Advertisement

ಹಾವೇರಿ “ಮುಸ್ಲಿಂ ಮೀಸಲು’ಬದಲಿಗೆ ಕೈ ಚಿಂತನೆ

01:54 AM Mar 17, 2019 | |

ಹಾವೇರಿ: ಲೋಕಸಭಾ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಗಳಲ್ಲಿ ಸತತ ಸೋಲನ್ನುಂಡ ಕಾಂಗ್ರೆಸ್‌, ಈ ಬಾರಿ ತನ್ನ “ಮುಸ್ಲಿಂ ಮೀಸಲು’ ಕ್ಷೇತ್ರ ಬದಲಾಯಿಸಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಕ್ಷೇತ್ರದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. 2004, 2009 ಹಾಗೂ 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ನಿರಂತರವಾಗಿ ಪರಾಭವಗೊಂಡಿದೆ.

Advertisement

ಕಾಂಗ್ರೆಸ್‌ನ ಸಾಮಾಜಿಕ ನ್ಯಾಯ ತತ್ವದಡಿ ಹಾವೇರಿ ಲೋಕಸಭಾ ಕ್ಷೇತ್ರ ಮುಸ್ಲಿಂ ಅಲ್ಪಸಂಖ್ಯಾತ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಆದರೆ, ಇತ್ತೀಚೆಗೆ ಮುಸ್ಲಿಂ ಅಲ್ಪಸಂಖ್ಯಾತ ಮೀಸಲು ಪಕ್ಷಕ್ಕೆ ಲಾಭ ತಂದುಕೊಡುತ್ತಿಲ್ಲ. ಇದನ್ನರಿತ ಕಾಂಗ್ರೆಸ್‌, ಈ ಬಾರಿ ಕ್ಷೇತ್ರವನ್ನು ಬದಲಾಯಿಸುವುದೇ ಸೂಕ್ತವೆಂಬ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಹಾವೇರಿ ಕ್ಷೇತ್ರದಲ್ಲಿ ಈವರೆಗೆ ನಡೆದ 16 ಚುನಾವಣೆಗಳಲ್ಲಿ 10 ಬಾರಿ ಮುಸ್ಲಿಂ ಅಲ್ಪಸಂಖ್ಯಾತ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ. 2009ಕ್ಕಿಂತ ಮುಂಚೆ ಧಾರವಾಡ ದಕ್ಷಿಣ ಲೋಕಸಭೆ ಕ್ಷೇತ್ರವಾಗಿದ್ದ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ 12 ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳು ವಿಜಯಿಯಾಗಿದ್ದಾರೆ. ಟಿ.ಆರ್‌.ನೇಸ್ವಿ ಎರಡು ಬಾರಿ ಆಯ್ಕೆಯಾಗಿದ್ದು ಬಿಟ್ಟರೆ 10 ಬಾರಿ ಕಾಂಗ್ರೆಸ್‌ನ ಮುಸ್ಲಿಂ ಅಭ್ಯರ್ಥಿಗಳೇ ಜಯಭೇರಿ ಬಾರಿಸಿದ್ದಾರೆ. ಆದರೆ, ಅಂದಿನ ಪರಿಸ್ಥಿತಿ ಈಗ ಉಳಿದಿಲ್ಲ.

ಕ್ಷೇತ್ರ ವಿಂಗಡಣೆ ತಂದ ಬದಲಾವಣೆ: ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ರಚಿತವಾದ ಹಾವೇರಿ ಲೋಕಸಭೆ ಕ್ಷೇತ್ರದ ಚಿತ್ರಣ ಈ ಹಿಂದಿನ ಧಾರವಾಡ ದಕ್ಷಿಣ ಲೋಕಸಭೆ ಕ್ಷೇತ್ರದಂತಿಲ್ಲ. ಈಗ ರಚನೆಗೊಂಡ ಹಾವೇರಿ ಲೋಕಸಭೆ ಕ್ಷೇತ್ರದಿಂದ ಮುಸ್ಲಿಂ ಅಲ್ಪಸಂಖ್ಯಾತರು ಹೆಚ್ಚಿರುವ ಶಿಗ್ಗಾವಿ ವಿಧಾನಸಭೆ ಕ್ಷೇತ್ರ ಹೊರಗುಳಿದಿದೆ. ಮುಸ್ಲಿಂ ಅಲ್ಪಸಂಖ್ಯಾತ ಮತಗಳಿಗೆ ಸಂಬಂ ಧಿಸಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಶಿಗ್ಗಾವಿ ಕ್ಷೇತ್ರ ಹಾವೇರಿ ಲೋಕಸಭೆ ವ್ಯಾಪ್ತಿಗೆ ಒಳಪಡದೇ ಇರುವುದರಿಂದ ಮುಸ್ಲಿಮರು ಕ್ಷೇತ್ರದಲ್ಲಿ ನಿರ್ಣಾಯಕರಾಗುತ್ತಿಲ್ಲ. ಹೀಗಾಗಿ ಅಲ್ಪಸಂಖ್ಯಾತರ ಕ್ಷೇತ್ರ ಎಂಬ ಹಣೆಪಟ್ಟಿಬದಲಾಯಿಸಬೇಕೆಂಬ ಇರಾದೆ ಕಾಂಗ್ರೆಸ್ಸಿನದ್ದು.

ಬಹಿರಂಗ ವಿರೋಧ: ಪುನರ್‌ ವಿಂಗಡಣೆ ಬಳಿಕ ಹಾವೇರಿ ಲೋಕಸಭೆ ಕ್ಷೇತ್ರದ ರಾಜಕೀಯ ಚಿತ್ರಣ ಬದಲಾಗಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಬಹುಸಂಖ್ಯಾತರಿಗೆ ಟಿಕೆಟ್‌ ನೀಡಿ ಎಂದು ಕಳೆದಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಶಾಸಕರಾದಿಯಾಗಿ, ಮುಖಂಡರು ಪಕ್ಷದ ಹೈಕಮಾಂಡ್‌ ಮೇಲೆ ಒತ್ತಡ ಹೇರಿದ್ದರು. ಆದರೆ, ಪಕ್ಷ ಮತ್ತೆ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಿತ್ತು. ಆಗ ಸಲೀಂ ಅಹ್ಮದ್‌ 2ನೇ ಬಾರಿ ಪರಾಭವಗೊಂಡರು. ಈ ಬಾರಿಯಾದರೂ ಕ್ಷೇತ್ರದಲ್ಲಿ ಬಹುಸಂಖ್ಯಾತರಿಗೆ ಟಿಕೆಟ್‌ ಕೊಡಿ ಎಂಬ ಒತ್ತಡ ಹೆಚ್ಚಾಗಿದೆ.

ಗೆದ್ದವರು ಯಾರ್ಯಾರು? 

Advertisement

ಮುಸ್ಲಿಂ ಅಲ್ಪಸಂಖ್ಯಾತರಲ್ಲಿ ಎಫ್‌.ಎಚ್‌. ಮೊಹಸೀನ್‌ 1962, 1967, 1971, 1977, 1980ರಲ್ಲಿ ಸತತ 5 ಬಾರಿ ಜಯಗಳಿಸಿದ್ದಾರೆ. 1984ರಲ್ಲಿ ಎ.ಎ. ಅಜೀಜ್‌ ಶೇಟ್‌, ಹುಬ್ಬಳ್ಳಿಯಲ್ಲಿ ಹಿರಿಯ ವಕೀಲರಾಗಿದ್ದ ಬಿ.ಎಂ. ಮುಜಾಹೀದ್‌ 1989, 1991ರಲ್ಲಿ 2 ಬಾರಿ ಆಯ್ಕೆಯಾಗಿದ್ದಾರೆ. 1996 ಹಾಗೂ 1999ರಲ್ಲಿ ಮೂಲತಃ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನವರಾದ ಪ್ರೊ| ಐ.ಜಿ. ಸನದಿ ವಿಜಯಶಾಲಿಯಾಗಿದ್ದಾರೆ. 1952ರಿಂದ ಈ ವರೆಗೆ ಎಫ್‌.ಎಚ್‌.ಮೋಹಸೀನ್‌, ಎ.ಎ.ಅಜೀಜ್‌ ಶೇಟ್‌, ಬಿ.ಎಂ. ಮುಜಾಹೀದ್‌, ಐ.ಜಿ. ಸನದಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಟಿಕೆಟ್‌ ಆಕಾಂಕ್ಷಿಗಳು

ಕಾಂಗ್ರೆಸ್‌ ಒಂದು ವೇಳೆ ಕ್ಷೇತ್ರದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡದಿದ್ದರೆ ಸ್ಪರ್ಧೆಯಲ್ಲಿ ಕುರುಬ ಸಮುದಾಯದ ಬಸವರಾಜ ಶಿವಣ್ಣನವರ, ರಡ್ಡಿ ಲಿಂಗಾಯತ ಸಮುದಾಯದ ಡಿ.ಆರ್‌.ಪಾಟೀಲ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ವೀರ ಶೈವ ಲಿಂಗಾಯತರು ತಮ್ಮ ಸಮುದಾಯದವರಿಗೆ ಟಿಕೆಟ್‌ ನೀಡಬೇಕೆಂದು ಜಿ.ಎಸ್‌.
ಪಾಟೀಲ, ಜಿ.ಎಸ್‌. ಗಡ್ಡದೇವರಮಠ, ಸಂಜೀವಕುಮಾರ ನೀರಲಗಿ, ಜಗದೀಶ ಬಸೇಗಣ್ಣಿ, ಸೃಷ್ಟಿ ಪಾಟೀಲ ಅವರ ಹೆಸರನ್ನು ಕಾಂಗ್ರೆಸ್‌ ಹೈಕಮಾಂಡ್‌ಗೆ ನೀಡಿದೆ. ಒಂದು ವೇಳೆ ಪಕ್ಷ ಮುಸ್ಲಿಂ ಅಲ್ಪಸಂಖ್ಯಾತರಿಗೆ ಟಿಕೆಟ್‌ ಕೊಡಲು ನಿರ್ಧರಿಸಿದರೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಲೀಂ ಅಹ್ಮದ್‌, ಶಾಕಿರ್‌ ಸನದಿ ಹೆಸರು ಪ್ರಮುಖವಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next