Advertisement

Karnataka Election 2023;ಹಾವೇರಿ ಮೀಸಲು ಕ್ಷೇತ್ರ,ಹಾನಗಲ್ಲ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ

08:12 AM Apr 13, 2023 | Team Udayavani |

ಹಾವೇರಿ: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ತಡರಾತ್ರಿ ಬಿಡುಗಡೆ ಮಾಡಿದ್ದು ಹಾವೇರಿ ಮೀಸಲು ಕ್ಷೇತ್ರಕ್ಕೆ ಅಚ್ಚರಿ ಅಭ್ಯರ್ಥಿ ಎಂಬಂತೆ ಬ್ಯಾಡಗಿ ಗ್ರೇಡ್-2 ತಹಸೀಲ್ದಾರ ಆಗಿದ್ದ ಗವಿಸಿದ್ದಪ್ಪ ದ್ಯಾಮಣ್ಣನವರ ಹಾಗೂ ಹಾನಗಲ್ಲ ಕ್ಷೇತ್ರಕ್ಕೆ ಮಾಜಿ ಶಾಸಕ ಶಿವರಾಜ ಸಜ್ಜನರ ಅವರನ್ನು ಘೋಷಣೆ ಮಾಡಲಾಗಿದೆ.

Advertisement

ಹಾವೇರಿ ಕ್ಷೇತ್ರದಲ್ಲಿ ಹಾಲಿ ಶಾಸಕ ನೆಹರು ಓಲೇಕಾರ ಇದ್ದರೂ ಕೂಡ ಈ ಬಾರಿ ಅಚ್ಚರಿ ಎಂಬಂತೆ ಹೊಸ ಮುಖಕ್ಕೆ ಬಿಜೆಪಿ ಹೈ ಕಮಾಂಡ್ ಮಣೆ ಹಾಕಿದೆ. ಈ ಮೂಲಕ ಶಾಸಕ ನೆಹರು ಓಲೇಕಾರ ಅವರಿಗೆ ಕೋಕ್ ನೀಡಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಾಸಕ ಓಲೇಕಾರ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಸೇರಿದಂತೆ ವಿವಿಧ ಕಾರಣದಿಂದ ಓಲೇಕಾರ್‌ಗೆ ಟಿಕೆಟ್ ಕೈ ತಪ್ಪಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬ್ಯಾಡಗಿ ಗ್ರೇಡ್-2 ತಹಶೀಲ್ದಾರ್ ಆಗಿದ್ದ ಗವಿಸಿದ್ದಪ್ಪ ಅವರು ತಮ್ಮ ಹುದ್ದೆಗೆ ಈಚೆಗೆ ರಾಜೀನಾಮೆ ಸಲ್ಲಿಸಿ, ಬಿಜೆಪಿ ಟೆಕೆಟ್ ಆಕಾಂಕ್ಷಿಯಾಗಿದ್ದರು. ಇವರು 2018ರ ಚುನಾವಣೆಯಲ್ಲೂ ಬಿಜೆಪಿ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಅಚ್ಚರಿ ಎಂಬಂತೆ ಈ ಬಾರಿ ಬಿಜೆಪಿ ಹೈಕಮಾಂಡ್ ಅವರ ಕನಸು ನನಸಾಗಿದೆ.

ಹಾನಗಲ್ಲ  ಕ್ಷೇತ್ರದಲ್ಲಿ 2021ರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ವಿರುದ್ಧ ಸೋಲು ಅನುಭವಿಸಿದ್ದ ಸಜ್ಜನರ ಅವರಿಗೆ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ಸೋತ ನಂತರವೂ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ಅವರು ತೊಡಗಿಕೊಂಡು ಗಮನ ಸೆಳೆದಿದ್ದರು.

ನೆಹರು ಓಲೇಕಾರ ಕೈ ತಪ್ಪಿದ ಟಿಕೆಟ್..

Advertisement

ನಗರಸಭೆಗೆ ಅನುದಾನ ಹಂಚಿಕೆಯಲ್ಲಿ ಸ್ವಜನ ಪಕ್ಷಪಾತ ಹಾಗೂ ಭ್ರಷ್ಟಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ನೆಹರು ಓಲೇಕಾರ ಮತ್ತು ಅವರ ಇಬ್ಬರು ಪುತ್ರರನ್ನು ಜನಪ್ರತಿನಿಧಿಗಳ ನ್ಯಾಯಾಲಯ ಈಚೆಗೆ ದೋಷಿ ಎಂದು ತೀರ್ಮಾನಿಸಿ ಎರಡು ವರ್ಷ ಶಿಕ್ಷೆ ವಿಧಿಸಿತ್ತು. ಶಿಕ್ಷೆ 3 ವರ್ಷಗಳಿಗಿಂತ ಕಡಿಮೆ ಇರುವ ಕಾರಣ ಇದೇ ನ್ಯಾಯಾಲಯ ಜಾಮೀನನ್ನು ಮಂಜೂರು ಮಾಡಿತ್ತು.  ನೆಹರು ಅವರು ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಇದರಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಇದ್ದ ಅಡ್ಡಿ-ಆತಂಕ ದೂರವಾಗಿದೆ ಎಂದು ನಿರಾಳವಾಗಿದ್ದರು. ಆದರೆ, ಬಿಜೆಪಿ ಟಿಕೆಟ್ ಕೈತಪ್ಪಿರುವ ಕಾರಣ ತೀವ್ರ ನಿರಾಸೆಯಾಗಿದ್ದು, ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next