Advertisement
ಮುಖ್ಯಮಂತ್ರಿ ಬರುವಿಕೆಗಾಗಿ ರೈತರು ಮಧ್ಯಾಹ್ನ 1ಗಂಟೆಯಿಂದಲೇ ಬಿಸಿಲಲ್ಲಿ ಕುಳಿತು ಕಾಯುತ್ತಿದ್ದರು. ಸಂಜೆ 5ಗಂಟೆಯಾದರೂ ಮುಖ್ಯಮಂತ್ರಿ ಬಾರದೆ ಇದ್ದಾಗ ಹಲವರು ನಿರಾಶರಾಗಿ ಮನೆಗೆ ನಡೆದರು. ಇನ್ನು ಕೆಲ ರೈತರು ಪೊಲೀಸರ ಮಾಹಿತಿ ಮೇರೆಗೆ ಮುಖ್ಯಮಂತ್ರಿಯವರಿಗೆ ಕಾಯುವ ಕಾಯಕ ಮುಂದುವರಿಸಿದರು. 6:30ರ ಹೊತ್ತಿಗೆ ಆಗಸದಲ್ಲಿ ಕುಮಾರಸ್ವಾಮಿಯವರ ಹೆಲಿಕಾಪ್ಟರ್ ಕಂಡೊಡನೆ ನಾಡಿನ ದೊರೆ ಅಂತೂ ಬಂದರಲ್ಲ ಎಂದು ನಿಟ್ಟುಸಿರುವ ಬಿಟ್ಟರು.
Related Articles
ಸಂಜೆ ಕತ್ತಲಾವರಿಸಿದ ಬಳಿಕ ಬರ ವೀಕ್ಷಣೆಗೆ ಬಂದ ಸಿಎಂ ಕುಮಾರಸ್ವಾಮಿ, ಎರೆಕುಪ್ಪಿಯ ರೈತ ದ್ಯಾಮಪ್ಪ ಕಡ್ಲಿಗೊಂದಿ ಅವರ ಹೊಲದಲ್ಲಿ ಜೋಳದ ಬೆಳೆ ಹಾನಿ ವೀಕ್ಷಿಸಿದರು. ಅಲ್ಲಿಂದ ಜೋಯಿಸರಹರಳಹಳ್ಳಿ ಗ್ರಾಮಕ್ಕೆ ತೆರಳಿ ಖಾಸಗಿ ಕೊಳವೆಬಾವಿ ನೀರು ಸರಬರಾಜು ವೀಕ್ಷಿಸಿದರು. ಬಳಿಕ ಲಲಿತಾ ಜಟ್ಟೆಪ್ಪ ಹೊರಕೇರಿ, ಭೀಮಪ್ಪ ಬಸಪ್ಪ ಹೊರಕೇರಿ ಜಮೀನಿನಲ್ಲಿರುವ ಒಣಗಿದ ಬೆಳೆ
ವೀಕ್ಷಣೆ, ನಂತರ ಹಳೇಹೂಲಿಹಳ್ಳಿ ಗ್ರಾಮಕ್ಕೆ ಆಗಮಿಸಿ ಯುಟಿಪಿ ಕಾಮಗಾರಿ ವೀಕ್ಷಿಸಿ, ಕದರಮಂಡಲಗಿ ಗ್ರಾಮದ ನರೇಗಾ ಯೋಜನೆಯ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ರಾತ್ರಿ 9:10ರ ವೇಳೆಗೆ ಕದರಮಂಡಲಗಿ ಗ್ರಾಮದಲ್ಲಿ ಬರ ಅಧ್ಯಯನ ನಡೆಸುವಾಗ ನೆರೆದಿದ್ದ ರೈತರು ಕೆರೆ ತುಂಬಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.
Advertisement
ಕಾರ್ಪೆಟ್ ಏಕೆ?ಮುಖ್ಯಮಂತ್ರಿ ಕುಮಾರಸ್ವಾಮಿ ಹೊಲ ಭೇಟಿ ಹಿನ್ನೆಲೆಯಲ್ಲಿ ಅ ಧಿಕಾರಿಗಳು ರಸ್ತೆಯಿಂದ ಹೊಲದವರೆಗೆ ಹಸಿರು ಕಾಪೆìಟ್ ಹಾಸಿದ್ದರು. ಕಾರಿನಿಂದ ಇಳಿದ ಸಿಎಂ ಕುಮಾರಸ್ವಾಮಿ, ಹಾಸಿರುವ ಕಾರ್ಪೆಟ್ ನೋಡಿ, ‘ನಾನೂ ಮಣ್ಣಿನಲ್ಲೇ ಓಡಾಡುತ್ತೇನೆ. ಹೊಲಕ್ಕೆ ಹೋಗಲು ನನಗೇಕೆ ಕಾರ್ಪೆಟ್ ಹಾಕಿದ್ದೀರಿ’ ಎಂದು ನಗುಮೊಗದಿಂದಲೇ ಅಧಿಕಾರಿಗಳನ್ನು ಪ್ರಶ್ನಿಸಿ ಹೊಲದತ್ತ ಬ್ಯಾಟರಿ ಬೆಳಕಲ್ಲಿ ನಡೆದರು. ಶಾಸಕ ಶಂಕರ್ ಮುನಿಸು?
ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಣಿಬೆನ್ನೂರು ತಾಲೂಕಿನ ಹಳ್ಳಿಗಳಲ್ಲಿಯೇ ಬರ ಪರಿಸ್ಥಿತಿ ವೀಕ್ಷಣೆಗೆ ಬಂದರೂ ಸ್ಥಳೀಯ ಶಾಸಕ, ಮಾಜಿ ಸಚಿವ ಆರ್. ಶಂಕರ್ ಬರ ವೀಕ್ಷಣೆಗೆ ಬಂದಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದು ಬಳಿಕ ಕಳೆದುಕೊಂಡ ತಾಲೂಕಿನ ಶಾಸಕರ ಅನುಪಸ್ಥಿತಿ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿತು.