ ಜಿಲ್ಲೆಗೆ ಲಭಿಸಿದ ಪ್ರಶಸ್ತಿ ಇದಾಗಿದೆ. ಸಾಹಿತ್ಯ ವಲಯದ ಸೂಕ್ಷ್ಮತೆ, ಪ್ರಯೋಗಶೀಲತೆ ಅವಲೋಕಿಸಿ ಸಾಹಿತ್ಯ ಅಕಾಡೆಮಿ ತನ್ನದೇ ವಿಶೇಷ ಮಾನದಂಡ ಆಧರಿಸಿ ಪ್ರಶಸ್ತಿ ನೀಡುತ್ತ ಬಂದಿದ್ದು, ತನ್ನ ಮೌಲ್ಯ ಉಳಿಸಿಕೊಂಡಿದೆ. ಇಂಥ ಮೌಲ್ಯಯುತ ಪ್ರಶಸ್ತಿ ದೊರೆತಿರುವುದು ಜಿಲ್ಲೆಯ ಹೆಮ್ಮೆ.
•ಸತೀಶ ಕುಲಕರ್ಣಿ, ಪ್ರಶಸ್ತಿ ಪುರಸ್ಕೃತರು

Advertisement

Udayavani is now on Telegram. Click here to join our channel and stay updated with the latest news.

Next