Advertisement

ನಿಮ್ಮ ಸಂಬಂಧಗಳ ಸಾಫ್ಟ್ವೇರ್‌ ಅಪ್ಡೇಟ್‌ ಮಾಡಿದ್ದೀರಾ?

10:10 AM Jan 19, 2020 | mahesh |

ನಾವು ಯಾರೆಡೆಗಾದರೂ ಆಕರ್ಷಿತರಾಗಿದ್ದರೆ ಅವರನ್ನು ಮೆಚ್ಚಿಸಲು, ಅವರನ್ನು ಖುಷಿಪಡಿಸಲು ಎಷ್ಟೆಲ್ಲ ಪ್ರಯತ್ನಪಡುತ್ತೇವೆ ಎನ್ನುವುದೇ ಅದ್ಭುತ ಸಂಗತಿ. ಅವರಿಗಾಗಿ ಚೆನ್ನಾಗಿ ಡ್ರೆಸ್‌ ಮಾಡಿಕೊಳ್ಳುತ್ತೇವೆ, ಉತ್ತಮ ಡಿಯೋಡ್ರೆಂಟ್‌ ಬಳಸಿ ಘಮಘಮಿಸುತ್ತೇವೆ, ಮೌತ್‌ವಾಶ್‌ ಬಳಸುತ್ತೇವೆ, ನಗುನಗುತ್ತಾ ಮಾತನಾಡುತ್ತೇವೆ, ಅವರ ಮಾತುಗಳನ್ನು ಗಮನವಿಟ್ಟು ಕೇಳಿಸಿಕೊಳ್ಳುತ್ತೇವೆ, ಕಾಳಜಿ ಮಾಡುತ್ತೇವೆ, ಯಾವುದೇ ಕಾರಣಕ್ಕೂ ಮಾತು ಬೋರಾಗದಂತೆ ಎಚ್ಚರಿಕೆ ವಹಿಸುತ್ತೇವೆ. ಒಟ್ಟಲ್ಲಿ ಇಡೀ ಜಗತ್ತು ತಮ್ಮ ಸುತ್ತಲೇ ಸುತ್ತುತ್ತಿದೆಯೇನೋ ಎಂದು ಅವರಿಗೆ ಅನ್ನಿಸುವ ಹಾಗೆ ನಡೆದುಕೊಳ್ಳುತ್ತೇವೆ. ಆದರೆ ಅಚ್ಚರಿ ಹುಟ್ಟಿಸುವ ಸಂಗತಿಯೆಂದರೆ, ಇದೇ ಜೋಡಿ ಒಮ್ಮೆ ದಾಂಪತ್ಯ ಜೀವನಕ್ಕೆ ಪ್ರವೇಶಿಸುತ್ತಿದ್ದಂತೆಯೇ ಸಂಪೂರ್ಣ ಚಿತ್ರಣ ನಾಟಕೀಯವಾಗಿ ಬದಲಾಗಿಬಿಡುತ್ತದೆ.

Advertisement

ಹೇಗೆಗೋ ಬಟ್ಟೆ ಧರಿಸಲಾರಂಭಿಸುತ್ತೇವೆ, ಆಫೀಸುಗಳಲ್ಲಿ ಹೆಚ್ಚು ಸಮಯ ಕಳೆಯಲಾರಂಭಿಸುತ್ತೇವೆ, ಮುಖ ಗಂಟಿಕ್ಕಿಕೊಂಡೇ ಮನೆಗೆ ಹಿಂದಿರುಗುತ್ತೇವೆ, ಸಂಗಾತಿಯ ಮೇಲೆ ನಮ್ಮ ಸಕಲ ಸಿಟ್ಟನ್ನೂ ಹೊರಹಾಕುತ್ತೇವೆ ಅಥವಾ ರೇಗಲಾರಂಭಿಸುತ್ತೇವೆ. ಇಷ್ಟೆಲ್ಲ ಆದಮೇಲೆ, “”ಅದೇಕೆ ನಮ್ಮ ಸಂಬಂಧದಲ್ಲಿ ಮೊದಲಿದ್ದ ಆಕರ್ಷಣೆ ಉಳಿದಿಲ್ಲ? ಅದೇಕೆ ಆ ಮ್ಯಾಜಿಕ್‌ ಇಲ್ಲ? ಸಂತೋಷವಿಲ್ಲ?” ಎಂದು ಚಿಂತೆ ಪಡಲಾರಂಭಿಸುತ್ತೇವೆ. ನೀವು ನಿಮ್ಮ ವೃತ್ತಿ ಜೀವನಕ್ಕಾಗಿ 10 ಗಂಟೆಗಳನ್ನು ವ್ಯಯಿಸುತ್ತೀರಿ, ಆ ವೃತ್ತಿಯಲ್ಲಿ ಯಶಸ್ವಿಯಾಗಲು ಬಯಸುತ್ತೀರಿ ಎಂದಾದರೆ ಅದಕ್ಕಾಗಿ ನಿರಂತರ ಪ್ರಯತ್ನ ಪಡುತ್ತೀರಲ್ಲವೇ? ಕ್ರಿಯಾಶೀಲತೆಯನ್ನುಪ್ರದರ್ಶಿಸುತ್ತೀರಲ್ಲವೇ? ಶ್ರಮ ಹಾಕುತ್ತೀರಲ್ಲವೇ? ಹಾಗಿದ್ದರೆ ನಿಮ್ಮ ಸಂಬಂಧವೂ ಕೂಡ ಈ ಎಲ್ಲಾ ಅಂಶಗಳನ್ನು ನಿಮ್ಮಿಂದ ನಿರೀಕ್ಷಿಸುತ್ತದೆ.

ಇದರರ್ಥ, ಪ್ರತಿ ದಿನವೂ ನೀವು ನಿಮ್ಮ ಸಂಬಂಧಕ್ಕೇ ಮೊದಲ ಆದ್ಯತೆ ಕೊಡಬೇಕು ಎಂದೇನೂ ಅಲ್ಲ. ಆದರೆ ಆ ಸಂಬಂಧವನ್ನು ನಿಷ್ಕ್ರಿಯವಾಗಿಸಬಾರದಲ್ಲವೇ? ಸಂಬಂಧಗಳು ನಿರ್ಮಾಣವಾಗುವುದು ಭಾವನಾತ್ಮಕ ಹೂಡಿಕೆಗಳ ಮೇಲೆ. ಒಂದು ಸಾಫ್ಟ್ವೇರ್‌ ಪ್ರೋಗ್ರಾಂನಂತೆ ಅವುಗಳು ಕೂಡ ನಿರಂತರ ಅಪ್ಡೆàಟ್‌(ಪರಿಷ್ಕರಣೆ) ಬೇಡುತ್ತವೆ. ಜನರು ನಿರಂತರವಾಗಿ ಬದಲಾಗುತ್ತಿರುತ್ತಾರೆ, ಅವರ ಅಗತ್ಯಗಳು ಪರಿಷ್ಕರಣೆಯಾಗುತ್ತಿರುತ್ತವೆ ಮತ್ತು ಎಲ್ಲರಿಗೂ ನಿತ್ಯ ಪ್ರೀತಿ, ಮಮತೆ, ಕಾಳಜಿಯ ಅಗತ್ಯವಿರುತ್ತದೆ. ಈ ವಿಷಯದಲ್ಲಿ ಅಭಾವ ಸೃಷ್ಟಿಯಾಗುತ್ತಾ ಹೋದರೆ, ಸಂಬಂಧ ಸವಕಲಾಗುತ್ತಾ ಸಾಗುತ್ತದೆ. ಈ ಬಗ್ಗೆ ನಾವೆಲ್ಲ ಗಂಭೀರವಾಗಿ ವಿಚಾರ ಮಾಡಲೇಬೇಕು. ಜೀವನ ಪರ್ಯಂತದ ಸಂಬಂಧಗಳನ್ನು ಕಾಯ್ದುಕೊಳ್ಳಲು ಎದುರಾಗುತ್ತಿರುವ ಅಡಚನೆೆಗಳು ಯಾವುವು ಎನ್ನುವುದನ್ನು ಗುರುತಿಸಿ ಅವುಗಳನ್ನುದೂರ ಮಾಡಿಕೊಳ್ಳಬೇಕು, ಸಂಗಾತಿಯೊಂದಿಗೆ ಕೂತು ಮಾತನಾಡಬೇಕು ಮತ್ತು ಸಂಬಂಧದಲ್ಲಿ ಒಂದು ಬದ್ಧತೆಯನ್ನು ಬೆಳೆಸಿಕೊಳ್ಳಬೇಕು.

