ಕಲಬುರಗಿ: ಬರುವ ಮೇ ತಿಂಗಳಿನ ಮೂರನೇ ಇಲ್ಲವೇ ನಾಲ್ಕನೇ ವಾರದಲ್ಲಿ ಹಾವೇರಿಯಲ್ಲಿ ನಡೆಸಲು ಉದ್ದೇಶಿಸಿರುವ ಅಖಿಲ ಭಾರತ 86ನೆಯ ದಿನಾಂಕ ವಾರದಲ್ಲೇ ದಿನಾಂಕ ನಿಗದಿ ಮಾಡಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿ ಅಧ್ಯಕ್ಷ, ನಾಡೋಜ ಡಾ. ಮಹೇಶ ಜೋಷಿ ತಿಳಿಸಿದರು.
ಕನ್ನಡ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಢಿಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲಾಧಿಕಾರಿ ಹಾಗೂ ಮುಖ್ಯಮಂತ್ರಿ ಜತೆಗೇ ಸಾಹಿತಿಗಳೊಂದಿಗೆ ಚರ್ಚಿಸಿ ದಿನಾಂಕ ನಿರ್ಧರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಸಮ್ಮೇಳನ ಈ ಸಲ ವಿಶಿಷ್ಟ ವಾಗಲಿದ್ದು, ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ. ಪ್ರಮುಖವಾಗಿ ಕೊರೊನಾದಿಂದ ಮಾದ್ಯಮ ಕ್ಷೇತ್ರದ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಸಮ್ಮೇಳನ ದಲ್ಲಿ ಮಾಧ್ಯಮ ಸಂಬಂಧಿಸಿದಂತೆ ಗೋಷ್ಠಿ ಇರಲಿದೆ ಎಂದು ಸ್ಪಷ್ಟಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆಗಳನ್ನು ಮಾರ್ಪಡಿಸಲು ಮುಂದಾಗಿರುವುದನ್ನು ಒಪ್ಪಿಗೆ ಪಡೆಯಲು ಮೇ 1ರಂದು ಹಾವೇರಿ ಜಿಲ್ಲೆಯ ಕಾಗಿನೆಲೆಯಲ್ಲಿ ಕಸಾಪ ಸರ್ವ ಸದಸ್ಯರ ವಿಶೇಷ ಸಭೆ ಕರೆಯಲಾಗಿದೆ. ಅದೇ ರೀತಿ ಕಸಾಪ ಜನರ ಸಾಹಿತ್ಯ ಪರಿಷತ್ತನಾಗಿಸಲು ಮೇ. 5ರಂದು ಬೆಂಗಳೂರಿನ ಕಸಾಪದಲ್ಲಿ ಸಾಹಿತಿಗಳ ದುಂಡು ಮೇಜಿನ ಸಭೆ ಕರೆಯಲಾಗಿದೆ ಎಂದು ಜೋಷಿ ವಿವರಿಸಿದರು.
ಈಗಾಲೇ ಹೇಳಿರುವಂತೆ ಬರುವ ಐದು ವರ್ಷದೊಳಗೆ ಕಸಾಪಗೆ ಒಂದು ಕೋಟಿ ಸದಸ್ಯತ್ವ ಮಾಡಲಾಗುವುದು. ಸದಸ್ಯತ್ವ ಮಾಡಿಕೊಳ್ಳಲು ಬಸ್ ವೊಂದು ರಾಜ್ಯದಾದ್ಯಂತ ಸಂಚರಿಸಲಿದೆ. ಕನ್ನಡ ಜನರ ಹಾಗೂ ಆಡಳಿತ ಭಾಷೆಯನ್ನಾಗಿ ಕಠಿಣ ವಾದ ಹೋರಾಟಕ್ಕೆ ಮುಂದಾಗಲಾಗುವುದು. ಬ್ಯಾಂಕಿಂಗ್ ಹಾಗೂ ರೈಲ್ವೆಯಲ್ಲಿ ಕನ್ನಡ ಅಳವಡಿಕೆಗೆ ಈಗಾಗಲೇ ಒಪ್ಪಿಕೊಂಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಜೋಷಿ ತಿಳಿಸಿದರು.
ಗಡಿ ಭಾಗದಲ್ಲಿ ಹಾಗೂ ನೆರೆಯ ರಾಜ್ಯದಲ್ಲಿನ ಗಡಿ ಭಾಗದಲ್ಲಿ ಕನ್ನಡ ಭಾಷೆ ಉಳಿದು ಬೆಳವಣಿಗೆಗೂ ಪರಿಷತ್ತು ಕಾರ್ಯಸೂಚಿಯೊಂದು ರೂಪಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ತಿಳಿಸಿದರು. ಕಸಾಪ ಕಲಬುರಗಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಪಾಟೀಲ್ ತೇಗಲತಿಪ್ಪಿ, ಗೌರವ ಕಾರ್ಯದರ್ಶಿ ಯಶ್ವಂತರಾಯ ಅಷ್ಠಗಿ ಸೇರಿದಂತೆ ಮುಂತಾದವರಿದ್ದರು.