Advertisement

ಹಾಸನ: ಮರೆಯಾದ ಕೋವಿಡ್ ಆತಂಕ

12:02 PM Apr 29, 2020 | mahesh |

ಹಾಸನ/ಚನ್ನರಾಯಪಟ್ಟಣ: ಮುಂಬೈನಿಂದ ಕ್ಯಾಂಟರ್‌ ಲಾರಿಯಲ್ಲಿ ಕೋವಿಡ್ ಸೋಂಕಿನೊಂದಿಗೆ ಬಂದಿದ್ದ ನಾಗಮಂಗಲ ತಾಲೂಕಿನ ಸಾತೇನಹಳ್ಳಿಯ ವ್ಯಕ್ತಿ (ಪಿ.505)ಯೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಚನ್ನರಾಯಪಟ್ಟಣ ತಾಲೂಕಿನ 8 ಜನರ ಪ್ರಾಥಮಿಕ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್‌ ವರದಿ ಬಂದಿದೆ. ಹಾಗಾಗಿ ಹಾಸನ ಜಿಲ್ಲೆಯ ಜನರು ಹಾಗೂ ಜಿಲ್ಲಾಡಳಿತದವರು ಸದ್ಯಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Advertisement

8 ಮಂದಿಗೆ ಐಸೋಲೇಷನ್‌, 71 ಮಂದಿ ಪರೀಕ್ಷೆ: ಮುಂಬೈನಿಂದ ಲಾರಿಯಲ್ಲಿ ಬಂದಿದ್ದ ವ್ಯಕ್ತಿ ಚನ್ನರಾಯಪಟ್ಟಣ ತಾಲೂಕಿನ ಬಿಳಗಿ ಹಳ್ಳಿ, ಕಗ್ಗೆರೆ, ಶಿವಪುರ ಮತ್ತಿತರ ಕಡೆ ಏ.22ರಂದು ಸಂಚರಿಸಿ ಹಲವರನ್ನು ಭೇಟಿಯಾಗಿದ್ದ. ಆತನ ಸಂಚಾರದ ವಿವರ ಪಡೆದು ಮುಂಬೈನಿಂದ ಸೋಂಕಿತನೊಂದಿಗೆ ಬಂದಿದ್ದ ಯುವಕ ಸೇರಿ 8 ಮಂದಿ ಪ್ರಾಥಮಿಕ ಸಂಪರ್ಕಿತರನ್ನು ಹಿಮ್ಸ್‌ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿಟ್ಟು ಪರೀಕ್ಷೆಗೊಳಪಡಿಸಿದ್ದು, ಎಲ್ಲರಲ್ಲೂ ನೆಗೆಟಿವ್‌ ವರದಿ ಬಂದಿದೆ. ಆದರೂ 12 ದಿನದ ಪರೀಕ್ಷಾ ವರದಿ ಬರುವವರೆಗೂ ಐಸೋಲೇಷನ್‌ನಲ್ಲಿಯೇ
ಅವರನ್ನು ಇರಿಸಲು ನಿರ್ಧರಿಸಲಾಗಿದೆ. ಈ ಪ್ರಕರಣದಲ್ಲಿ 71 ಮಂದಿ ದ್ವಿತೀಯ ಸಂಪರ್ಕಿತರನ್ನು ಪರೀಕ್ಷೆಗೊಳಪಡಿಸಿದ್ದು, ಅವರೆಲ್ಲರ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ನೆಗೆಟಿವ್‌ ವರದಿ ಬಂದಿದೆ.

ಆತಂಕ ಮೂಡಿಸಿದ್ದ ಪ್ರಕರಣ: ಕಳೆದ 35 ದಿನಗಳಿಂದ ಕೋವಿಡ್ ಸೋಂಕು ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದ ಹಾಸನ ಜಿಲ್ಲಾಡಳಿತಕ್ಕೆ ನಾಗಮಂಗಲ ತಾಲೂಕಿನ ವ್ಯಕ್ತಿ
ಚನ್ನರಾಯಪಟ್ಟಣದಲ್ಲಿ ಸಂಚರಿಸಿದ್ದು ದೊಡ್ಡ ತಲೆನೋವು ತಂದಿತ್ತು. ಆದರೆ ಆತನೊಂದಿಗೆ ಸಂಪರ್ಕವಿದ್ದವರ ವರದಿ ನೆಗೆಟಿವ್‌ ಬಂದಿರುವುದರಿಂದ ಜಿಲ್ಲೆಯ ಜನರ ನಿರಾಳರಾಗಿದ್ದಾರೆ.