ನಾನು ಮತ್ತು ನಾನು ಮದುವೆಯಾಗಲಿರುವ ವ್ಯಕ್ತಿ ನಮ್ಮ ವೃತ್ತಿಪರ ಭವಿಷ್ಯವನ್ನು ಕಟ್ಟಿಕೊಳ್ಳುವಲ್ಲಿ ನಿರತರಾಗಿದ್ದೇವೆ. ಇದಕ್ಕಾಗಿ 10-12 ಗಂಟೆಗಳನ್ನು ವಿನಿಯೋಗಿಸಬೇಕಾಗುತ್ತದೆ. ಆದರೂ ನಮ್ಮ ಈ ಸಂಬಂಧವನ್ನು ಪೋಷಿಸಬೇಕು, ಜೋಪಾನ ಮಾಡಬೇಕು ಎನ್ನುವ ಸ್ಪಷ್ಟ ಅರಿವು ನಮಗಿದೆ.

ನಾವು ರೂಪಿಸಿಕೊಂಡಿರುವ ನಿಯಮ ತುಂಬಾ ಸರಳವಾಗಿದೆ: ಪ್ರತಿದಿನ ಬೆಳಗ್ಗೆ ಕನಿಷ್ಠ 20 ನಿಮಿಷವಾದರೂ ಚಹಾ ಕುಡಿಯುತ್ತಾ ಮಾತನಾಡುತ್ತೇವೆ. ಆ ಸಮಯದಲ್ಲಿ ಯಾವುದೇ ಫೋನ್‌, ಕಂಪ್ಯೂಟರ್‌ ಬಳಸುವುದಿಲ್ಲ. ದಿನದ ಈ ಆರಂಭಿಕ ಸಮಯವನ್ನು ಒಂದಿಷ್ಟು ಮಾತನಾಡಲು, ನಗಲು, ವಿಷಯಗಳನ್ನು ಹಂಚಿಕೊಳ್ಳಲು ಬಳಸಿಕೊಳ್ಳುತ್ತೇವೆ. ಎಲ್ಲಕ್ಕಿಂತ ಮುಖ್ಯವಾಗಿ, ರಾತ್ರಿ 8 ಗಂಟೆಯ ನಂತರ ನಮ್ಮ ಎಲ್ಲಾ ವೃತ್ತಿಪರ ಕೆಲಸಗಳನ್ನೂ ನಿಲ್ಲಿಸುತ್ತೇವೆ. ಭಾನುವಾರ ಇಬ್ಬರೂ ಜತೆಗೆ ತಪ್ಪದೇ ಸಮಯ ಕಳೆಯುತ್ತೇವೆ. ಬೀಚ್‌ನಲ್ಲಿ ಸಮಯ ಕಳೆಯುವುದನ್ನು, ರಾತ್ರಿ ಜತೆಯಾಗಿ ಹೊರಗೆ ಊಟಕ್ಕೆ ಹೋಗುವುದನ್ನು, ಜತೆ ಕುಳಿತು ಸಿನೆಮಾ ನೋಡುವುದನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ. ನಾವು ಜತೆಗೆ ಹೆಜ್ಜೆ ಹಾಕುತ್ತಾ ನಡೆದೆವೆಂದರೆ ಆ ಸಮಯವು ಆಹ್ಲಾದಕಾರಿಯಾಗಿರಬೇಕು ಎನ್ನುವ ಗುರಿ ಬೇಕು.

