Advertisement

ಬಹುಕಾಲದ ಸಮಸ್ಯೆಗೆ ಪರಿಹಾರ ಸಿಕ್ಕೀತೇ?: ಶಾಲಾ ಬ್ಯಾಗ್‌ ಭಾರ ಇಳಿಕೆ

07:17 AM Jul 22, 2017 | Team Udayavani |

ಪುಸ್ತಕ ಚೀಲದ ಭಾರಕ್ಕೆ ನಿರ್ದಿಷ್ಟ ಮಾನದಂಡಗಳು ಇಲ್ಲದಿದ್ದರೂ ಮಕ್ಕಳ ತೂಕದ ಶೇ. 10 ಮೀರ ಬಾರದೆಂಬ ಸೂತ್ರವನ್ನು ಹೆಚ್ಚಿನ ದೇಶಗಳು ಅನುಸರಿಸುತ್ತಿವೆ.  

Advertisement

ಶಾಲಾ ಮಕ್ಕಳ ಪಾಟೀ ಚೀಲದ ಭಾರವನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ಮುಂದಾಗಿರುವುದು ಸ್ವಾಗತಾರ್ಹ ನಡೆ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್‌ ಜಾವಡೇಕರ್‌ ಸಂಸತ್ತಿನಲ್ಲಿ ಶಾಲಾ ಮಕ್ಕಳ ಬ್ಯಾಗ್‌ ಭಾರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿರುವ ವಿಚಾರವನ್ನು ತಿಳಿಸಿದ್ದಾರೆ. ಹೊಸ ರಾಷ್ಟ್ರಪತಿಯನ್ನು ಅಭಿನಂದಿಸುವ ಸಂಭ್ರಮದಲ್ಲಿ ಈ ಮಾತು ಮಾಧ್ಯಮಗಳ ಗಮನ ಸೆಳೆದಿಲ್ಲ. ಪುಟಾಣಿಗಳು ತಮಗಿಂತಲೂ ಹೆಚ್ಚಿನ ಭಾರವನ್ನು ಹೊರುವುದನ್ನು ನೋಡುವಾಗ ಕನಿಕರ ಮೂಡುತ್ತದೆ. ನಿತ್ಯ ಇಷ್ಟು ಪುಸ್ತಕಗಳನ್ನು ಹೊತ್ತುಕೊಂಡು ಹೋಗುವ ಅಗತ್ಯವಾದರೂ ಏನು ಎಂಬ ಪ್ರಶ್ನೆ ಕೆಲವರ ಮನಸ್ಸಿನಲ್ಲಾದರೂ ಸುಳಿಯದೆ ಇರಲಾರದು. ಪುಸ್ತಕ ಚೀಲದ ಭಾರ ಕಡಿಮೆ ಮಾಡಲು ಮೊದಲಿನಿಂದಲೂ ಪ್ರಯತ್ನ ನಡೆದಿದ್ದರೂ ಪರಿಣಾಮ ಬೀರಿಲ್ಲ. ಇಂದಿಗೂ ಮಕ್ಕಳು ಕೂಲಿಗಳಂತೆ ಪುಸ್ತಕದ ಮೂಟೆಯನ್ನು ಹೊತ್ತುಕೊಂಡು ಹೋಗುತ್ತಾರೆ. 

ತೆಲಂಗಾಣ ರಾಜ್ಯ ಇತ್ತೀಚೆಗೆ ಪಾಟೀ ಚೀಲದ ತೂಕದ ಕುರಿತು ಕಟ್ಟುನಿಟ್ಟಿನ ಆದೇಶ ಹೊರಡಿಸಿ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಅಲ್ಲಿನ ಸರಕಾರ ಆಯಾಯ ತರಗತಿಗಳಿಗೆ ಪಾಟೀ ಚೀಲದ ಭಾರವನ್ನು ನಿಗದಿಪಡಿಸಿ ಇದನ್ನು ಮೀರಿದರೆ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಅಂತೆಯೇ ತಮಿಳುನಾಡು ಸರಕಾರವೂ ಪುಸ್ತಕ ಚೀಲದ ಭಾರವನ್ನು ಕಡಿಮೆ ಮಾಡಲು ಕೆಲವೊಂದು ಕ್ರಮಗಳನ್ನು ಕೈಗೊಂಡಿದೆ. ಮಹಾರಾಷ್ಟ್ರ ಸರಕಾರ ಪಾಟೀ ಚೀಲದ ಭಾರವನ್ನು ಅಧ್ಯಯನ ಮಾಡುವ ಸಲುವಾಗಿಯೇ ಸಮಿತಿಯೊಂದನ್ನು ನೇಮಿಸಿತ್ತು. ಈ ಸಮಿತಿ ಭಾರ ಕಡಿಮೆ ಮಾಡಲು ಸುಮಾರು 44 ಶಿಫಾರಸುಗಳನ್ನು ಮಾಡಿದೆ. ಪುಸ್ತಕ ಚೀಲದ ಭಾರಕ್ಕೆ ನಿರ್ದಿಷ್ಟ ಮಾನದಂಡಗಳು ಇಲ್ಲದಿದ್ದರೂ ಮಕ್ಕಳ ತೂಕದ ಶೇ. 10 ಮೀರಬಾರದೆಂಬ ಸೂತ್ರವನ್ನು ಹೆಚ್ಚಿನ ದೇಶಗಳು ಅನುಸರಿಸುತ್ತಿವೆ.  ಯುರೋಪ್‌, ಸಿಂಗಾಪುರ, ಅಮೆರಿಕ ಮತ್ತಿತರ ಮುಂದುವರಿದ ದೇಶಗಳಲ್ಲಿ ಈ ಮಾನದಂಡವನ್ನು ಅನುಸರಿಸ ಲಾಗುತ್ತಿದೆ. ಕೆಲವು ದೇಶಗಳು ಶಾಲೆಗೆ ಬೋಧನೆ ವಿಧಾನವನ್ನೇ ಬದಲಾಯಿಸಿ ಪುಸ್ತಕ ಒಯ್ಯುವ ಪದ್ಧತಿಯನ್ನೇ ರದ್ದುಪಡಿಸಿವೆ. ಭಾರೀ ತೂಕದ ಶಾಲಾ ಬ್ಯಾಗ್‌ಗಳನ್ನು ಹೊತ್ತುಯ್ಯುವುದರಿಂದ ಮಕ್ಕಳು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಬೆನ್ನು ನೋವು, ಭುಜ ನೋವು ಮತ್ತಿತರ ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳಲು ಪಾಟೀ ಚೀಲದ ಭಾರವೇ ಕಾರಣ ಎನ್ನುವುದು ವೈಜ್ಞಾನಿಕ ಅಧ್ಯಯನಗಳಿಂದ ದೃಢಪಟ್ಟಿರುವ ವಿಚಾರ. ಅಂತೆಯೇ ಮಕ್ಕಳ ಮಾನಸಿಕ ಸ್ಥಿತಿಯ ಮೇಲೂ ಈ ಭಾರ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಂಡುಕೊಳ್ಳಲಾಗಿದೆ. 

