Advertisement

Hassan: ಪ್ರಜ್ವಲ್‌ ರೇವಣ್ಣ ವಿರುದ್ಧ ಎಟಿಆರ್‌/ಶಿವರಾಮು?

12:07 AM Jan 03, 2024 | Pranav MS |

ಹಾಸನ: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು 1991ರಿಂದ 5 ಬಾರಿ ಗೆದ್ದಿರುವ ಹಾಸನ ಕ್ಷೇತ್ರದಲ್ಲಿ ಒಕ್ಕಲಿಗರದ್ದೇ ಪ್ರಾಬಲ್ಯ. 1999ರಲ್ಲಿ ಕಾಂಗ್ರೆಸ್‌ನ ಜಿ. ಪುಟ್ಟಸ್ವಾಮಿಗೌಡ ಗೆದ್ದದ್ದು ಬಿಟ್ಟರೆ ಕಳೆದ 3 ದಶಕಗಳಿಂದ ಇದು ಜೆಡಿಎಸ್‌ ಭದ್ರಕೋಟೆ.

Advertisement

ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ 2019ರಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯ ಎ. ಮಂಜು ವಿರುದ್ಧ 1.42 ಲಕ್ಷ ಮತಗಳಿಂದ ಭಾರೀ ಗೆಲುವು ಸಾಧಿಸಿದ್ದರು. ಈ ಬಾರಿ ಜೆಡಿಎಸ್‌-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಸದ್ಯದ ಮಟ್ಟಿಗೆ ಅವರಿಗೆ ಟಿಕೆಟ್‌ ನಿಚ್ಚಳ. ಹಾಸನಕ್ಕೆ ಪ್ರಜ್ವಲ್‌ ಅವರೇ ಅಭ್ಯರ್ಥಿ ಸ್ವತಃ ದೇವೇಗೌಡರೇ ಘೋಷಿಸಿದ್ದಾರೆ. ತಾವು ಸ್ಪರ್ಧಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಪ್ರಜ್ವಲ್‌ಗೆ ಪ್ರೀತಂ ಅಡ್ಡಿ?
ಪ್ರಜ್ವಲ್‌ ಉಮೇದುವಾರಿಕೆ ಬಗ್ಗೆ ತುಸು ಅಪಸ್ವರ ಎತ್ತಿರುವುದು ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ. ಆದರೆ ಇದನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿರುವ ಸಂಗತಿ. ಯಾಕೆಂದರೆ, ಪಕ್ಷದಲ್ಲಿ ಪ್ರೀತಂ ಗೌಡ ಹೊರತುಪಡಿಸಿದರೆ ಈ ಬಾರಿ ಸ್ಪರ್ಧಿಸಲು ಸಮರ್ಥ ಅಭ್ಯರ್ಥಿಗಳಿಲ್ಲ, ಆಕಾಂಕ್ಷಿಗಳೂ ಹೆಚ್ಚಿಲ್ಲ.

ಜೆಡಿಎಸ್‌ ವಿರೋಧಿ ರಾಜಕಾರಣ ಮಾಡಿಕೊಂಡೇ ಬಂದಿರುವ ಪ್ರೀತಂ ಗೌಡ ಈಗ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ. ಈ ಜವಾಬ್ದಾರಿಯುತ ಸ್ಥಾನದಿಂದಾಗಿ ಅವರು ನೇರವಾಗಿ ಜೆಡಿಎಸ್‌ ಅಭ್ಯರ್ಥಿಯನ್ನು ವಿರೋಧಿಸುವ ಅವಕಾಶ ಕಳೆದುಕೊಂಡಿದ್ದಾರೆ. ಆದರೆ ಗೆಲ್ಲುವ ಅವಕಾಶಗಳ ಬಗ್ಗೆ ಸಮೀಕ್ಷೆ ನಡೆಸಿ ಮೈತ್ರಿ ಅಭ್ಯರ್ಥಿ ಘೋಷಣೆ ಆಗಲಿ ಎಂಬ ದಾಳ ಉರುಳಿಸಿದ್ದಾರೆ. ಅದು ವ್ಯರ್ಥ ಪ್ರಯತ್ನ ಎಂಬುದು ಪ್ರೀತಂ ಗೌಡರಿಗೂ ಗೊತ್ತು. ಆದರೂ ಒಮ್ಮೆ ಅವಕಾಶ ಸಿಕ್ಕರೆ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿಯಲು ಸಜ್ಜಾಗಿದ್ದಾರೆ. ಇನ್ನು ಹೋಟೆಲ್‌ ಉದ್ಯಮಿ ಕಿರಣ್‌ ಅವರೂ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಎಂದು ಸ್ವತಃ ಪ್ರೀತಂ ಗೌಡ ಅವರೇ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ.

