ನಿನಗೆ ವಾರಕ್ಕೊಂದು ಪತ್ರ ಬರೆಯದಿದ್ದರೆ ಎದೆಯಲ್ಲೊಂದು ನಿರಂತರ ಚಡಪಡಿಕೆ ಶುರುವಾಗಿಬಿಡುತ್ತೆ. ಕಾಡುವ ಹುಡುಗ ನೀನು. ಮತ್ತೆ ಮತ್ತೆ ಬೇಕೆನಿಸುವ ಬಯಕೆಯ ಪ್ರೀತಿ ನಿನ್ನದು. ಮಾಸದ ಹೆಜ್ಜೆಯ ಅನುಭೂತಿ ನಿನ್ನೊಲವು. ನಿನ್ನ ಕಣ್ರೆಪ್ಪೆಯ ಮೇಲೆ ನನ್ನ ಉಸಿರಿನಿಂದ ಒಂದು ಪ್ರೇಮ ಕಾವ್ಯ ಬರೆಯಬೇಕೆನಿಸುತ್ತಿದೆ. ಬದುಕನ್ನು ಈಗೀಗ ಸಂಭ್ರಮಿಸುತ್ತಿದ್ದೇನೆ. ಖುಷಿಯಿಂದ ಇದ್ದೇನೆ ಎನ್ನುವುದೇ ಒಂದು ಸಂತಸ ಕಣೋ.
ಪ್ರೀತಿಯ ಅ ಆ ಇ ಈ ಕಲಿಸಿದ ನಿರತ ಪ್ರೇಮಿಯೂ ನೀನೇ, ಪ್ರೇಮದ ಗುರುವು ನೀನೇ. ಪ್ರೇಮ ಭಾಷೆಯನ್ನು, ಬದುಕಿನ ಭಾಷೆಯ ಅರ್ಥ, ಭಾವಾಂಶಗಳನ್ನು ಎದೆಗೆ ಬಿತ್ತಿರುವೆ. ಇಲ್ಲಿ ಬಂದೊಮ್ಮೆ ನನ್ನ ಕಣ್ಗಳಲ್ಲಿ ಇಣುಕಿ ನೋಡು, ನನ್ನ ಕನಸುಗಳಿಗೆ ರೆಕ್ಕೆ ಬಂದಿದೆ. ಆ ರೆಕ್ಕೆಗಳಿಗೆ ಶಕ್ತಿ ಮತ್ತು ಬಣ್ಣ ತುಂಬುತ್ತಿರುವವನು ನೀನು. ಬದುಕು ಅಲೆಮಾರಿಯಾಗಿದ್ದರೆ ಅದೆಷ್ಟು ಚೆಂದ ಅಲ್ವ? ಅಲ್ಲಿ ಹೀರಲಾಗದಷ್ಟು ಅನುಭವಗಳು ದಕ್ಕುತ್ತವೆ. ಅಲ್ಲಿ ತಂಗಾಳಿ ಜೋರು ಮಳೆಯಾಗಿ ಕಾಡುವ ಅಬ್ಬರವುಂಟು. ಬೆಂಗಾಡಿನಲ್ಲಿ ದಿಕ್ಕುದೆಸೆಯಿಲ್ಲದೆ ಸುತ್ತುವಾಗಲೇ ಆಕಸ್ಮಿಕವಾಗಿ ಪತ್ತೆಯಾಗಿ ಬಾಯಾರಿಕೆ ತಣಿಸುವ ತಿಳಿನೀರ ಕೊಳವುಂಟು. ಬದುಕೆಂದರೆ ನೀವು ತಿಳಿದಿರುವುದು ಮಾತ್ರವಲ್ಲ ಎಂದು ಎಚ್ಚರಿಸುವ ಗಿಡಮರ ಬಳ್ಳಿಗಳ ಹಸಿರು ಸಾಮ್ರಾಜ್ಯವುಂಟು…
ಎಲ ಎಲಾ, ಇದೇನೋ ಹೊಸದಾಗಿ ಪುರಾಣ ಹೇಳ್ತಿದಾಳಲ್ಲ, ಇದನ್ನೆಲ್ಲ ಎಲ್ಲಿ, ಯಾವಾಗ ನೋಡಿದ್ಲು ಇವಳು ಅಂತ ಯೋಚಿಸ್ತಿದೀಯ ದೊರೆ? ಅಂದಹಾಗೆ ನಿನಗೆ ಹೇಳದೆಯೇ ಬಡವರ ಸಾವಿರ ಚಕ್ರಗಳ ಬಂಡಿಯಲ್ಲಿ ಇಡೀ ರಾತ್ರಿ-ಹಗಲು ಪ್ರಯಾಣ ಬೆಳೆಸಿದ್ದೆ. ಅಲ್ಲಿ ದಕ್ಕಿದ ಸುಮಧುರ ಭಾವಗಳಿವು. ಅವತ್ತು ನನ್ನೊಂದಿಗೆ ನೀನೂ ಇದ್ದಿದ್ರೆ ಇರುಳಿಗೆ ಮತ್ತಷ್ಟು ಮೆರುಗು ಬರುತ್ತಿತ್ತು ನೋಡು. ನಿನ್ನೊಂದಿಗೆ ಇನ್ನಷ್ಟು ಚೆಂದದ ಅಲೆಮಾರಿಯಾಗಿ ಬದುಕಬೇಕು ಅನಿಸುತ್ತಿದೆ. ಬೇಗನೆ ಬಂದು ಸೇರಿಕೊಂಡು ಬಿಡೋ ಹುಡುಗ, ಪರ್ವತದಂಥ ಬದುಕು ಕಟ್ಟಬೇಕಿದೆ.
ಇಂತಿ ನಿನ್ನವಳು
ಪಲ್ಲವಿ