Advertisement

ಸತತ ಮೂರು ಬಾರಿ ಗೆದ್ದು ಕಾಂಗ್ರೆಸ್‌ ದಾಖಲೆ ಸರಿಗಟ್ಟಿದ ಬಿಜೆಪಿ

04:42 PM Nov 11, 2020 | sudhir |

ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಮತ್ತೂಮ್ಮೆ ವಿಜಯದ ಕೇಕೆ ಮೂಲಕ ಬಿಜೆಪಿ ಹ್ಯಾಟ್ರಿಕ್‌ ಗೆಲುವು ಸಾಧಿಸಿದೆ. ವರ್ಷದ ಮೊದಲೇ ಟಿಕೆಟ್‌ ನೀಡಿದ್ದೇವೆಂದು ಬೀಗುತ್ತಿದ್ದ ಕಾಂಗ್ರೆಸ್‌ ಮುಗ್ಗರಿಸಿದ್ದರೆ, ನಿರೀಕ್ಷೆ ಮೂಡಿಸಿದ್ದ ಜೆಡಿಎಸ್‌ ಬೆಂಬಲಿತ
ಪಕ್ಷೇತರ ಅಭ್ಯರ್ಥಿ ಮಕಾಡೆ ಮಲಗಿದ್ದಾರೆ. ತಂತ್ರಗಾರಿಕೆ – ಸಂಘಟಿತ ಶಕ್ತಿ ಮೂಲಕ ಬಿಜೆಪಿ ಗೆಲುವು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

Advertisement

ಪಶ್ಚಿಮ ಪದವೀಧರ ಕ್ಷೇತ್ರ 1984ರವರೆಗೂ ಜನಸಂಘದ ಪ್ರತಿನಿಧಿತ್ವ ಹೊಂದಿತ್ತು. ನಂತರ ಕಾಂಗ್ರೆಸ್‌ ಹಿಡಿತಕ್ಕೆ ಸಿಕ್ಕಿತ್ತಲ್ಲದೆ, 2008ರಲ್ಲಿ ಕಾಂಗ್ರೆಸ್‌ ಅಧಿಪತ್ಯ ಅಂತ್ಯಗೊಂಡು, ಬಿಜೆಪಿ ಪ್ರಾಬಲ್ಯ ಆರಂಭಗೊಂಡಿತ್ತು. ಇಂದಿಗೂ ಅದು ಮುಂದುವರಿದಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್‌ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದೆ. ಇದೀಗ ಬಿಜೆಪಿ ಸತತ ಮೂರು ಬಾರಿ ಗೆಲ್ಲುವ ಮೂಲಕ ಕಾಂಗ್ರೆಸ್‌ ದಾಖಲೆ ಸರಿಗಟ್ಟುವ ನಿಟ್ಟಿನತ್ತ ಸಾಗುತ್ತಿದೆ.

ಕಾಂಗ್ರೆಸ್‌ನ ಹಿರಿಯ ನಾಯಕ ಎಚ್‌.ಕೆ.ಪಾಟೀಲರನ್ನು ಸೋಲಿಸುವ ಮೂಲಕ ಮೋಹನ ಲಿಂಬಿಕಾಯಿ ಮೊದಲ ಬಾರಿಗೆ ವಿಧಾನ ಪರಿಷತ್ತು ಪ್ರವೇಶಿಸಿದ್ದರಲ್ಲದೆ, ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದರು.

2014ರಲ್ಲಿ ಪ್ರೊ|ಎಸ್‌.ವಿ.ಸಂಕನೂರು ಅವರು ಜೆಡಿಎಸ್‌ನ ವಸಂತ ಹೊರಟ್ಟಿ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಪರಿಷತ್ತು ಪ್ರವೇಶಿಸಿದ್ದರು. ಇದೀಗ ಕಾಂಗ್ರೆಸ್‌ನ ಡಾ| ಕುಬೇರಪ್ಪ ಅವರನ್ನು ಸೋಲಿಸುವ ಮೂಲಕ ಸತತ ಎರಡನೇ ಬಾರಿಗೆ ಸಂಕನೂರು ಪರಿಷತ್ತು ಪ್ರವೇಶ ಮಾಡುತ್ತಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯನವರೇ ನಿಮ್ಮ ರಾಜಕೀಯ ಭವಿಷ್ಯ ಎಲ್ಲಿ ಎಂದು ಯೋಚನೆ ಮಾಡಿ: ನಳಿನ್ ಕಟೀಲ್

