Advertisement

ಶಾಸಕರೇ ನೀವೇ ಪ್ರತಿಭಟಿಸಿದ್ದ ರಸ್ತೆ ಅಭಿವೃದ್ಧಿ ಮರೆತಿರಾ?

09:37 PM Sep 15, 2019 | Lakshmi GovindaRaju |

ಸಂತೆಮರಹಳ್ಳಿ: ಕಳೆದ ಎರಡು ವರ್ಷಗಳ ಹಿಂದೆ ಎನ್‌. ಮಹೇಶ್‌ ಸಂತೆಮರಹಳ್ಳಿಯಿಂದ ಮೂಗೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸರಿಯಿಲ್ಲ ಎಂದು ರಸ್ತೆಯ ಹಳ್ಳಗಳಿಗೆ ಮಣ್ಣನ್ನು ಹಾಕುವ ಮೂಲಕ ಪ್ರತಿಭಟಿಸಿದ್ದರು. ಆದರೆ ಪ್ರಸ್ತುತ ಶಾಸಕರಾಗಿ ಆಯ್ಕೆಯಾಗಿ ಒಂದೂವರೆ ವರ್ಷ ಕಳೆದರೂ ಈ ರಸ್ತೆ ಅಭಿವೃದ್ಧಿ ಪಡಿಸುವಲ್ಲಿ ನಿರ್ಲಕ್ಷಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

Advertisement

ಬೆಂಗಳೂರಿನಿಂದ ದಿಂಡಿಗಲ್ಲಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 209 ಹಾಗೂ ಮೈಸೂರು, ಕೊಳ್ಳೇಗಾಲ ಮಾರ್ಗವಾಗಿ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 211 ಇದನ್ನು ಜೋಡಿಸುವ ಸಂತೆಮರಹಳ್ಳಿಯಿಂದ ಮೂಗುರು ಗ್ರಾಮದ ಬಳಿಗೆ ಸಂಪರ್ಕ ಕಲ್ಪಿಸುವ ಸುಮಾರು 8 ಕಿ.ಮೀ ರಸ್ತೆ ದೊಡ್ಡ ಹೊಂಡಗಳಾಗಿ ಮಾರ್ಪಟ್ಟಿದ್ದು ಇದನ್ನು ದಾಟಲು ಅರ್ಧ ಗಂಟೆಗೂ ಹೆಚ್ಚು ಸಮಯ ವ್ಯರ್ಥವಾಗುವ ಸ್ಥಿತಿ ಇದೆ.

ಲೋಕೋಪಯೋಗಿ ಇಲಾಖೆ ರಸ್ತೆ: ಈ ರಸ್ತೆ ಅತ್ತ ರಾಜ್ಯ ಹೆದ್ದಾರಿಯೂ ಅಲ್ಲದೆ, ಇತ್ತ ರಾಷ್ಟ್ರೀಯ ಹೆದ್ದಾರಿಗೂ ಸೇರದ ಲೋಕೋಪಯೋಗಿ ಇಲಾಖೆಯ ಈ ರಸ್ತೆಯಲ್ಲಿ ವಾಹನ ಸಂಚಾರ ದುಸ್ತರವಾಗುತ್ತಿದೆ. ಈ ಹಿಂದೆ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಪ್ರಯತ್ನಕ್ಕೆ ಕೈಹಾಕಲಾಗಿದ್ದರೂ ಯಾರೂ ಕೂಡ ಇದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಬೇರೆ ರಾಜ್ಯಗಳಿಗೆ ಸಂಪರ್ಕಿಸುವ ರಸ್ತೆ: ಸಂತೆಮರಹಳ್ಳಿ ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಸೇರುವ ಜಂಕ್ಷನ್‌ ಆಗಿದೆ. ಇಲ್ಲಿಂದ ಚಾಮರಾಜನಗರದ ಮಾರ್ಗವಾಗಿ ತಮಿಳುನಾಡು ಸೇರುವ, ಗುಂಡ್ಲುಪೇಟೆ ಮಾರ್ಗವಾಗಿ ಕೇರಳ ಹಾಗೂ ತಮಿಳುನಾಡುಗಳನ್ನು ಸಂಪರ್ಕಿಸುವ ಹೆದ್ದಾರಿಗಳು ಹಾದು ಹೋಗುತ್ತದೆ. ಮೈಸೂರು ಮಾರ್ಗವಾಗಿ ಅನೇಕ ಸರಕು ಸಾಗಣೆ ವಾಹನಗಳು ಸಂಚರಿಸುವುದೇ ಇಲ್ಲಿಂದ. ರೈತರು ಬೆಳೆದ ತರಕಾರಿಗಳನ್ನು ಹೊತ್ತೂಯ್ಯುವ ವಾಹನಗಳ ಸಂಚಾರವಾಗುವುದೇ ಈ ಮಾರ್ಗದಲ್ಲಿ.

ಅಪಘಾತಗಳಿಗೆ ಲೆಕ್ಕವಿಲ್ಲ: ಸಂತೆಮರಹಳ್ಳಿ ಗ್ರಾಮದ ಸೆಸ್ಕ್ ಕಚೇರಿಯ ಬಳಿಯಿಂದ ಮೂಗೂರು ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 211 ರ ತನಕವೂ ಈ ರಸ್ತೆ ತುಂಬಾ ಹಾಳಾಗಿದೆ. ಬಾಣಹಳ್ಳಿ, ಗೇಟ್‌ ಬಳಿಯಲ್ಲಿ ದೊಡ್ಡ ಹಳ್ಳಗಳು ಬಿದ್ದಿದ್ದು ಅನೇಕ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಇಲ್ಲಿಂದ ಮುಂದೆ ರಸ್ತೆಯ ಒಂದು ಭಾಗ ಸಂಪೂರ್ಣ ಕುಸಿದಿದ್ದು ಒಂದೂವರೆ ಅಡಿಗೂ ಹೆಚ್ಚು ಆಳವಾಗಿದೆ. ಹಾಗಾಗಿ ಒಂದು ಭಾಗ ಉಬ್ಬಿದ್ದರೆ ಮತ್ತೂಂದು ಭಾಗ ಹಳ್ಳದಿಂದ ಕೂಡಿದ್ದು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಈ ಸ್ಥಳದಲ್ಲಿ ಇತ್ತಿಚೆಗೆ ಟ್ರಾಕ್ಟರ್‌ ಕೂಡ ಮುಗಚಿಕೊಂಡಿತ್ತು.

Advertisement

ಭರವಸೆ ನೀಡಿ ಮರೆತ ಶಾಸಕ: ಇದು ಹಳ್ಳಬಿದ್ದು ವರ್ಷವೇ ಉರುಳಿದೆ. ಇದರ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಲಕ್ಷಾಂತರ ಹಣ ವಿನಿಯೋಗಿಸಿ ಪೋಲು ಮಾಡಲಾಗಿದೆ. ಇದರ ಬದಲು ಹೊಸ ರಸ್ತೆ ನಿರ್ಮಾಣ ಮಾಡಿದರೆ ಇಲ್ಲಿನ ಜನರ ಬವಣೆ ನೀಗುವ ಜೊತೆಗೆ ನಮಗೂ ಕೂಡ ಅನುಕೂಲವಾಗುತ್ತದೆ. ಈಗ ಕ್ಷೇತ್ರದಲ್ಲಿ ಹೊಸ ನಿರೀಕ್ಷೆಗಳನ್ನಿಟ್ಟು ಜನರು ಬಿಎಸ್‌ಪಿಯ ನೂತನ ಶಾಸಕ ಎನ್‌, ಮಹೇಶ್‌ ಅವರನ್ನು ಆಯ್ಕೆ ಮಾಡಿದ್ದಾರೆ. ಅವರೂ ಕೂಡ ಮೈಸೂರಿಗೆ ಇದೇ ಮಾರ್ಗವಾಗಿ ತೆರಳುತ್ತಾರೆ. ಚುನಾವಣೆ ಸಂದರ್ಭದಲ್ಲಿ ರಸ್ತೆಯನ್ನು ದುರಸ್ತಿ ಮಾಡುವ ಬಗ್ಗೆ ಭರವಸೆಯನ್ನೂ ನೀಡಿದ್ದಾರೆ. ಹಾಗಾಗಿ ಇದರ ಬಗ್ಗೆ ಕಾಳಜಿ ವಹಿಸಿ ರಸ್ತೆ ರಿಪೇರಿ ಮಾಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ ಎಂಬುದು ಇಲ್ಲಿನ ನಾಗರಿಕರ ಆಗ್ರಹವಾಗಿದೆ.

ಮಣ್ಣು ಹಾಕಿ ಮರೆತ ಶಾಸಕ: ಕಳೆದ 2 ವರ್ಷಗಳ ಹಿಂದೆ ಶಾಸಕರಾಗಿದ ಎಸ್‌. ಜಯಣ್ಣ ಅವರು ಈ ರಸ್ತೆಯ ಅಭಿವೃದ್ಧಿ ಮಾಡಿಲ್ಲ ಎಂದು ಹಾಲಿ ಶಾಸಕ ಎನ್‌. ಮಹೇಶ್‌ ರಸ್ತೆಯ ಹಳ್ಳಗಳಿಗೆ ಮಣ್ಣು ಹಾಕುವ ಮೂಲಕ ಪ್ರತಿಭಟಿಸಿದರು. ಆದರೆ ಪ್ರಸುತ್ತ ಶಾಸಕರಾಗಿ ಆಯ್ಕೆಯಾಗಿ ಒಂದೂವರೆ ವರ್ಷ ಕಳೆದರೂ ಈ ರಸ್ತೆಯನ್ನು ಉತ್ತಮ ಗುಣಮಟ್ಟದ ರಸ್ತೆಯನ್ನು ಮಾಡುವಲ್ಲಿ ನಿರ್ಲಕ್ಷ್ಯವಹಿಸಿರುವುದು ದೊಡª ದುರಂತ ಎಂದು ಗ್ರಾಮಸ್ಥರಾದ ಮಹಾದೇವಸ್ವಾಮಿ, ಪ್ರಕಾಶ್‌ ದೂರಿದರು.

ಈ ರಸ್ತೆಗೆ 2 ಬಾರಿ ತೇಪೆ ಹಾಕುವ ಕೆಲಸ ಮಾಡಲಾಗಿದೆ. ಆದರೂ ಹಳ್ಳಗಳ ನಿಯಂತ್ರಣ ಸಾಧ್ಯವಾಗಿಲ್ಲ ಹೊಸದಾಗಿ ರಸ್ತೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಡಿಸೆಂಬರ್‌ ತಿಂಗಳಲ್ಲಿ ಅನುದಾನ ಬಿಡುಗಡೆಯಾಗುವ ಸಾಧ್ಯತೆ ಇದ್ದು ಕೆಲಸ ಆರಂಭಿಸಲಾಗುವುದು.
-ಎನ್‌.ಮಹೇಶ್‌, ಶಾಸಕ

* ಫೈರೋಜ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next