Advertisement

ಅತ್ಯಂತ ಬೇಸರದಲ್ಲಿ ಬದುಕು ಕಳೆಯುವ ವ್ಯಕ್ತಿ ನೀವಾಗಬೇಕೇ? ಯಾರೂ ನಿಮ್ಮನ್ನು ಪ್ರೀತಿಸರು ಎಂಬ ಭಾವನೆಯಲ್ಲಿ ಆಯುಷ್ಯ ಸವೆಯಬೇಕೇ? ಸಂಬಂಧದಲ್ಲಿ ಅದ್ಹೇಗೋ ಮ್ಯಾಜಿಕ್‌ ನಡೆದು ಎಲ್ಲಾ ಸುಧಾರಿಸಿಬಿಡುತ್ತದೆ ಎಂಬ ಪ್ರಯತ್ನವಿಲ್ಲದ ಭ್ರಮೆಯಲ್ಲಿ ಬದುಕಬೇಕೇ? ಬೇಡ ತಾನೆ? ಇಂಥ ಸ್ಥಿತಿ ಬರಬಾರದು ಎಂದರೆ, ನಿಮ್ಮ ಸಂಬಂಧವನ್ನು ಸದಾ ಚಲನಶೀಲವಾಗಿ ಇಡುವಂಥ ನಿಯಮಗಳನ್ನು ರೂಪಿಸಿಕೊಳ್ಳಿ, ಸಂಬಂಧವನ್ನು ಗಟ್ಟಿಯಾಗಿಸಲು ಇಬ್ಬರೂ ಪ್ರಯತ್ನಿಸಿ…ಎಷ್ಟಿದ್ದರೂ ಜೀವಮಾನದುದ್ದಕ್ಕೂ ಜತೆಗೆ ಇರಬೇಕಲ್ಲವೇ? ಹಾಗಿದ್ದರೆ, ಆ ಸಂಬಂಧಕ್ಕೆ ಮೌಲ್ಯ ಕೊಡಿ.

ಮಕ್ಕಳ ಮೇಲೆ ನಿಮಗೆಷ್ಟಿದೆ ಅಧಿಕಾರ?
ನನ್ನ ಮಗಳು ಅಲಯಾಳ ಚೊಚ್ಚಲ ಸಿನೆಮಾ ಈ ತಿಂಗಳು ಬಿಡುಗಡೆಯಾಗಲಿದೆ. ಇದು ನನಗೆ ಹೃದಯಬಡಿತ ಹೆಚ್ಚಿಸುವಂಥ ಸಮಯ. ಕಾಳಜಿಯಿಂದ ಪೋಷಿಸಿದ, ಪ್ರೀತಿ ಹರಿಸಿ ಬೆಳೆಸಿದ ನಮ್ಮದೇ ಬೇರುಗಳು ಈ ರೀತಿ ರೆಕ್ಕೆ ಅಗಲಿಸಿ ಹಾರುವುದಕ್ಕೆ ಸಿದ್ಧವಾಗುವ ಸಮಯದಲ್ಲಿ ಪ್ರತಿಯೊಬ್ಬ
ಪೋಷಕರಿಗೂ ಇಂಥ ಉತ್ಸಾಹ, ಆತಂಕ, ಸಂತೋಷ ಎಲ್ಲವೂ ಒಟ್ಟೊಟ್ಟಿಗೇ ಆಗುವುದುಂಟು. ಹಾಗೆಂದು, ಇದೆಲ್ಲ “ನನ್ನ’ ಮಗಳು ಮಾಡಿದ್ದು, “ನನ್ನ ‘ ಪ್ರಯತ್ನ ಸಾರ್ಥಕವಾಯಿತು, “ನನ್ನ’ ಹೂಡಿಕೆಯ ಫ‌ಲ, “ನನ್ನ’ ಮಕ್ಕಳು ಹೆಮ್ಮೆ ಪಡುವಂತೆ ಮಾಡುತ್ತಾರೆ…ಎಂದು ಹೇಳುವುದು ತುಂಬಾ ತಪ್ಪು.