ರಾಮಸ್ವಾಮಿ ಕಾಂಗ್ರೆಸ್‌ ಸೇರ್ತಾರಾ?
2023ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ಸಿಗದೆ ಬೇಸರಗೊಂಡ ಎ.ಟಿ. ರಾಮಸ್ವಾಮಿ ಬಿಜೆಪಿ ಸೇರಿದ್ದರು. ಹಾಸನದಿಂದ ಲೋಕಸಭೆಗೆ ಸ್ಪರ್ಧಿಸುವ ಸಲುವಾಗಿಯೇ ಅವರು ಈ ಹೆಜ್ಜೆ ಇಟ್ಟಿದ್ದರು. ಆದರೆ, ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದಾಗಿ ಅವರ ಆಸೆ ಕಮರಿದೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲು ಸಜ್ಜಾಗಿದ್ದಾರೆ. ಹಾಗೇನಾದರೂ ಆದರೆ ಅವರಿಗೆ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚು. ಒಂದು ವೇಳೆ, ರಾಮಸ್ವಾಮಿ ಕಾಂಗ್ರೆಸ್‌ ಸೇರ್ಪಡೆ ಕೈಗೂಡದಿದ್ದರೆ ಮಾಜಿ ಸಚಿವ ಬಿ. ಶಿವರಾಮು ಟಿಕೆಟ್‌ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಕಡೆಯ ಬಾರಿ ಚುನಾವಣೆಯಲ್ಲಿ ಕಣಕ್ಕಿಳಿಯಲು ಕೆಪಿಸಿಸಿ ಮಟ್ಟದಲ್ಲಿ ಸಮ್ಮತಿ ಸಿಗುವ ನಂಬಿಕೆಯಲ್ಲೇ ಅವರು ಚುನಾವಣ ಸಿದ್ಧತೆ ಆರಂಭಿಸಿದ್ದಾರೆ.

Advertisement

ಕ್ಷೇತ್ರದ ಮೇಲೆ ಇನ್ನೂ ಹಲರ ಆಸಕ್ತಿ
ಇನ್ನು, ವಿಧಾನ ಪರಿಷತ್‌ ಮಾಜಿ ಸದಸ್ಯ ಎಂ.ಎ. ಗೋಪಾಲಸ್ವಾಮಿ ಅವರೂ ಆಕಾಂಕ್ಷಿಗಳೇ. ಗೋಪಾಲಸ್ವಾಮಿಗೆ ಪರೋಕ್ಷ ವಿರೋಧ ವ್ಯಕ್ತಪಡಿಸುತ್ತಿರುವ ಚನ್ನರಾಯಪಟ್ಟಣದ ಜತ್ತೇನಹಳ್ಳಿ ರಾಮಚಂದ್ರ ಅವರೂ ಒಂದು ಕೈ ನೋಡುವ ಆಸಕ್ತಿಯಲ್ಲಿದ್ದಾರೆ. ಗೋಪಾಲಸ್ವಾಮಿ ಬದಲು ಶಿವರಾಮು ಅವರಿಗೆ ಟಿಕೆಟ್‌ ಸಿಕ್ಕರೆ ಪೈಪೋಟಿಯಿಂದ ಹಿಂದೆ ಸರಿಯುವ ಯೋಚನೆಯಲ್ಲಿ ಅವರಿದ್ದಾರೆ. ಹೊಳೆನರಸೀಪುರದಲ್ಲಿ ಎಚ್‌.ಡಿ. ರೇವಣ್ಣ ಎದುರು ಕಡಿಮೆ ಅಂತರದಲ್ಲಿ ಸೋತ ಯುವ ನಾಯಕ, ಮಾಜಿ ಸಚಿವ ದಿ| ಜಿ. ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್‌ ಪಟೇಲ್‌ರನ್ನು ಕಣಕ್ಕಿಳಿಸಬೇಕೆಂದು ಅನೇಕ ಕಾಂಗ್ರೆಸ್‌ ಕಾರ್ಯಕರ್ತರು ಪ್ರಯತ್ನಿಸುತ್ತಿರುವುದು ಗುಟ್ಟಿನ ಸಂಗತಿಯೇನಲ್ಲ. ಆದರೆ, ಶ್ರೇಯಸ್‌ಗೆ ಲೋಕಸಭೆಗೆ ಸ್ಪರ್ಧಿಸಲು ಅಷ್ಟಾಗಿ ಆಸಕ್ತಿ ಇದ್ದಂತಿಲ್ಲ. ಇದಲ್ಲದೆ, 2018ರಲ್ಲಿ ರೇವಣ್ಣ ವಿರುದ್ಧ ಸೋತಿದ್ದ ಬಾಗೂರು ಮಂಜೇಗೌಡ ಅವರೂ ಕಾಂಗ್ರೆಸ್‌ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ.

 ಎನ್‌. ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next