ಗ್ರಾಮಗಳಿಗೆ ದಿಗ್ಬಂಧನ: ನಾಗ ಮಂಗಲ ತಾಲೂಕಿನ ವ್ಯಕ್ತಿ ಸಂಚರಿಸಿದ್ದ ಚನ್ನರಾಯಪಟ್ಟಣ ತಾಲೂಕಿನ ಕಗ್ಗೆರೆ, ದೇವರ ಹಳ್ಳಿ, ಶಿವಪುರ ಮತ್ತು ಹೆಗ್ಗಡಿಹಳ್ಳಿಯ ಜನರು ಹೊರ ಹೋಗದಂತೆ ಹಾಗೂ ಬೇರೆ ಗ್ರಾಮಗಳ ಜನರು ಅ ಗ್ರಾಮಗಳಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಮಾಹಿತಿ ನೀಡಿದ್ದಾರೆ. ಲಾರಿ ಚಾಲಕ ಹಾಸನ ಸುತ್ತಮುತ್ತ ಸಂಚರಿಸಿಲ್ಲ. ಆದರೆ ಆತ ಸಂಪರ್ಕಿಸಿದ್ದನೆನ್ನಲಾದವರನ್ನೂ ಗುರ್ತಿಸಿ ಪರೀಕ್ಷೆಗೊಳಪಡಿಸಲಾಗಿದೆ. ಚಾಲಕ ಈಗ ಮುಂಬೈನಲ್ಲಿದ್ದಾನೆ. ಆತ ಆಲೂರಿನಲ್ಲಿ ತರಕಾರಿ ತುಂಬಿಕೊಂಡು ಹೋಗಿದ್ದಾನೆ ಎನ್ನಲಾಗಿದೆ. ಲಾರಿಯಲ್ಲಿ ಚಾಲಕ ಸೇರಿ ಒಟ್ಟು ಮೂವರು ಮುಂಬೈನಿಂದ ಬಂದಿದ್ದು, ಕೋವಿಡ್ ಸೋಂಕಿತ ನಾಗಮಂಗಲದ ವ್ಯಕ್ತಿ ಮಂಡ್ಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಜೊತೆ ಬಂದಿದ್ದವ ವ್ಯಕ್ತಿ ಸೇರಿ ಒಟ್ಟು 8 ಮಂದಿ ಪ್ರಾಥಮಿಕ ಸಂಪರ್ಕಿತರು ಹಿಮ್ಸ್‌ ಆಸ್ಪತ್ರೆಯ ಐಸೋಲೇಷನ್‌ನಲ್ಲಿಡಲಾಗಿದೆ ಎಂದರು.

ಜಿಲ್ಲಾಡಳಿತದಿಂದ ಗಡಿ ಬಿಗಿ ಭದ್ರತೆ
ಮಂಡ್ಯದಿಂದ ಚನ್ನರಾಯಪಟ್ಟಣ ತಾಲೂಕು ಸಂಪರ್ಕಿಸುವ ಎಲ್ಲ ರಸ್ತೆಗಳನ್ನೂ ಬಂದ್‌ ಮಾಡಲಾಗಿದ್ದು, ಬಿಗಿ ಪೊಲೀಸ್‌ ಪಹರೆ ಹಾಕಲಾಗಿದೆ. ಸೋಮವಾರ ರಾತ್ರಿಯೇ ಎಸ್ಪಿ ಆರ್‌.
ಶ್ರೀನಿವಾಸಗೌಡ ಭೇಟಿ ನೀಡಿ ಬಿಗಿ ಭದ್ರತಾ ವ್ಯವಸ್ಥೆ ಮಾಡಿದ್ದಾರೆ. ಡೀಸಿ ಆರ್‌.ಗಿರೀಶ್‌, ಎಸ್ಪಿ ಶ್ರೀನಿವಾಸಗೌಡ, ಜಿಪಂ ಸಿಇಒ ಪರಮೇಶ್‌ ಅವರು ಶಾಸಕ ಸಿ.ಎನ್‌.ಬಾಲಕೃಷ್ಣ ಅವರೊಂದಿಗೆ ನಾಲ್ಕು ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next