ಹಳೆಯಂಗಡಿ: ಶಿಕ್ಷಣದ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆಯುವ ಹೆಣ್ಣು ಮಕ್ಕಳ ಮೇಲೆ ಹೆತ್ತವರು ವಿಶೇಷ ಕಾಳಜಿಯವನ್ನು ವಹಿಸಬೇಕು. ಹದಿಹರೆಯದಲ್ಲಿ ಅವರಲ್ಲಿ ಬದಲಾವಣೆಯಾದಾಗ ಗಮನಿಸುವ ಶಕ್ತಿ ಹೆತ್ತ ತಾಯಿಗೆ ಇದೆ. ಯಾವುದೇ ರೀತಿಯಲ್ಲಿ ಇಲಾಖೆಯ ಪರಿಹಾರ ಪಡೆಯಲು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸಿರಿ ಎಂದು ಮೂಲ್ಕಿ ಅಂಗನವಾಡಿ ವಲಯದ ಮೇಲ್ವಿಚಾರಕಿ ನಾಗರತ್ನಾ ಹೇಳಿದರು.
ಹಳೆಯಂಗಡಿ ಬಳಿಯ ಬೊಳ್ಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ನಡೆದ ಕಿಶೋರಿ ಶಕ್ತಿ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಜಪೆ ವಲಯದ ಮೇಲ್ವಿಚಾರಕಿ ಅಶ್ವಿನಿ ಮಾತನಾಡಿ, ಹೆಣ್ಣು ಮಕ್ಕಳ ಮೇಲಿನ ಮಮತೆ ಹೆತ್ತವರಲ್ಲಿ ಹೆಚ್ಚಾಗಿರಬೇಕು, ಆಕೆಗೆ ತನ್ನ ಜವಾಬ್ದಾರಿ ತಿಳಿಯುವವರೆಗೂ ಹೆತ್ತವರೇ ಜವಾಬ್ದಾರರಾಗಿರುತ್ತಾರೆ. ಸಮಾಜದಲ್ಲಿ ಆಧುನಿಕತೆಯ ಯುಗದಲ್ಲಿ ಹಾದಿ ತಪ್ಪದ ಹಾಗೂ ಸೂಕ್ಷ್ಮ ವಿಚಾರಗಳನ್ನು ಆಕೆಯೊಂದಿಗೆ ಸ್ನೇಹಿತೆಯಾಗಿ ತಿಳಿ ಹೇಳಿರಿ ಎಂದರು.
ಐದು ದಿನಗಳಲ್ಲಿ ನಡೆದ ಈ ತರಬೇತಿಯನ್ನು ಮೂಲ್ಕಿ, ಕಾಟಿಪಳ್ಳ, ಬಜಪೆ ವಲಯದ ಆಂಗನವಾಡಿ ಕಾರ್ಯಕರ್ತೆ, ಸಹಾಯಕಿಯರೊಂದಿಗೆ 30 ಮಂದಿ ಕಿಶೋರಿಯರು ಹಾಗೂ ಅವರ ಹೆತ್ತವರು ಭಾಗವಹಿಸಿದ್ದರು. ಶಿಬಿರದಲ್ಲಿ ಭಾಗವಹಿಸಿ ಕಿಶೋರಿಯರು ತಮ್ಮ ಅಭಿಪ್ರಾಯವನ್ನು ಸಾರ್ವತ್ರಿಕವಾಗಿ ಹೇಳಿಕೊಂಡರು.
ಶಿಬಿರದಲ್ಲಿ ವ್ಯಕ್ತಿತ್ವ ತರಬೇತಿ, ಪರಿಸರ ಸ್ವತ್ಛತೆ, ಆರೋಗ್ಯ, ಯೋಗ ಹಾಗೂ ಮನೆಯಲ್ಲಿಯೇ ತಯಾರಿಸಬಹುದಾದ ಆಟಿಕೆ, ಶೃಂಗಾರ ಸಾಮಗ್ರಿ, ಶಿಕ್ಷಣ, ಉದ್ಯೋಗ, ಸಮಾಜಮುಖಿ ಚಿಂತನೆಯ ಬಗ್ಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.