ಅಫಜಲಪುರ: ತಾಲೂಕಿನ ಹಾವನೂರ ಗ್ರಾಮದ ಶ್ವೇತಾ ನಿಂಗಪ್ಪ ಪೂಜಾರಿ ಎನ್ನುವ ಬಾಲಕಿ ಕಳೆದ ಡಿ. 5ರಂದು ನಾಪತ್ತೆಯಾಗಿದ್ದಳು. ನಾಪತ್ತೆಯಾಗಿರುವ ಕುರಿತು ದೇವಲ ಗಾಣಗಾಪುರ ಠಾಣೆಯಲ್ಲಿ ಶ್ವೇತಾ ಪಾಲಕರು ದೂರು ದಾಖಲಿಸಿದ್ದರು. ಶುಕ್ರವಾರ (ಡಿ. 13) ಬೆಳಗಿನ ಜಾವ ಹಾವನೂರ ಗ್ರಾಮದಿಂದ 1.5 ಕಿ.ಮೀ ದೂರದಲ್ಲಿ ಶರಣಬಸಪ್ಪ ಇನಾಮದಾರ ಎನ್ನುವರ ಹೊಲದಲ್ಲಿ ಬಾಲಕಿಯ ಬಟ್ಟೆ, ತಲೆ ಬುರುಡೆ, ಕೈ-ಕಾಲಿನ ಎಲುಬುಗಳು ಪತ್ತೆಯಾಗಿವೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜನಸಾಗರವೇ ಆಗಮಿಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಮಹಾದೇವ ಪಂಚಮುಖೀ, ದೇವಲ ಗಾಣಗಾಪುರ ಪಿಎಸ್‌ಐ ಭೀಮರತ್ನ ಸಜ್ಜನ್, ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ಹೆಚ್ಚಿನ ತನಿಖೆಗೆ ತಲೆ ಬುರುಡೆ, ಎಲುಬುಗಳನ್ನು ರವಾನೆ ಮಾಡಲಾಗಿದೆ.
ಬಟ್ಟೆ ಗುರುತಿಸಿದ ತಂದೆ: ಹೊಲವೊಂದರಲ್ಲಿ ಹುಲ್ಲು ತರಲು ಹೋಗಿದ್ದ ವ್ಯಕ್ತಿಯೊಬ್ಬರಿಗೆ ನಾಯಿಯ ಬಾಯಲ್ಲಿ ತಲೆ ಬುರುಡೆ ಕಂಡಿತ್ತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಬಂದು ಬಟ್ಟೆಯನ್ನು ಬಾಲಕಿ ತಂದೆ ನಿಂಗಪ್ಪ ಪೂಜಾರಿ ಅವರಿಗೆ ತೋರಿಸಿದಾಗ ತನ್ನ ಮಗಳದ್ದೆ ಬಟ್ಟೆ ಎಂದು ಬಾಲಕಿ ತಂದೆ ನಿಂಗಪ್ಪ ಪೂಜಾರಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅಲ್ಲಿರುವ ತಲೆ ಬುರುಡೆ, ಎಲುಬುಗಳು ಬಾಲಕಿಯದ್ದೇ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ. ಉನ್ನತ ಮಟ್ಟದ ತನಿಖೆ ಮಾಡಿ ಸತ್ಯಾಂಶ ಬಯಲು ಮಾಡುವುದಾಗಿ ತಿಳಿಸಿದ್ದಾರೆ.
ಉನ್ನತ ಮಟ್ಟದ ತನಿಖೆಯಾಗಲಿ: ಹಾವನೂರಿನಲ್ಲಾದ ಘಟನೆ ತಿಳಿದು ಶಾಸಕ ಎಂ.ವೈ. ಪಾಟೀಲ ಗ್ರಾಮಕ್ಕೆ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು. ಕೃತ್ಯದಲ್ಲಿ ಭಾಗಿಯಾದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಬಾಲಕಿ ಕುಟುಂಬಸ್ಥರು ಬಡವರಾಗಿದ್ದರಿಂದ ಸರ್ಕಾರ ಅವರಿಗೆ 5 ಲಕ್ಷ ರೂ. ಪರಿಹಾರ ಧನ ನೀಡಬೇಕೆಂದು ಒತ್ತಾಯಿಸಿದರು.
ಜಿ.ಪಂ ಉಪಾಧ್ಯಕ್ಷೆ ಶೋಭಾ ಶಿರಸಗಿ, ಮುಖಂಡರಾದ ಸಿದ್ದು ಶಿರಸಗಿ, ಅಸ್ಪಾಕ್ ಬಂದರವಾಡ ಸೇರಿದಂತೆ ಹಾವನೂರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಈ ಸಂದರ್ಭದಲ್ಲಿದ್ದರು.
ಉನ್ನತ ಮಟ್ಟದ ತನಿಖೆಗೆ ಮಾಲೀಕಯ್ಯ ಒತ್ತಾಯ ಅಫಜಲಪುರ: ತಾಲೂಕಿನ ಹಾವನೂರ ಗ್ರಾಮದಲ್ಲಿ ನಡೆದ ಬಾಲಕಿ ಶ್ವೇತಾ ಪೂಜಾರಿ ಕೊಲೆ ಪ್ರಕರಣ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ಅವರು, ತಾಲೂಕಿನಲ್ಲಿ ಬಹಳಷ್ಟು ಕೊಲೆ ಪ್ರಕರಣ ನಡೆಯುತ್ತಿವೆ. ಈ ಕುರಿತು ಪೊಲೀಸ್ ಇಲಾಖೆ ತನಿಖೆ ಮಾಡಿ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಬಾಲಕಿ ಕುಟುಂಬಸ್ಥರಿಗೆ ಸರ್ಕಾರದಿಂದ ಸಹಾಯಧನ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌ಯಡಿಯೂರಪ್ಪ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು.