Advertisement
ಎಸ್‌ಐಟಿ ಅಧಿಕಾರಿಗಳು ಎಚ್.ಡಿ.ರೇವಣ್ಣ ಹಾಗೂ ಅವರ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಸಕಲ ಸಿದ್ಧತೆ ನಡೆಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಎರಡು ನೋಟಿಸ್ ಕೊಡಲಾಗಿದ್ದು, ಇಬ್ಬರೂ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ 3ನೇ ಬಾರಿ ನೋಟಿಸ್ ಕೊಡಲು ಸಿದ್ಧತೆ ನಡೆಯುತ್ತಿದೆ. ಇದಕ್ಕೂ ಹಾಜರಾಗದಿದ್ದರೆ, ಹಲವು ಬಾರಿ ನೋಟಿಸ್ ಕೊಟ್ಟರೂ ವಿಚಾರಣೆಗೆ ಹಾಜರಾಗಿಲ್ಲ ಎಂಬ ಆಧಾರದಲ್ಲಿ ಖೆಡ್ಡಾಕ್ಕೆ ಬೀಳಿಸಲು ಎಸ್‌ಐಟಿ ತಂತ್ರ ರೂಪಿಸಿದೆ.
ಬೆಂಗಳೂರಿನ ಬಸವನಗುಡಿ ಯಲ್ಲಿರುವ ರೇವಣ್ಣ ಅವರ ಮನೆ ಮೇಲೆ ಶುಕ್ರವಾರ ಎಸ್‌ಐಟಿ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣದ ಸಾಕ್ಷ್ಯಕ್ಕಾಗಿ ಹುಡುಕಾಡಿದ್ದಾರೆ ಎನ್ನಲಾಗಿದೆ. ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ ಅನ್ನು ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಲು ದಾಳಿ ನಡೆಸಿದ್ದಾರೆಂದು ತಿಳಿದು ಬಂದಿದೆ.
Related Articles
ಪ್ರಜ್ವಲ್ ರೇವಣ್ಣಗೆ 41ಎ ಅಡಿಯಲ್ಲಿ ಎಸ್‌ಐಟಿ ನೋಟಿಸ್ ಕೊಟ್ಟಿದೆ. ಪ್ರಜ್ವಲ್ ಪರ ವಕೀಲರು ಕೇಳಿದ್ದ ಕಾಲಾವಕಾಶ ತಿರಸ್ಕರಿಸಿದ ಎಸ್‌ಐಟಿಯು, ವಿಚಾರಣೆಗೆ ಹಾಜರಾಗುವಂತೆ ಖಡಕ್ ಸೂಚನೆ ಕೊಟ್ಟಿದೆ. ಮಾಜಿ ಸಚಿವ ರೇವಣ್ಣ ಅವರಿಗೂ 41ಎ ಅಡಿ ನೋಟಿಸ್ ನೀಡಲಾಗಿತ್ತು. ಈಗ ಇಬ್ಬರಿಗೂ ಮತ್ತೂಂದು ನೋಟಿಸ್ ಅನ್ನು ಎಸ್‌ಐಟಿ ನೀಡಿದೆ. ಇದಕ್ಕೆ ಸ್ಪಂದಿಸದಿದ್ದರೆ, ಇಬ್ಬರನ್ನೂ ಬಂಧಿಸಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಎಸ್‌ಐಟಿ ಮುಂದಾಗಿದೆ.
Advertisement
ಮೈಸೂರು ಮಹಿಳೆ ಕಿಡ್ನಾಪ್ ಕೇಸ್: ಒಬ್ಬನ ಬಂಧನತಾಯಿಯನ್ನು ಅಪಹರಣ ಮಾಡಿ ಕೂಡಿ ಹಾಕಿದ್ದಾರೆ ಎಂದು ಆರೋಪಿಸಿ ಮೈಸೂರಿನ 20 ವರ್ಷದ ವ್ಯಕ್ತಿಯೊಬ್ಬರು ಕೊಟ್ಟ ದೂರಿನ ಆಧಾರದಲ್ಲಿ ರೇವಣ್ಣ ಆಪ್ತ ಎನ್ನಲಾದ ಮೈಸೂರಿನ ಸತೀಶ್ ಬಾಬಣ್ಣ ಎಂಬವರನ್ನು ಎಸ್‌ಐಟಿ ಬಂಧಿಸಿದ್ದು, ಆತನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ವಿವರ
ನನ್ನ ತಾಯಿ ಹೊಳೇನರಸಿಪುರದ ಸಮೀಪದಲ್ಲಿರುವ ಎಚ್.ಡಿ.ರೇವಣ್ಣ ಮನೆಯಲ್ಲಿ 6 ವರ್ಷ ಕೆಲಸ ಮಾಡಿದ್ದರು. 