ಬೆಳ್ತಂಗಡಿ: ಪಠ್ಯಪುಸ್ತಕಗಳಲ್ಲಿ ಭಾರತದ ಪರಂಪರೆ, ಸಂಸ್ಕೃತಿ, ಚರಿತ್ರೆಯ ವಿಷಯಗಳನ್ನು ಅಳವಡಿಸಿ ಪುನಾರಚಿಸಬೇಕಾದ ಆವಶ್ಯಕತೆ ಇದೆ. ಇಲ್ಲವಾದಲ್ಲಿ ನಮ್ಮ ಮುಂದಿನ ಪೀಳಿಗೆ ಭಾರತೀಯರಾಗಿ ಉಳಿಯುವುದು ಅನುಮಾನ ಎಂದು ಕೊಡಗಿನ ಸಾಹಿತಿ ಅಡ್ಡಂಡ ಕಾರ್ಯಪ್ಪ ಆತಂಕ ವ್ಯಕ್ತಪಡಿಸಿದರು.
ಅವರು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಅಖೀಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕು ಘಟಕದ ಉದ್ಘಾಟನೆ ಮತ್ತು ಸಾಹಿತ್ಯ ಸಮ್ಮೇಳನದ ಸಮಾರೋಪ ಭಾಷಣ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಮಾತನಾಡಿ, ಭಾರತದಲ್ಲಿ ಸಾಕಷ್ಟು ಸಾಹಿತ್ಯಗಳಿದ್ದರೂ ಭಾಷಾ ತಿಳಿವಳಿಕೆಯ ಕೊರತೆಯಿಂದ ಅದರಲ್ಲಿನ ಸಾರ ನಮಗೆ ಗೊತ್ತಾಗುತ್ತಿಲ್ಲ. ಎಲ್ಲಾ ಭಾಷೆಗಳ ಪರಿಚಯದಿಂದ ಏಕತೆಗೆ ಪ್ರಯೋಜನ ಆಗಬಹುದು ಎಂದರು.
ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ, ಸಾಹಿತಿ ದೊಡ್ಡರಂಗೇಗೌಡ ಅವರು, ಸಾಹಿತ್ಯದೊಳಗಿರುವ ಸತ್ವ, ತಣ್ತೀ ಒಂದೇ ಆಗಿರಬೇಕು. ಭಾರತೀಯ ಸಾಹಿತ್ಯದಲ್ಲಿ ಪರಂಪರೆ, ವಿಮರ್ಶೆ, ದೃಷ್ಟಿಕೋನ, ದೇಶೀಯ ಸೊಗಡು, ಜನಪದ ಇದ್ದರೂ ಪಶ್ವಿಮದತ್ತ ಯಾಕೆ ಮುಖ ಮಾಡುತ್ತಿದ್ದೇವೆ. ಭಾರತವನ್ನೇ ಗೇಲಿ ಮಾಡುವ ಸಾಹಿತಿಗಳ ಕಣ್ಣು ತೆರೆಸುವಂತಹ ಸಾಹಿತ್ಯ ಬರಬೇಕು ಎಂದರು.
ಪರಿಷತ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಮಾತನಾಡಿದರು. ತಾಲೂಕು ಘಟಕದ ಅಧ್ಯಕ್ಷ ಡಾ| ಶ್ರೀಧರ ಭಟ್ ಉಜಿರೆ ಉಪಸ್ಥಿತರಿದ್ದರು.
ತಾಲೂಕು ಭಾರತೀಯ ಸಾಹಿತ್ಯ ಪರಿಷತ್‌ನ ಗೌರವಾಧ್ಯಕ್ಷ ಕೆ. ಪ್ರತಾಪಸಿಂಹ ನಾಯಕ್ ಸ್ವಾಗತಿಸಿ, ಪ್ರಸ್ತಾವಿಸಿದರು. ಸಂಚಾಲಕ ಚಂದ್ರಮೋಹನ ಮರಾಠೆ ಮುಂಡಾಜೆ ವಂದಿಸಿದರು. ಗೌರವ ಸಲಹೆಗಾರ ರಾಮಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿದರು.