Advertisement

ಹಟ್ಟಿಯಂಗಡಿ ಕ್ರಾಸ್‌-ಜಾಡಿ ರಸ್ತೆ: ದ್ವಿಪಥಕ್ಕೆ ಹೆಚ್ಚಿದ ಬೇಡಿಕೆ

01:50 AM Nov 28, 2018 | Karthik A |

ತಲ್ಲೂರು: ಕುಂದಾಪುರದಿಂದ ತಲ್ಲೂರು ಮಾರ್ಗವಾಗಿ ಕೊಲ್ಲೂರು ಸಂಪರ್ಕಿಸುವ ಹತ್ತಿರದ ಹಟ್ಟಿಯಂಗಡಿ ಕ್ರಾಸ್‌ನಿಂದ ಜಾಡಿಯವರೆಗಿನ ಸುಮಾರು 3 ಕಿ.ಮೀ. ದೂರದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇದನ್ನು ದ್ವಿಪಥಗೊಳಿಸಬೇಕು ಎನ್ನುವ ಬೇಡಿಕೆ ಹೆಚ್ಚಾಗುತ್ತಿದೆ. ಈಗ ಕೊಲ್ಲೂರಿಗೆ ಕುಂದಾಪುರದಿಂದ ಹೆಮ್ಮಾಡಿ ಮಾರ್ಗ ಅಥವಾ ತಲ್ಲೂರು, ಮಾವಿನಕಟ್ಟೆ, ನೇರಳಕಟ್ಟೆ ಮೂಲಕ ರಸ್ತೆಯಿದೆ. ಆದರೆ ಇದಕ್ಕೂ ಮೊದಲು ಕೊಲ್ಲೂರಿಗೆ ಸಂಚರಿಸಬೇಕಾದರೆ ಈ ಹಟ್ಟಿಯಂಗಡಿ ಕ್ರಾಸ್‌ – ಜಾಡಿ ರಸ್ತೆಯನ್ನೇ ಹೆಚ್ಚಿನವರು ಅವಲಂಬಿಸಿದ್ದರು. ಆದರೆ ಈಗ ಈ ರಸ್ತೆ ಸಂಪೂರ್ಣ ಹೊಂಡ – ಗುಂಡಿಗಳು ಹಾಗೂ ಕಿರಿದಾದ ರಸ್ತೆಯಾಗಿರುವುದರಿಂದ ವಾಹನ ಸಂಚಾರವೇ ಕಷ್ಟಕರವಾಗಿದೆ.

Advertisement

ದ್ವಿಪಥಕ್ಕೆ ಆಗ್ರಹ
ಈ ಹಟ್ಟಿಯಂಗಡಿ ಕ್ರಾಸ್‌ – ಜಾಡಿಯವರೆಗಿನ 3 ಕಿ.ಮೀ. ಉದ್ದದ ರಸ್ತೆಯನ್ನು ದ್ವಿಪಥಗೊಳಿಸಿದರೆ ಇದೇ ರಸ್ತೆಯಲ್ಲಿ ನಿತ್ಯ ಸಂಚರಿಸುವ ನೂರಾರು ಮಂದಿಗೆ ಪ್ರಯೋಜನವಾಗಲಿದೆ. ಅದಲ್ಲದೆ ಪ್ರಮುಖ ಯಾತ್ರ ಸ್ಥಳವಾದ ಕೊಲ್ಲೂರಿಗೂ ಸಂಪರ್ಕ ಕಲ್ಪಿಸಲು ಅನುಕೂಲವಾಗಿದೆ. ಇದೇ ಮಾರ್ಗವಾಗಿ ವಂಡ್ಸೆ, ಕೆಂಚನೂರು ಕಡೆಗೂ ಸಂಚರಿಸಬಹುದು. ಕೊಲ್ಲೂರಿಗೆ ಬರುವ ಯಾತ್ರಾರ್ಥಿಗಳು ಹಟ್ಟಿಯಂಗಡಿ ದೇವಸ್ಥಾನಕ್ಕೂ ತೆರಳಲು ಕೂಡ ಸಹಕಾರಿಯಾಗಲಿದೆ. ಕೊಲ್ಲೂರಿಗೆ ತೆರಳಲು ಇರುವ ಬೇರೆ ಮಾರ್ಗಗಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗಲಿದೆ. ರಸ್ತೆ ದ್ವಿಪಥದ ಜತೆಗೆ ಜಾಡಿಯ ಸಮೀಪದ ಸೇತುವೆಯನ್ನು ಕೂಡ ಅಗಲೀಕರಣ ಮಾಡಬೇಕು ಎನ್ನುವ ಕೂಗು ಕೇಳಿ ಬಂದಿದೆ. ಈ ರಸ್ತೆ ದ್ವಿಪಥವಾದರೆ ಇದೇ ಮಾರ್ಗವಾಗಿ ಬಸ್‌ ಸಂಚಾರವನ್ನು ಕೂಡ ಆರಂಭಿಸಬಹುದು. 

ದ್ವಿಪಥಕ್ಕೆ 8 ಕೋ.ರೂ. ಪ್ರಸ್ತಾವನೆ
ಜಾಡಿಯಿಂದ ಹಟ್ಟಿಯಂಗಡಿ ರಸ್ತೆಯ ಅಭಿವೃದ್ಧಿಗೆ ಈಗಾಗಲೇ ರಾಜ್ಯ ಲೋಕೋಪಯೋಗಿ ಇಲಾಖೆಯಿಂದ 4 ಕೋ.ರೂ. ಅನುದಾನ ನೀಡುತ್ತೇವೆ ಎಂದಿದ್ದಾರೆ. ಆದರೆ ನಾವು ಆ ರಸ್ತೆಯನ್ನು ದ್ವಿಪಥ ಮಾಡುವ ಸಲುವಾಗಿ ಇನ್ನು 4 ಕೋ.ರೂ. ಒಟ್ಟು 8 ಕೋ.ರೂ. ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ನೀಡುವ ವಿಶ್ವಾಸವಿದೆ.  
–  ಬಿ.ಎಂ. ಸುಕುಮಾರ್‌ ಶೆಟ್ಟಿ, ಬೈಂದೂರು ಶಾಸಕರು

ಎಲ್ಲ ದೃಷ್ಟಿಯಿಂದಲೂ ಪ್ರಯೋಜನ
1962 ರಷ್ಟು ಹಳೆಯದಾದ ರಸ್ತೆ ಇದಾಗಿದ್ದು, ಕುಂದಾಪುರ, ತಲ್ಲೂರಿನಿಂದ ಕೊಲ್ಲೂರಿಗೆ ತೆರಳಲು ಹಿಂದೆ ಇದೇ ಮಾರ್ಗವನ್ನು ಬಳಸಲಾಗುತ್ತಿತ್ತು. ದ್ವಿಪಥ ಮಾಡಬೇಕು ಎನ್ನುವ ಬೇಡಿಕೆ ಬಹಳ ಹಿಂದಿನಿಂದಲೇ ಇತ್ತು. ಸುಮಾರು 15 ವರ್ಷಗಳ ಹಿಂದೊಮ್ಮೆ ಡಾಮರೀಕರಣ ಆಗಿತ್ತು. ಆ ಬಳಿಕ 2 ಸಲ ತೇಪೆ ಕಾರ್ಯ ಅಷ್ಟೇ ಆಗಿದೆ. ಈಗ ಇದನ್ನು ದ್ವಿಪಥ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿದರೆ ಎಲ್ಲ ದೃಷ್ಟಿಯಿಂದಲೂ ಪ್ರಯೋಜನವಾಗಲಿದೆ. 
– ಕೆಂಚನೂರು ಸೋಮಶೇಖರ ಶೆಟ್ಟಿ, ಸ್ಥಳೀಯರು

— ಪ್ರಶಾಂತ್‌ ಪಾದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next