Advertisement

ತಯಾರಿ ಕೈ ಹಿಡಿಯಲಿಲ್ಲ, ಬಲ ತುಂಬದ ಬೆಂಬಲ:
ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಒಂದು ವರ್ಷ ಮೊದಲೇ ಅಭ್ಯರ್ಥಿ ಘೋಷಣೆ ಮಾಡಿದ್ದವು. ಕಾಂಗ್ರೆಸ್‌ ಅಭ್ಯರ್ಥಿ ಡಾ| ಆರ್‌.ಎಂ.ಕುಬೇರಪ್ಪ ಕ್ಷೇತ್ರ ವ್ಯಾಪ್ತಿಯ ನಾಲ್ಕೂ ಜಿಲ್ಲೆಗಳಲ್ಲಿ ಚುನಾವಣೆ ಘೋಷಣೆಯ ವರ್ಷದ
ಮೊದಲೇ ಸುತ್ತಾಟ, ಮತದಾರರ ನೋಂದಣಿ, ಸಂಪರ್ಕ ಇನ್ನಿತರೆ ಕಾರ್ಯದಲ್ಲಿ ತೊಡಗಿದ್ದರು. ಜೆಡಿಎಸ್‌ ಶಿವಶಂಕರ ಕಲ್ಲೂರ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತಾದರೂ, ಅವರ ತಯಾರಿ ಅಷ್ಟಕ್ಕಷ್ಟೆ ಎನ್ನುವಂತಿತ್ತು. ಬಿಜೆಪಿಯಿಂದ ಮತ್ತೂಮ್ಮೆ ಪ್ರೊ|ಎಸ್‌.ವಿ.ಸಂಕನೂರು ಅವರಿಗೆ ಟಿಕೆಟ್‌ ದೊರೆಯಲಿದೆ ಎಂಬ ಮಾತುಗಳಿದ್ದರೂ ಕೊನೆಗಳಿಗೆವರೆಗೂ ಅಧಿಕೃತ ಘೋಷಣೆ ಆಗಿರಲಿಲ್ಲ.

ವರ್ಷದ ಮೊದಲೇ ತಯಾರಿಯಲ್ಲಿದ್ದೇನೆ, ಸುಮಾರು 64 ಸಾವಿರದಷ್ಟು ಮತದಾರರ ನೋಂದಣಿ ಮಾಡಿಸಿದ್ದೇನೆ ಅದರಲ್ಲಿ ಅರ್ಧದಷ್ಟು ಮತದಾರರು ನನಗೆ ಮತ ಹಾಕಿದರೂ ಮೊದಲ ಸುತ್ತಿನಲ್ಲೇ ಕನಿಷ್ಠ 10 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಶತಸಿದ್ಧ, ಬಿಜೆಪಿಯ ಕೆಲವರು ಹಾಗೂ ಸಂಘ- ಪರಿವಾರದ ಅನೇಕರು ನನ್ನ ಪರವಾಗಿದ್ದಾರೆಂದು ಹೇಳುತ್ತಿದ್ದ ಕಾಂಗ್ರೆಸ್‌ ಅಭ್ಯರ್ಥಿ ಡಾ| ಕುಬೇರಪ್ಪ ಅವರಿಗೆ ತಮ್ಮದೆಲ್ಲವು ಭ್ರಮೆ ಎಂಬುದನ್ನು ಫ‌ಲಿತಾಂಶ ತೋರಿಸಿಕೊಟ್ಟಿದೆ.

ಪಕ್ಷದ ವಿವಿಧ ಜಿಲ್ಲೆಗಳ ಮುಖಂಡರು ತಮ್ಮಿಂದ ಸಾವಿರಗಳ ಲೆಕ್ಕದಲ್ಲಿ ಮತಗಳು ಖಚಿತ ಎಂಬ ಭರವಸೆಯನ್ನೇ ನಂಬಿದ್ದರು, ವಾಸ್ತವ ಏನೆಂಬುದು ಇದೀಗ ಅವರ ಗಮನಕ್ಕೂ ಬಂದಿರಲಿಕ್ಕೆ ಸಾಕು.

ಇದನ್ನೂ ಓದಿ:ಪ್ರಧಾನಿ ಮೋದಿಯಿಂದಾಗಿ ನಿತೀಶ್ ಕುಮಾರ್ ಗೆಲುವು ಸಾಧಿಸಿದ್ದಾರೆ: ಚಿರಾಗ್ ಪಾಸ್ವಾನ್

ಚುನಾವಣೆಯಲ್ಲಿ ಕಾಂಗ್ರೆಸ್‌ ಮೂರನೇ ಸ್ಥಾನಕ್ಕೆ ಹೋದರೂ ಅಚ್ಚರಿ ಇಲ್ಲ ಎಂಬುದು ಕೆಲವರ ಅನಿಸಿಕೆಯಾಗಿತ್ತು. ಆದರೆ ಎರಡನೇ ಸ್ಥಾನಕ್ಕೆ ಬಂದಿದೆ ಎಂಬುದು ಕಾಂಗ್ರೆಸ್‌ಗೆ ಸಮಾಧಾನದ ಸಂಗತಿ ಎನ್ನಬಹುದಾಗಿದೆ.

