ಹಾವೇರಿ: ದೀಪಾವಳಿ ಹಬ್ಬದ ಮೂರನೇ ದಿನವಾದ ಗುರುವಾರದಂದು ಬಲಿಪಾಡ್ಯ (ಬಲಿಪ್ರತಿಪದೆ)ವನ್ನು ಜಿಲ್ಲೆಯಲ್ಲಿ ‘ಹಟ್ಟಿ ಹಬ್ಬ’ ಎಂಬ ಹೆಸರಿನಿಂದ ಅಪ್ಪಟ ಗ್ರಾಮೀಣ ಸಂಪ್ರದಾಯಗಳೊಂದಿಗೆ ಆಚರಿಸಲಾಯಿತು. ಜಿಲ್ಲೆಯಾದ್ಯಂತ ದೇವಿ ಹಟ್ಟಿ ಲಕ್ಕವ್ವ ಪೂಜೆ, ಗೋಪೂಜೆ, ಲಕ್ಷ್ಮೀ ಪೂಜೆಯೊಂದಿಗೆ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. ಬಲಿಪಾಡ್ಯದಂದು ಜಿಲ್ಲೆಯಲ್ಲಿ ಹಟ್ಟಿ ಲಕ್ಕಮ್ಮನ ಪೂಜೆಯನ್ನು ವಿಶೇಷವಾಗಿ ಆಚರಿಸಲಾಯಿತು. ರೈತರು ಮನೆಯಲ್ಲಿರುವ ಕೃಷಿ ಬಳಕೆಯ ಸಾಮಗ್ರಿಗಳನ್ನು ತೊಳೆದು ಅರಿಷಿಣ-ಕುಂಕುಮ, ಹೂವುಗಳಿಂದ ಸಿಂಗರಿಸಿ, ಹಟ್ಟಿ ಲಕ್ಕವ್ವನ ಇಟ್ಟು ಪೂಜಿಸಿದರು.
ಹಟ್ಟಿ ಹಬ್ಬವನ್ನು ಗ್ರಾಮೀಣ ರೈತರ ಮನೆಗಳಲ್ಲಿ ಅದ್ಧೂರಿಯಾಗಿ, ವೈವಿಧ್ಯ ಪೂರ್ಣವಾಗಿ ಆಚರಿಸಲಾಯಿತು. ದೀಪಾವಳಿ ಮೊದಲ ಎರಡು ದಿನಗಳಿಗಿಂತ ಮೂರನೇ ದಿನವಾದ ಬಲಿಪಾಡ್ಯಕ್ಕೆ ಜನರು ಹೆಚ್ಚಿನ ಪ್ರಾಧಾನ್ಯತೆ ನೀಡುವುದರಿಂದ ಗುರುವಾರ ಮನೆ ಮನೆಗಳಲ್ಲಿ ಸಂಭ್ರಮ ತುಂಬಿತ್ತು.
ಸೆಗಣಿಯಲ್ಲಿ ಪಾಂಡವರನ್ನು ರಚಿಸಿ, ಚೆಂಡು ಹೂವಿನ ಐದು ಗಿಡಗಳ ನಡುವೆ ಪ್ರತಿಷ್ಠಾಪಿಸಿದರು. ಇದರ ನಡುವೆ ಸೆಗಣಿಯಲ್ಲಿಯೇ ಲಕ್ಷ್ಮೀಯನ್ನೂ ಮಾಡಿದರು. ಈ ಲಕ್ಷ್ಮೀಯೇ ‘ಹಟ್ಟಿ ಲಕ್ಕವ್ವ’. ಹಟ್ಟಿ ಲಕ್ಕವ್ವಗೆ ಚಿನ್ನಾಭರಣ, ವಸ್ತ್ರ, ಉತ್ರಾಣಿ ಕಡ್ಡಿ, ಹೂ, ಹಾರಗಳಿಂದ ಸಿಂಗರಿಸಿ, ಹೋಳಿಗೆ, ಕಡಬು ಇನ್ನಿತರ ಸಿಹಿ ಖಾದ್ಯಗಳ ನೈವೇದ್ಯ ಮಾಡಿ ಪೂಜಿಸಿದರು. ಹಣತೆ ದೀಪಗಳ ಬೆಳಕಲ್ಲಿ ಲಕ್ಕವ್ವ ಫಳಫಳ ಹೊಳೆದಳು.
ಮನೆ, ಕೊಟ್ಟಿಗೆ, ವ್ಯಾಪಾರ, ಉದ್ಯೋಗಕ್ಕೆ ಬಳಸುವ ಕಸಬರಿಗೆಯಿಂದ ಹಿಡಿದು ಎಲ್ಲ ವಸ್ತುಗಳನ್ನೂ ತೊಳೆದು- ಸುಣ್ಣ ಬಣ್ಣ ಬಳಿದು ಅವುಗಳ ಸಮೀಪವೂ ಅರಿಶಿಣ-ಕುಂಕುಮ, ಉತ್ರಾಣಿ ಕಡ್ಡಿ, ಹೂಗಳಿಂದ ಸಿಂಗರಿಸಿದ ಸೆಗಣಿಯ ಪಾಂಡವರನ್ನು ಇಟ್ಟು ಪೂಜಿಸಿದರು. ಪಾಂಡವರು ಪಟ್ಟು ಕಷ್ಟ ಯಾರಿಗೂ ಬಾರದಿರಲಿ ಎಂಬ ಪ್ರಾರ್ಥನೆ ಈ ಆಚರಣೆಯೊಳಗೊಂಡಿದೆ.
ಜಾನುವಾರು ಹಬ್ಬ: ಹಟ್ಟಿ ಹಬ್ಬದಲ್ಲಿ ಜಾನುವಾರುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಜಿಲ್ಲೆಯ ರೈತರ ದೃಷ್ಟಿಯಿಂದ ಹಟ್ಟಿ ಹಬ್ಬವೇ ದೊಡ್ಡ ಹಬ್ಬ. ಹೆಚ್ಚು ಸಂಭ್ರಮ, ಸಂತಸ ಕೊಡುವ ಹಬ್ಬ. ದನ-ಕರುಗಳ ಮೈ ತೊಳೆದು ಬಣ್ಣ ಹಚ್ಚಿ, ಹೊಸದಾಗಿ ಮಾರುಕಟ್ಟೆಯಿಂದ ತಂದ ಹಗ್ಗ, ರಿಬ್ಬನ್, ಬಲೂನ್, ಗೆಜ್ಜೆಗಳನ್ನು ಕಟ್ಟಿ ಸಿಂಗರಿಸಿದರು. ಈ ರೀತಿ ಶೃಂಗಾರಗೊಂಡ ಜಾನುವಾರುಗಳನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿತ್ತು. ಎತ್ತುಗಳ ಕೊರಳಿಗೆ ಕೊಬ್ಬರಿ ಸರವನ್ನೂ ಕಟ್ಟಿ ಪೂಜೆಯ ಬಳಿಕ ಹೊರಗೆ ಬಿಟ್ಟರು. ಎತ್ತಿನ ಗಾಡಿಯನ್ನೂ ಬಣ್ಣ ಹಚ್ಚಿ ಸಿಂಗರಿಸಿ, ಪೂಜಿಸಿದರು. ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಹಟ್ಟಿ ಲಕ್ಕವ್ವಳನ್ನು ಪ್ರತಿಷ್ಠಾಪಿಸಿದ ಸ್ಥಳದಿಂದ ಹೊರ ಅಂಗಳದವರೆಗೆ ಕೆಮ್ಮಣ್ಣು ಹಾಗೂ ಸುಣ್ಣದಿಂದ ಆಕಳ ಹೆಜ್ಜೆಗಳನ್ನು ಬಿಡಿಸಿ, ಹೆಜ್ಜೆಗಳ ಮೇಲೆಯೇ ಆಕಳನ್ನು ಮನೆಯೊಳಗೆ ತಂದು ಮತ್ತೊಮ್ಮೆ ಪೂಜೆ ಮಾಡುವ ಮೂಲಕ ಹಟ್ಟಿ ಹಬ್ಬ ಸಂಪನ್ನಗೊಂಡಿತು.
ಅಂಗಡಿ, ವಾಹನ ಪೂಜೆ: ಅಂಗಡಿಕಾರರು ತಮ್ಮ ಅಂಗಡಿಗಳಲ್ಲಿ ಕುಟುಂಬದ ಸದಸ್ಯರು, ಬಂಧು- ಬಾಂಧವರು, ಗೆಳೆಯರೊಂದಿಗೆ ಶ್ರೀಲಕ್ಷ್ಮೀ ಪೂಜೆ ಮಾಡಿದರು. ವಾಹನಗಳನ್ನು ತೊಳೆದು, ಹೂಗಳಿಂದ ಸಿಂಗರಿಸಿ ಪೂಜಿಸಿದರು.
ಪಟಾಕಿ ಸದ್ದು: ಕಿವಿಗಡಚ್ಚಿಕ್ಕುವ ರೀತಿಯ ಪಟಾಕಿ ಸದ್ದು ಎಲ್ಲೆಡೆ ಕೇಳಬೇಕು ಎಂದರೆ ಈ ಭಾಗದಲ್ಲಿ ದೀಪಾವಳಿಯೇ ಬರಬೇಕು. ಗ್ರಾಮೀಣ ಪ್ರದೇಶದ ಮನೆ ಮನೆಗಳಲ್ಲಿ ಪಟಾಕಿ ಸದ್ದು ಕೇಳಿತು. ನಗರದಲ್ಲಂತೂ ಪಟಾಕಿಯ ಆರ್ಭಟ ಮುಗಿಲು ಮುಟ್ಟಿತ್ತು. ಆಧುನಿಕತೆಯ ಪ್ರವಾಹದಲ್ಲಿಯೂ ಜನಪದ ಸೊಗಡಿನ ದೀಪಾವಳಿ ಆಚರಣೆ ಇನ್ನೂ ಜೀವಂತವಾಗಿರುವುದು ಜಿಲ್ಲೆಯ ವಿಶೇಷ.