ಅನೇಕ ಪೋಷಕರು ತಮ್ಮ ಮಕ್ಕಳ ಮೇಲೆ ಒಂದು ರೀತಿಯ ಮಾಲೀಕತ್ವದ ಭಾವನೆ, ನಿಯಂತ್ರಣ ಹೊಂದಿರುತ್ತಾರೆ. ಆದರೆ, ನಾವು ಮಕ್ಕಳನ್ನು ಈ ಜಗತ್ತಿಗೆ ತರುವುದು ಈ ಕಾರಣಕ್ಕಾಗಿಯೇನು? ಪೋಷಕರಾಗಿ ನಮ್ಮ ಜವಾಬ್ದಾರಿಯು ಅವರಿಗೆ ಮಾರ್ಗದರ್ಶನ ನೀಡುವುದು ಆಗಿರಬೇಕೇ ಹೊರತು, ಅವರನ್ನು ನಿಯಂತ್ರಿಸುವುದು ಅಲ್ಲ. ಅವರನ್ನು ಪೋಷಿಸುವ ಉದ್ದೇಶದಲ್ಲಿ ಉದಾರತೆ ಇರಬೇಕೇ ಹೊರತು, ಹೂಡಿಕೆಗೆ ಪ್ರತಿಫ‌ಲ ಸಿಗಬೇಕು ಎಂದಲ್ಲ.

ನಾವು ಅವರನ್ನು ಈ ಜಗತ್ತಿಗೆ ಕರೆತಂದದ್ದು, ನಮಗೆ ಅವರು ಬೇಕು ಎಂಬ ಕಾರಣಕ್ಕಾಗಿಯೇ ಹೊರತು, ಅವರಿಗೆ ನಾವು ಬೇಕಾಗಿದ್ದೆವು ಎಂಬ ಕಾರಣಕ್ಕಾಗಿ ಅಲ್ಲ. ನಮಗೆ ಒಂದು “ಫ್ಯಾಮಿಲಿ’ಯನ್ನು ರಚಿಸಬೇಕು, ಪೋಷಕರಾಗಬೇಕು ಎಂಬ ಆಸೆಯಿದ್ದ ಕಾರಣ ಅವರು ಈ ಜಗತ್ತಿಗೆ ಬಂದಿದ್ದಾರೆ. ನೀವು ಮಕ್ಕಳ ಮೇಲೆ ಸಮಯ, ಶಕ್ತಿ, ಪ್ರೀತಿ, ಹಣ ಅಥವಾ ಏನೇ ಹೂಡಿಕೆ ಮಾಡಿರಲಿ…ಒಂದಂತೂ ನಿಶ್ಚಿತ, ನೀವು ಅದ್ಭುತ ಪೋಷಕರಾಗಿದ್ದರೆ, ನಿಮ್ಮ ಮಕ್ಕಳು ಆಟೊಮೆಟಿಕ್‌ ಆಗಿ ನಿಮ್ಮನ್ನು ಪ್ರೀತಿಸಲಾರಂಭಿಸುತ್ತಾರೆ, ನಿಮ್ಮ ಬಗ್ಗೆ ಕಾಳಜಿ ಮಾಡುತ್ತಾರೆ, ನಿಮ್ಮ ಜತೆಗಿರಲು ಬಯಸುತ್ತಾರೆ, ನಿಮ್ಮ ಜತೆ ತಮ್ಮ ಸುಖ, ದುಃಖ, ಸಂತೋಷ, ಯಶಸ್ಸನ್ನು ಹಂಚಿಕೊಳ್ಳಲು ಬಯಸುತ್ತಾರೆ. ಈ ವಿಚಾರದಲ್ಲಿ ನಾನು ಯಾವಾಗಲೂ ಖಲೀಲ್‌ ಗಿಬ್ರಾನನ ಕವಿತೆಯನ್ನು ನೆನಪಿಸಿಕೊಳ್ಳುತ್ತಿರುತ್ತೇನೆ. ಆ ಕವಿ ಹೇಳುವುದು ಹೀಗೆ:

“”ನಿಮ್ಮ ಮಕ್ಕಳು, ನಿಮ್ಮ ಮಕ್ಕಳಲ್ಲ…ಅವರು ಖುದ್ದು ಈ ಬದುಕಿನ ಆಕಾಂಕ್ಷೆಗಳ ಮಗ-ಮಗಳು. ಅವರು ನಿಮ್ಮ ಮೂಲಕ ಬರುತ್ತಾರೆ, ನಿಮ್ಮಿಂದಾಗಿ ಅಲ್ಲ. ಅವರು ನಿಮ್ಮ ಜತೆಗಿರುತ್ತಾರೆ, ಆದರೆ ನಿಮ್ಮವರಲ್ಲ…ನೀವು ಅವರಿಗೆ ಮನೆ ಕೊಡಬಹುದು, ಪ್ರೀತಿ ಕೊಡಬಹುದು…ಆದರೆ ಯೋಚನೆಗಳನ್ನಲ್ಲ. ಏಕೆಂದರೆ, ಅವರಿಗೆ ಅವರದ್ದೇ ಆದ ಯೋಚನೆಗಳಿವೆ. ನೀವು ಅವರ ಶರೀರಕ್ಕೆ ಮನೆ ಕೊಡಬಹುದು, ಅವರ ಆತ್ಮಗಳಿಗಲ್ಲ. ಏಕೆಂದರೆ, ಅವರ ಆತ್ಮಗಳು ನಾಳೆಯೆಂಬ ಮನೆಗಳಲ್ಲಿ ಇರುತ್ತವೆ. ಅಲ್ಲಿಗೆ ನೀವು ಹೋಗಲಾರಿರಿ (ನಿಮ್ಮ ಕನಸಿನಲ್ಲೂ ಸಹ). ನೀವು ಅವರಂತೆ ಆಗಲು ಪ್ರಯತ್ನಿಸಬಹುದಷ್ಟೇ, ಅವರು ನಿಮ್ಮಂತೆ ಆಗಲಾರರು…”

ಅತ್ಯಂತ ಬೇಸರದಲ್ಲಿ ಬದುಕು ಕಳೆಯುವ ವ್ಯಕ್ತಿ ನೀವಾಗಬೇಕೇ? ಯಾರೂ ನಿಮ್ಮನ್ನು ಪ್ರೀತಿಸರು ಎಂಬ
ಭಾವನೆಯಲ್ಲಿ ಆಯುಷ್ಯ ಸವೆಯಬೇಕೇ?

ನೀವು ಅವರಿಗೆ ಮನೆ ಕೊಡಬಹುದು, ಪ್ರೀತಿ ಕೊಡಬಹುದು. ಆದರೆ ಯೋಚನೆಗಳನ್ನಲ್ಲ. ಅವರಿಗೆ
ಅವರದ್ದೇ ಆದ ಯೋಚನೆಗಳಿವೆ…

ಪೂಜಾ ಬೇಡಿ, ಲೇಖಕಿ, ನಟಿ

Advertisement

Udayavani is now on Telegram. Click here to join our channel and stay updated with the latest news.

Next