ಜೆಡಿಎಸ್‌ ಅಭ್ಯರ್ಥಿ ಶಿವಶಂಕರ ಕಲ್ಲೂರು ಪ್ರಚಾರದಲ್ಲಿ ತೊಡಗಿದ್ದರು. ಗೆಲುವಲ್ಲದಿದ್ದರೂ ಪಕ್ಷದ
ಸ್ಪರ್ಧೆ ಇದೆ ಎಂಬ ನಿಟ್ಟಿನಲ್ಲಿ ಸಾಗಿದ್ದರಾದರೂ ಮತದಾನ ಕೆಲವೇ ದಿನ ಇರುವಾಗ ಜೆಡಿಎಸ್‌ ವರಿಷ್ಠರು ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಪಕ್ಷ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಅವರನ್ನು ಬೆಂಬಲಿಸುತ್ತದೆ ಎಂದು ಘೋಷಿಸುವ ಮೂಲಕ ಪಕ್ಷದ
ಅಭ್ಯರ್ಥಿಗೆ ಶಾಕ್‌ ನೀಡಿದ್ದರು.

ಜೆಡಿಎಸ್‌ ಬೆಂಬಲದಿಂದ ಪದವೀಧರ ಶಿಕ್ಷಕರು ಮತಗಳು ತಮಗೇ ಪ್ಲಸ್‌ ಆಗುತ್ತವೆ ಎಂಬ ಖುಷಿಯ ಜತೆಗೆ ತಮ್ಮದೇ ಪ್ರಚಾರದೊಂದಿಗೆ ಫ‌ಲಿತಾಂಶದಲ್ಲಿ ತಕ್ಕ ಮಟ್ಟಿಗೆ ಪೈಪೋಟಿಯೊಂದಿಗೆ ಗೆಲ್ಲುವೆ ಎಂಬ ಉತ್ಸಾಹದಲ್ಲಿದ್ದ, ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಿದ್ದು, ಚುನಾವಣೆಯಲ್ಲಿ ನಿರೀಕ್ಷೆಯೇ ಬೇರೆ, ರಾಜಕೀಯ ವಾಸ್ತವವೇ ಬೇರೆ ಎಂಬುದನ್ನು ಮನದಟ್ಟು ಮಾಡಿದೆ. ಜೆಡಿ ಎಸ್‌ ಬೆಂಬಲ ಘೋಷಣೆ ಬಿಟ್ಟರೆ ಬೇರಾವ ಲಾಭ ತಂದು ಕೊಡಲಿಲ್ಲ ಎಂಬುದು ಗುರಿಕಾರಗೆ ಬಿದ್ದ ಮತಗಳೇ ಸಾಕ್ಷಿ ಹೇಳುತ್ತಿವೆ.

ಪಕ್ಷದ ಗೆಲುವು: ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಅಭ್ಯರ್ಥಿಗಿಂತ ಪಕ್ಷದ ಗೆಲುವು ಎನ್ನಬಹುದಾಗಿದೆ. ಬಿಜೆಪಿ ಮುಖಂಡರು ತೋರಿದ ಚುನಾವಣೆ ತಂತ್ರಗಾರಿಕೆ, ಸಂಘಟಿತ ಯತ್ನವೇ ಗೆಲುವಿಗೆ ಕಾರಣವಾಗಿದೆ. ತಂಡಗಳಾಗಿ ರಚಿಸಿಕೊಂಡು ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿ ಮನೆ ಮನೆಗೆ ಹೋಗಿ ಮತದಾರರ ಮನವೊಲಿಕೆ ಕಾರ್ಯ ಕೈಗೊಂಡಿದ್ದರು. ಕ್ಷೇತ್ರದಲ್ಲಿದ್ದ
ಆಡಳಿತ ವಿರೋಧಿ ಅಲೆಯನ್ನು ಮರೆಯಾಗಿಸಿ ಅದನ್ನೇ ಗೆಲುವಾಗಿಸಿಕೊಂಡಿದ್ದಾರೆ. ಆ ಮೂಲಕ ಬಿಜೆಪಿ ತನ್ನ ಸಂಘಟನಾ ಶಕ್ತಿ, ತಂತ್ರಗಾರಿಕೆ ಬಲಾಡ್ಯತೆಯನ್ನು ಮತ್ತೂಮ್ಮೆ ಪ್ರದರ್ಶಿಸಿದೆ.

– ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next