Advertisement

ಶಿವಪುರ ಹಾ.ಉ. ಸ. ಸಂಘ ಮಾದರಿ ಸಂಸ್ಥೆ: ಮಧ್ವರಾಜ್‌ 

04:05 PM Mar 19, 2017 | Team Udayavani |

ಹೆಬ್ರಿ:  ಕಾರ್ಕಳ ತಾಲೂಕಿನ ಶಿವಪುರದಲ್ಲಿ ಸುವ್ಯವಸ್ಥಿತ ವಾದ ಹಾಲು ಉತ್ಪಾದಕರ ಸಹಕಾರ ಸಂಘವು ಇತರರಿಗೆ ಮಾದರಿಯಾಗಿದೆ. ಸಂಘದ ಅಧ್ಯಕ್ಷ ಬಿಲ್ಲಬೈಲು ಸುರೇಶ್‌ ಶೆಟ್ಟಿ ಅವರ ವಿಶೇಷ ಮುತುವರ್ಜಿ ಹೈನುಗಾರರಿಗೆ ನೀಡುವ ಪ್ರೋತ್ಸಾಹ ದಿಂದ ಈಗಾಗಲೇ ಸಂಘವು ವಿಶೇಷ ಪ್ರಶಸ್ತಿಯನ್ನು ಪಡೆದಿರುವುದು ಶ್ಲಾಘನೀಯ ಎಂದು ಮೀನುಗಾರಿಕೆ, ಯುವಜನ ಸೇವೆ, ಕ್ರೀಡೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಮಾ. 18ರಂದು ಕಾರ್ಕಳ ತಾಲೂಕಿನ ಶಿವಪುರ ಹಾಲು ಉತ್ಪಾದಕರ ಸಹಕಾರ ಸಂಘದ ವಿಸ್ತರಣಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. 

ಈಗಾಗಲೇ ರಾಜ್ಯ ಸರಕಾರ ಹೈನುಗಾರರಿಗೆ ವಿಶೇಷ ಪ್ರೋತ್ಸಾಹ ಹಾಗೂ ಬೆಂಬಲ ಬೆಲೆಯನ್ನು ನೀಡಿದ್ದು ಈ ಬಾರಿಯ ಬಜೆಟ್‌ನಲ್ಲಿ  ಪಶುಸಂಗೋಪನೆಗೆ 2ಸಾವಿರದ 250 ಕೋಟಿಯನ್ನು ನೀಡಿದೆ ಎಂದರು.

ಶಾಲೆಗೆ ಚಕ್ಕರ್‌ ಹಟ್ಟಿಯಲ್ಲಿ ಹಾಜರ್‌:  ನನಗೆ ಚಿಕ್ಕಂದಿನಿಂದಲೂ ಹಸು ಎಂದರೆ ತುಂಬ ಇಷ್ಟ. ಹೆಚ್ಚಿನ ಶಾಲಾ ದಿನಗಳಲ್ಲಿ ಶಾಲೆಗೆ ಚಕ್ಕರ್‌ ಹೊಡೆದು ಹಟ್ಟಿಯಲ್ಲಿ ಹಾಜರ್‌ ಆಗಿದ್ದೆ. ಈಗಲೂ ನಮ್ಮ ಮನೆಯಲ್ಲಿ 22 ಹಸುಗಳಿದ್ದು ಗೋಶಾಲೆಯನ್ನು ನಿರ್ಮಿಸಿದ್ದೇನೆ ಎಂದರು.