3 ವರ್ಷಗಳ ಹಿಂದೆ ಕೆಲಸ ತೊರೆದಿದ್ದರು. ಲೋಕಸಭಾ ಚುನಾವಣೆಗೂ ಮುನ್ನ ಆರೋಪಿ ಸತೀಶ್ ಬಾಬಣ್ಣ ನಮ್ಮ ಮನೆಗೆ ಬಂದು ಭವಾನಿ ಅಕ್ಕ ಕರೆಯುತ್ತಾರೆ ಎಂದು ಹೇಳಿ ತಾಯಿಯನ್ನು ಹೊಳೆನರಸಿಪುರಕ್ಕೆ ಕರೆದುಕೊಂಡು ಹೋದರು. ಚುನಾವಣೆಯ ದಿವಸ ಬೆಳಗ್ಗೆ ತಾಯಿಯನ್ನು ಮರಳಿ ಕರೆದುಕೊಂಡು ಬಂದು ಬಿಟ್ಟರು. ನನ್ನ ತಂದೆ ಮತ್ತು ತಾಯಿಗೆ ಪೊಲೀಸಿನವರು ಬಂದರೆ ಏನೂ ಹೇಳಬೇಡಿ, ಅವರಿಗೆ ಸಿಗಬೇಡಿ. ನಿಮ್ಮ ಮೇಲೆ ಕೇಸ್ ಆಗುತ್ತದೆ. ಬಂದರೆ ನನಗೆ ತಿಳಿಸಿ. ನಾನು ಬಂದು ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿ ಹೋದರು. ಎ.29ರಂದು ರಾತ್ರಿ ಸತೀಶ್ ಬಾಬಣ್ಣ, ನಿಮ್ಮ ತಾಯಿ ಪೊಲೀಸಿನವರಿಗೆ ಸಿಕ್ಕಿ ಹಾಕಿಕೊಂಡರೆ ಕೇಸು ಆಗುತ್ತದೆ. ಮತ್ತೆ ನೀವು ಸಹ ಜೈಲಿಗೆ ಹೋಗಬೇಕಾಗುತ್ತದೆ. ರೇವಣ್ಣ ಸಾಹೇಬರು ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ ಎಂದು ಹೇಳಿ ತಾಯಿಯನ್ನು ಬೈಕಿನಲ್ಲಿ ಕರೆದುಕೊಂಡು ಹೋದರು. ಅವರನ್ನು ಎಲ್ಲಿಗೆ ಕರೆದುಕೊಂಡು ಹೋದರು ಎಂಬುದು ಗೊತ್ತಿಲ್ಲ. ಮೇ 1ರಂದು ನನ್ನ ಸ್ನೇಹಿತರು ನಮ್ಮ ತಾಯಿಯ ವೀಡಿಯೋಗಳು ಮೊಬೈಲ್‌ನಲ್ಲಿವೆ ಎಂದಿದ್ದರು. ಬಳಿಕ ಬಂದ ಸತೀಶ್ ಬಾಬಣ್ಣ, ಈ ಹಿಂದೆ ರೇವಣ್ಣ ಸಾಹೇಬರ ಮಗ ಬೇರೆಯವರ ಜತೆ ಗಲಾಟೆ ಮಾಡಿದಾಗ ನಿಮ್ಮ ಅಮ್ಮನೂ ದೊಣ್ಣೆ ಹಿಡಿದುಕೊಂಡು ನಿಂತಿರುವ ಫೋಟೋ ಬಂದಿದೆ. ಅದಕ್ಕೆ ಎಫ್ಐಆರ್ ಆಗಿಬಿಟ್ಟಿದೆ. ಜಾಮೀನಿನಲ್ಲಿ ಬಿಡಿಸಿಕೊಂಡು ಬರಬೇಕು ಎಂದು ಹೇಳಿದರು. ನನ್ನ ತಾಯಿಯನ್ನು ಒತ್ತಾಯದಿಂದ ಕರೆದುಕೊಂಡು ಹೋಗಿ ಯಾವುದೋ ಗೊತ್ತಿಲ್ಲದ ಜಾಗದಲ್ಲಿ ಕೂಡಿಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎಸ್‌ಐಟಿ ತನಿಖೆಯ
3 ಪ್ರಕರಣಗಳ ವಿವರ
ಪ್ರಕರಣ 1
ಹಾಸನದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಹೊಳೆನರಸೀಪುರ ಪೊಲೀಸ್ ಠಾಣೆಗೆ ರೇವಣ್ಣ ಮನೆ ಕೆಲಸದಾಕೆ ಕೊಟ್ಟ ಪ್ರಕರಣದಲ್ಲಿ ರೇವಣ್ಣ ಮೊದಲ ಆರೋಪಿಯಾದರೆ, ಪ್ರಜ್ವಲ್ ರೇವಣ್ಣ ಎರಡನೇ ಆರೋಪಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಇಬ್ಬರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತ್ತು. ಆದರೆ ಇಬ್ಬರು ಗೈರಾಗಿದ್ದರು. ಪ್ರಕರಣ 2
ಹಾಸನದ ಮಹಿಳಾ ಜನಪ್ರತಿನಿಧಿಯೊಬ್ಬರು ನ್ಯಾಯಾಧೀಶರ ಮುಂದೆ ಗುರುವಾರ 164 ಹೇಳಿಕೆ ದಾಖಲಿಸಿದ್ದರು. ಎಸ್‌ಐಟಿ ಮುಖ್ಯಸ್ಥರ ಮುಂದೆ ಇದೇ ಸಂತ್ರಸ್ತೆ ನೀಡಿದ್ದ ಹೇಳಿಕೆ ಆಧರಿಸಿ ಸಿಐಡಿಯಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಮಾತ್ರ ಎಫ್ಐಆರ್ ದಾಖಲಾಗಿದೆ. ಪ್ರಕರಣ 3
ಮಹಿಳೆಯನ್ನು ಅಪಹರಣ ಮಾಡಿ ಕೂಡಿ ಹಾಕಿದ ಆರೋಪದಡಿ ಮೈಸೂರಿನ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ರೇವಣ್ಣ ಹಾಗೂ ರೇವಣ್ಣ ಪರಿಚಿತ ಸತೀಶ್ ಬಾಬಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ.