ಹಾಸನ: ಜಿಲ್ಲೆಯಲ್ಲಿ ದಿನನಿತ್ಯ ಬಹುತೇಕ ಭಾಗಶಃ ಲಾಕ್‌ಡೌನ್ ಆಗುತ್ತಿರುವುದರಿಂದ ಸಂಪೂರ್ಣ ಲಾಕ್‌ಡೌನ್ ಮಾಡುವುದು ಬೇಡ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳೊಂದಿಗೆ ಸೋಮವಾರ ವಿಡಿಯೋ ಸಂವಾದ ನಡೆಸಿ ಜಿಲ್ಲೆಯ ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದ ಸಿಎಂ ಈ ವಾರದ ಪರಿಸ್ಥಿತಿ ನೋಡಿಕೊಂಡು ನಂತರವಷ್ಟೇ ಹಾಸನದಲ್ಲಿ ಸಂಪೂರ್ಣ ಲಾಕ್‌ಡೌನ್ ಬಗ್ಗೆ ನಿರ್ಧರಿಸಿ ಎಂದು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದರು.
ಕೋವಿಡ್ ವಿಚಾರದಲ್ಲಿ ಅಧಿಕಾರಿಗಳು ಮೈಮರೆಯಬಾರದು, ಆಯಾ ಜಿಲ್ಲೆಯ ಸುರಕ್ಷತೆಯ ಸಲುವಾಗಿ ಅಗತ್ಯವಾದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಅಧಿಕಾರವಿದೆ. ಹಾಗಾಗಿ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ ಎಂದರು. ರೈತರಿಗೆ ಬೇಕಾದ ಸವಲತ್ತುಗಳನ್ನು ಕಡ್ಡಾಯವಾಗಿ ಒದಗಿಸಿರಿ, ಏನೇ ಸಮಸ್ಯೆಗಳಿದ್ದಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರನ್ನು ಸಂಪರ್ಕಿಸುವಂತೆ ಮುಖ್ಯ ಮಂತ್ರಿ ಯಡಿಯೂರಪ್ಪ ನಿರ್ದೇಶಿಸಿದರು.
ವಿಡಿಯೋ ಸಂವಾದದಲ್ಲಿ ಬೆಂಗಳೂರಿನಿಂದ ಪಾಲ್ಗೊಂಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ಮಾತನಾಡಿ, ಹಾಸನ ಜಿಲ್ಲಾಡಳಿತ ಕೊರೊನಾವನ್ನು ವ್ಯವಸ್ಥಿತವಾಗಿ ನಿಭಾಯಿಸುತ್ತಿದೆ. ಸೊಂಕು ನಿಯಂತ್ರಣಕ್ಕೆ ಎಲ್ಲಾರೀತಿಯ ಮಂಜಾಗ್ರತೆ ವಹಿಸುತ್ತಿದೆ. ಎಲ್ಲಾ ಅಧಿಕಾರಿಗಳು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ. ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ಹೆಚ್ಚುವರಿ 200 ಬೆಡ್ ಗಳು ಅಗತ್ಯವಿದ್ದು, ಶೀಘ್ರವಾಗಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮಾತನಾಡಿ, ಕೊರೊನಾ ಚಿಕಿತ್ಸೆಗಾಗಿ ಗುರು ತಿಸಿರುವ ಖಾಸಗಿ ಆಸ್ಪತ್ರೆಗಳು ಸರಿಯಾದ ವಿಧಾನದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡದಿದ್ದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾಧಿಕಾರಿ ಆರ್. ಗಿರೀಶ್ ಅವರು ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಕುರಿತಂತೆ ಮುಖ್ಯಮಂತ್ರಿಯವರಿಗೆ ವರದಿ ನೀಡಿ ಪ್ರಸ್ತುತ ಪರಿಸ್ಥಿತಿ ವಿವರಿಸಿದರು.