ಬಾಗಲಕೋಟೆ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರದಲ್ಲಿ ಉತ್ತರ ಪ್ರದೇಶ ಈಗ ರಾವಣ ರಾಜ್ಯವಾಗಿದೆ. ಅಲ್ಲಿ ಯುವತಿಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ ಆರೋಪಿಸಿದರು.
ಶನಿವಾರ ನಗರದ ಬಸವೇಶ್ವರ ವೃತ್ತದ ಬಳಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅತ್ಯಾಚಾರ ಘಟನೆಯನ್ನು ತೀವ್ರವಾಗಿ ಖಂಡಿಸಿದರು.
ತಪ್ಪಿತಸ್ಥರನ್ನು ಸರ್ಕಾರ ತಕ್ಷಣ ಬಂಧಿಸಬೇಕು. ಯುವತಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಘಟನೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ ಎಂದು ದೂರಿದರು. ಕೇಂದ್ರ ಹಾಗೂ ಯುಪಿಯಲ್ಲಿ ಬಿಜೆಪಿ ಆಡಳಿತದಲ್ಲಿದ್ದು, ದಲಿತರ ಮೇಲೆ ಹಲ್ಲೆ, ಅತ್ಯಾಚಾರ ಕೊಲೆ ಪ್ರಕರಣ ನಡೆಯುತ್ತಿದ್ದು ಅವುಗಳನ್ನು ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿವೆ. ಯುಪಿಯಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲದಂತಾಗಿದೆ ಎಂದರು. ಸಂತ್ರಸ್ತೆಯ ಕುಟುಂಬದವರಿಗೆ ಸಾಂತ್ವನ ಹೇಳಲು ಹೋಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಪೊಲೀಸರು ತಡೆದಿರುವುದನ್ನು ಖಂಡಿಸಿದರು. ಮಾಜಿ ಸಚಿವ ಎಚ್.ವೈ. ಮೇಟಿ ಮಾತನಾಡಿ, ಅಲ್ಲಿನ ಸರ್ಕಾರ ಅರೋಪಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.
ಕಾಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ರಕ್ಷಿತಾ ಈಟಿ ಮಾತನಾಡಿ, ಮುಂದಿನ ದಿನಗಳಲ್ಲಿ ಬಿಜೆಪಿಗೆ ಮಹಿಳೆಯರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಬಿಜೆಪಿಗೆ ಮಹಿಳೆಯರ ಶಾಪ ತಟ್ಟಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಬಸವಪ್ರಭು ಸರನಾಡಗೌಡ, ನಿಂಗನಗೌಡ ಪಾಟೀಲ, ಶ್ರೀನಿವಾಸ ಬಳ್ಳಾರಿ, ಹನಮಂತ ರಾಕುಂಪಿ, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.