ಹಳ್ಳಿಗಳಲ್ಲಿ ಗೋಶಾಲೆ ನಿರ್ಮಿಸಿ: ಹೈನುಗಾರಿಕೆಯಲ್ಲಿ ಪ್ರಪಂಚದಲ್ಲಿ ಭಾರತ ಪ್ರಥಮ ಹಾಗೆಯೇ ದನಸಾಗಟ ಮಾಡುವುದರಲ್ಲಿಯೂ ಪ್ರಥಮವಾಗಿದೆ. ಹಳ್ಳಿಗಳಲ್ಲಿ ಗೋಶಾಲೆ ಯನ್ನು ನಿರ್ಮಿಸುವುದರ ಮೂಲಕ ದನಸಾಗಾಟವನ್ನು ನಿಯಂತ್ರಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು  ಮಧ್ವರಾಜ್‌ ಹೇಳಿದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ಇದರ ಅಧ್ಯಕ್ಷ ಕೊಡವೂರು ರವಿರಾಜ್‌ ಹೆಗ್ಡೆ  ಸಾಂದ್ರ ಶೀತಲೀಕರಣ ಘಟಕವನ್ನು  ಉದ್ಘಾಟಿಸಿದರು. ವಿದ್ಯುತ್‌ ಜನಕ ಹಾಗೂ ಅಡಿಕೆ ಹಾಳೆ ಘಟಕದ ಉದ್ಘಾಟನೆ ನಡೆಯಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಪುರ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್‌ ಶೆಟ್ಟಿ ಬಿಲ್‌ಬೈಲ್‌ ವಹಿಸಿ ಸಮ್ಮಾನ ಸ್ವೀಕರಿಸಿ ಮಾತನಾಡಿ ಸಂಘವು ಅಭಿವೃದ್ಧಿ ಹೊಂದಲು ಹೈನುಗಾರರು ಹಾಗೂ ಸಂಘದ ಸರ್ವ ಸದಸ್ಯರು ಹಾಗೂ ಸಿಬಂದಿಯ ಸಹಕಾರ ಸಾರ್ವಜನಿಕರ ಪ್ರೋತ್ಸಾಹ ಕಾರಣವಾಗಿದೆ ಎಂದರು. ಈ ಸಂದರ್ಭದಲ್ಲಿ ಉಡುಪಿ ಜಿ.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹರಿದಾಸ ಬಿ.ಸಿ ರಾವ್‌ ಶಿವಪುರ ಅವರನ್ನು ಸಮ್ಮಾನಿಸಲಾಯಿತು. ಸತತ 30 ವರ್ಷಗಳಿಂದ ಸಂಘಕ್ಕೆ ಹಾಲು ನೀಡುತ್ತಿರುವ ದಂಪತಿಯನ್ನು ಹಾಗೂ ಅತೀ ಹೆಚ್ಚು ಹಾಲು ನೀಡುವವರನ್ನು  ಹಾಗೂ ನಾಟಿ ವೈದ್ಯ ಮಹಾಬಲ ನಾಯ್ಕ ಅವರನ್ನು ಗೌರವಿಸಲಾಯಿತು. ಹೆಬ್ರಿ ಸಂಘದಲ್ಲಿ 32 ವರ್ಷ ಸೇವೆ ಸಲ್ಲಿಸಿ ನಿಧನರಾದ ಗೋವಿಂದ ನಾಯ್ಕ ಅವರ ಕುಟುಂಬಕ್ಕೆ ಸಹಾಯಧನ ವಿತರಿಸಲಾಯಿತು.   ಕಾರ್ಯಕ್ರಮದಲ್ಲಿ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ಇದರ ನಿರ್ದೇಶಕರಾದ‌ ಹದ್ದೂರು ರಾಜೀವ ಶೆಟ್ಟಿ, ಜಾನಕಿ ಹಂದೆ, ಟಿ. ಸೂರ್ಯ ಶೆಟ್ಟಿ, ಅಶೋಕ ಕುಮಾರ್‌ ಶೆಟ್ಟಿ, ನಾಮ ನಿರ್ದೇಶಿತ ನಿರ್ದೇಶಕ ಎನ್‌. ಕೃಷ್ಣ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಸತ್ಯನಾರಾಯಣ, ಉಪ ವ್ಯವಸ್ಥಾಪಕ ಡಾ| ಅನಿಲ್‌ ಕುಮಾರ್‌ ಶೆಟ್ಟಿ, ಮುದ್ರಾಡಿ ತಾ.ಪಂ. ಸದಸ್ಯ ರಮೇಶ್‌ ಪೂಜಾರಿ, ಶಿವಪುರ ಗ್ರಾ.ಪಂ. ಅಧ್ಯಕ್ಷೆ ಸುಗಂಧಿ ನಾಯಕ್‌, ನಿತ್ಯಾನಂದ ಭಟ್‌ ಸಹಾಯಕ ವ್ಯವಸ್ಥಾಪಕ ಶಂಕರ್‌ ನಾಯ್ಕ, ಡಾ| ಧನಂಜಯ, ಉಪಾಧ್ಯಕ್ಷ ವಿಶ್ವನಾಥ ನಾಯಕ್‌ ಉಪಸ್ಥಿತರಿದ್ದರು. ಜಗನ್ನಾಥ ಕುಲಾಲ್‌ ಸ್ವಾಗತಿಸಿ, ವಿಸ್ತರಣಾಧಿಕಾರಿ ಸುಧಾಕರ ಕಾರ್ಯಕ್ರಮ ನಿರೂಪಿಸಿ, ಸಂಘದ ಕಾರ್ಯದರ್ಶಿ ಇಂದಿರಾ ವರದಿ ವಾಚಿಸಿ ವಂದಿಸಿದರು.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಶುದ್ಧ ಹಾಲು ಉತ್ಪಾದನೆ ಮತ್ತು ಹೈನುಗಾರಿಕೆಯ ಸವಾಲುಗಳ ಕುರಿತು ವಿಚಾರಗೋಷ್ಠಿ ನಡೆಯಿತು. ಮಧ್ಯಾಹ್ನ ರಸಮಂಜರಿ ಕಾರ್ಯಕ್ರಮ ಸಂಜೆ ಮನು ಹಂದಾಡಿಯವರ ನಗೆ ಹಬ್ಬ,ರಾತ್ರಿ ಕುರಾಲ್‌ ಕಲಾವಿದೆರ್‌ ಬೆದ್ರ ಇವರಿಂದ ಬರಿತ್ತಿಲ್ಲದ ಭಾರತಿ ತುಳು ಹಾಸ್ಯಮಯ ನಾಟಕ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next