Advertisement

ಹಾವೇರಿ: ಐದು ವರ್ಷದಲ್ಲಿ 350 ಕುರಿಗಳ ಸಾವು! ಕೇಂದ್ರದ ಕಾರ್ಯವೈಖರಿ ಬಗ್ಗೆ ಅನುಮಾನ

04:14 PM Jul 18, 2024 | Team Udayavani |

ಉದಯವಾಣಿ ಸಮಾಚಾರ
ಹಾವೇರಿ: ತಾಲೂಕಿನ ಗುತ್ತಲ ಹೊರವಲಯದಲ್ಲಿ ಸ್ಥಾಪಿಸಿರುವ ಕುರಿ ಸಂವರ್ಧನಾ ಕೇಂದ್ರದಲ್ಲಿ ಉತ್ತಮ ತಳಿಯ ಕುರಿಗಳನ್ನು ರೈತರಿಗೆ ಹಂಚಿಕೆ ಮಾಡಿದ್ದಕ್ಕಿಂತ ಕೇಂದ್ರದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಳು ಮೃತಪಡುತ್ತಿದ್ದು, ಕಳೆದ ಐದು ವರ್ಷಗಳಲ್ಲಿ 350 ಕುರಿಗಳು ಮೃತಪಟ್ಟಿರುವುದು ಕೇಂದ್ರದ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡುವಂತೆ ಮಾಡಿದೆ.

Advertisement

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಡಿಯಲ್ಲಿ ರಾಜ್ಯದಲ್ಲಿ ಕೇವಲ 5 ಕುರಿ ಸಂವರ್ಧನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಅದರ ಅಡಿಯಲ್ಲಿರುವ ಗುತ್ತಲ ಸಮೀಪದ ಕುರಿ ಸಂವರ್ಧನಾ ಕೇಂದ್ರಕ್ಕೆ 294 ಎಕರೆ ವಿಶಾಲ ಜಾಗೆ ಇದೆ. ಸ್ಥಳೀಯ ಕುರಿ, ಮೇಕೆ ತಳಿ ಸಂವರ್ಧನೆ ಹಾಗೂ ತಳಿ ಸಂವರ್ಧನೆಗೆ ಟಗರುಗಳ ಪೂರೈಕೆ, ಕುರಿಗಾರರಿಗೆ ಮೇವು ಅಭಿವೃದ್ಧಿ ತರಬೇತಿ, ಮೇವು ಬೆಳೆಯಲು ನೂರಾರು ಎಕರೆ ಜಾಗೆ, ವೈಜ್ಞಾನಿಕ ಕುರಿ ಸಾಕಾಣಿಕೆಯಲ್ಲಿ ತರಬೇತಿ ಕಾರ್ಯಕ್ರಮ, ಸಾವಿರಾರು ಕುರಿಗಳನ್ನು ಸಾಕಿ, ಸಲುಹಿ ತಳಿ ಅಭಿವೃದ್ಧಿಗೆ ಅವಕಾಶಗಳಿವೆ. ಆದರೆ ಈ ಕೇಂದ್ರದಲ್ಲಿ ನಿಗಮದ ಯಾವುದೇ ಕಾರ್ಯಚಟುವಟಿಕೆ ನಡೆಯುತ್ತಿಲ್ಲ. ಹೀಗಾಗಿ ಈ ಕೇಂದ್ರ ಇದ್ದೂ ಇಲ್ಲದಂತಾಗಿದೆ.

ಕುರಿಗಾರರಿಗಿಲ್ಲ ಕೇಂದ್ರದಿಂದ ಪ್ರಯೋಜನ: ಕಳೆದ ಐದಾರು ವರ್ಷಗಳಿಂದ ಈ ಕೇಂದ್ರದಿಂದ ರೈತರಿಗೆ ಒಂದೂ ಟಗರು ಹಂಚಿಲ್ಲ. ಕುರಿಗಳಿಗೆ ಕಾಲಕಾಲಕ್ಕೆ ಲಸಿಕೆ, ಚಿಕಿತ್ಸೆ ನೀಡಲು ಸಹಾಯಕ ನಿರ್ದೇಶಕರು, ವೈದ್ಯರು, ಡಿ ದರ್ಜೆ ನೌಕರರು ಇದ್ದಾರೆ. ಆದರೂ ಕೇಂದ್ರದಲ್ಲಿನ ನೂರಾರು ಕುರಿಗಳು ಮೃತಪಟ್ಟಿವೆ. 2020ರಲ್ಲಿ 68, 2021ರಲ್ಲಿ 119, 2022ರಲ್ಲಿ 84, 2023ರಲ್ಲಿ 79 ಕುರಿಗಳು ಮೃತಪಟ್ಟಿವೆ ಎಂದು ಕೇಂದ್ರದ ಅಧಿಕಾರಿಗಳು ನಿಗಮಕ್ಕೆ ಮಾಹಿತಿ ಕೊಟ್ಟಿದ್ದಾರೆ. ಇದೇ ಈ ಕೇಂದ್ರದಲ್ಲಿನ ಕಾರ್ಯವೈಖರಿಗೆ ಸಾಕ್ಷಿಯಾಗಿದ್ದು ಕುರಿಗಾರರಿಗೆ ಇದರಿಂದ ಏನೂ ಉಪಯೋಗ ಇಲ್ಲದಂತಾಗಿದೆ. ಈ ಕುರಿ ಸಂವರ್ಧನಾ ಕೇಂದ್ರದಲ್ಲಿ ಸಾವಿರಾರು ಕುರಿ ಸಾಕಾಣಿಕೆ ಮಾಡಲು ನಾಲ್ಕೈದು ಶೆಡ್‌ ನಿರ್ಮಿಸಲಾಗಿದೆ. ಮೇಯಿಸಲು ನೂರಾರು ಎಕರೆ ಜಾಗೆ ಇದೆ.

ಮೇವು ಬೆಳೆದುಕೊಳ್ಳಲು ಜಮೀನು ಇದೆ. ಆದರೆ ಇಲ್ಲಿ ವರ್ಷದಿಂದ ವರ್ಷಕ್ಕೆ ಕುರಿಗಳ ಸಂಖ್ಯೆ ಕ್ಷೀಣಿಸುತ್ತಾ ಸಾಗಿದೆ. ಕೇಂದ್ರದಲ್ಲಿ 500ಕ್ಕೂ ಹೆಚ್ಚು ಕುರಿಗಳಿದ್ದವು. 2020ರಲ್ಲಿ 382, 2021ರಲ್ಲಿ 344, 2022ರಲ್ಲಿ 286, 2023ರಲ್ಲಿ 268 ಕುರಿಗಳಿದ್ದವು. ಈ ವರ್ಷ ಕೇವಲ 220 ಕುರಿಗಳಿವೆ ಎಂದು ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಬೃಹತ್‌ ಮರಗಳು ಮಾಯ
ಕುರಿ ಸಂವರ್ಧನಾ ಕೇಂದ್ರದ ಆವರಣದಲ್ಲಿನ ಮರಗಳು ಕಾಲಕ್ರಮೇಣ ಮಾಯವಾಗುತ್ತಿವೆ. ಕೇಂದ್ರದ ಕಚೇರಿ ಸಮೀಪದಲ್ಲಿದ್ದ ಹತ್ತಾರು ಬೃಹತ್‌ ಬೇವಿನಮರಗಳು ಇತ್ತೀಚೆಗೆ ರಾತ್ರೋರಾತ್ರಿ ಮಾಯವಾಗಿವೆ. ಕೇಂದ್ರದ ಕಾವಲಿಗೆ ಇಬ್ಬರು ಕಾವಲುಗಾರರಿದ್ದಾರೆ. ಆದರೂ ರಾತ್ರಿವೇಳೆ ಬೃಹತ್‌ ಮರಗಳನ್ನು ಧರೆಗುರುಳಿಸಿ ಬೇರುಗಳ ಮೇಲೆ ಮಣ್ಣು ಹಾಕಿ ಮುಚ್ಚಿಹಾಕುವ ಕೆಲಸ ನಡೆದಿದೆ. ಅರಣ್ಯ ಇಲಾಖೆಯ ಗಮನಕ್ಕೆ ತಾರದೇ ಮರಗಳನ್ನು ಮಾರಾಟ ಮಾಡಲಾಗಿದೆ. ಕುರಿಗಳನ್ನು ಅಕ್ರಮವಾಗಿ ಮಾರಾಟ ಮಾಡಿ ಸತ್ತಿವೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕೇಂದ್ರದ ಸಹಾಯಕ ನಿರ್ದೇಶಕರೂ ಕಚೇರಿಗೆ ಸರಿಯಾಗಿ ಬರುವುದಿಲ್ಲ. ಇಲ್ಲಿ ಅಕ್ರಮ ಚಟುವಟಿಕೆಗಳೇ ಹೆಚ್ಚು ನಡೆಯುತ್ತಿವೆ ಎಂಬ ದೂರುಗಳಿದ್ದು, ಕೂಡಲೇ ಸರ್ಕಾರ, ನಿಗಮದ ಅಧಿಕಾರಿಗಳು ಇತ್ತ ಚಿತ್ತ ಹರಿಸಿ ಕುರಿ ಸಾಗಾಣಿಕೆಗೆ ಅನುಕೂಲ ಆಗುವ ಚಟುವಟಿಕೆ ನಡೆಯುವಂತೆ ನೋಡಿಕೊಳ್ಳಬೇಕು ಎಂಬುದು ಕುರಿಗಾರರು ಆಗ್ರಹಿಸಿದ್ದಾರೆ.

Advertisement

ಗುತ್ತಲದ ಕುರಿ ಸಂವರ್ಧನಾ ಕೇಂದ್ರ ಹಾಗೂ ಗೋಶಾಲೆ ಸೇರಿ ಎರಡು ಕಡೆ ನನಗೆ ಚಾರ್ಜ್‌ ಕೊಟ್ಟಿದ್ದಾರೆ. ಸಂವರ್ಧನಾ ಕೇಂದ್ರದ್ದು ವಿಶಾಲವಾದ ಜಾಗೆ. ಎಲ್ಲವನ್ನೂ ನೋಡಿಕೊಳ್ಳುವುದು ಕಷ್ಟ. ಕೇಂದ್ರದಲ್ಲಿನ ಮರ ಕಡಿದಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ, ಈ ಕುರಿತು ಪೊಲೀಸರಿಗೆ ದೂರು ದಾಖಲಿಸುತ್ತೇನೆ. ನನ್ನ ಅವಧಿಯಲ್ಲಿ 75 ಕುರಿಗಳನ್ನು ಮಾರಾಟ ಮಾಡಿ ಸರ್ಕಾರಕ್ಕೆ ಹಣ ಪಾವತಿಸಿದ್ದೇನೆ.
●ಡಾ| ಸಿ.ಯು. ಗೋಣೆಪ್ಪನವರ, ಸಹಾಯಕ ನಿರ್ದೇಶಕರು, ಕುರಿ ಸಂವರ್ಧನಾ ಕೇಂದ್ರ, ಗುತ್ತಲ

■ ವೀರೇಶ ಮಡ್ಲೂರ

Advertisement

Udayavani is now on Telegram. Click here to join our channel and stay updated with the latest news.

Next