ಪುಸ್ತಕದ ಬ್ಯಾಗಿನಲ್ಲಿ ಪಠ್ಯ ಪುಸ್ತಕದ ಜತೆಗೆ ಒಂದೊಂದು ಪಠ್ಯಕ್ಕೂ ಎರಡೆರಡು ನೋಟ್‌ ಪುಸ್ತಕಗಳು, ವರ್ಕ್‌ ಬುಕ್‌, ಡ್ರಾಯಿಂಗ್‌ ಬುಕ್‌ , ಮ್ಯಾಪ್‌ ಕಂಪಾಸ್‌ ಬಾಕ್ಸ್‌, ಪೆನ್‌ ಬಾಕ್ಸ್‌ ಎಂದು ಹಲವು ಸರಕುಗಳಿರುತ್ತವೆ. ಜತೆಗೆ  ಊಟದ ಬುತ್ತಿಯ ಚೀಲ, ಕೊಡೆ ಹಾಗೂ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಂಗೀತ  ಮತ್ತಿತರ ಚಟುವಟಿಕೆಗಳ ಉಪಕರಣಗಳನ್ನು ಮಗು ಹೊತ್ತು ಕೊಂಡು ಹೋಗಬೇಕು. ಒಂದು ಸಮೀಕ್ಷೆ ಪ್ರಕಾರ ಸರಕಾರಿ ಶಾಲೆಗಳ ಮಕ್ಕಳಿಗಿಂತ ಖಾಸಗಿ ಶಾಲೆಗಳ ಮಕ್ಕಳ ಚೀಲವೇ ಹೆಚ್ಚು ಭಾರವಾಗಿರುತ್ತದೆಯೆಂತೆ. ಕೇರಳದ ಶಾಲೆಯೊಂದು ಮಕ್ಕಳ ಪುಸ್ತಕ ಚೀಲವನ್ನು ತರಲೆಂದೇ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿ ಗಮನ ಸೆಳೆದಿತ್ತು.  ಪಾಟೀ ಚೀಲದ ಭಾರವನ್ನು ಕಡಿಮೆಗೊಳಿಸಲು ಹಲವು ಪ್ರಯೋಗಗಳನ್ನು ಮಾಡಲಾಗಿದೆ, ಶಾಲೆಗೊಂದು ಮನೆಗೊಂದು ಎಂಧು ಎರಡೆರಡು ಪುಸ್ತಕಗಳ ಸೆಟ್‌ ಒದಗಿಸುವ ಪ್ರಯತ್ನ ವಿಫ‌ಲಗೊಂಡಿದೆ.ಶಾಲೆಯಲ್ಲೇ ಲಾಕರ್‌ ಒದಗಿಸುವ ಪ್ರಸ್ತಾವವನ್ನು ಕಾರ್ಯಗತಗೊಳಿಸಲು ಹೆಚ್ಚಿನ ಶಾಲೆಗಳು ಮುಂದಾಗಿಲ್ಲ. ತಮಿಳುನಾಡಿನಲ್ಲಿ ಸೆಮಿಸ್ಟರ್‌ ಪ್ರಕಾರ ಪುಸ್ತಕಗಳನ್ನು ನಾಲ್ಕು ಭಾಗ ಮಾಡಿ ತಕ್ಕಮಟ್ಟಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಕೇಂದ್ರ ಸರಕಾರ ಅನುಸರಿಸಲು ಹೊರಟಿರುವುದು ಈ ವಿಧಾನವನ್ನೇ. ಜತೆಗೆ ಶಾಲೆಗಳನ್ನು ಡಿಜಜಿಟಲ್‌ ಬೋಧನೆಗೆ ಒತ್ತುಕೊಟ್ಟು ಕ್ರಮೇಣ ಇಡೀ ಶಿಕ್ಷಣ ವ್ಯವಸ್ಥೆಯನ್ನು ಮಾರ್ಪಾಡುಗೊಳಿಸುವ ಇರಾದೆಯನ್ನು ಸರಕಾರ ಹೊಂದಿದೆ. ಇದಾದರೆ ಮಕ್ಕಳನ್ನು ಬಹುಕಾಲದಿಂದ ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next