ಹಾಸನ: ಜಿಲ್ಲೆಯಲ್ಲಿ ಕಳೆದ ಮೇ ತಿಂಗಳಲ್ಲಿ ವಾಡಿಕೆಗಿಂತ ಶೇ.22ರಷ್ಟು ಹೆಚ್ಚು ಮಳೆ ದಾಖಲಾಗಿದೆ. ವಿವಿಧ ಬೆಳೆಗಳ ಬಿತ್ತನೆ ಚಟುವಟಿಕೆ ಆರಂಭವಾಗಿದ್ದು, ಶೇ.11. ರಷ್ಟು ಬಿತ್ತನೆಯಾಗಿದೆ. ಮೇ ತಿಂಗಳಲ್ಲಿ ವಾಡಿಕೆ ಮಳೆ 106 ಮಿ.ಮೀ. ಗಳಾಗಿದ್ದು,129 ಮಿ.ಮೀ. ಮಳೆ ಯಾಗಿದೆ. ಅರಕಲಗೂಡು ಹೊರತುಪಡಿಸಿ ಉಳಿದೆಲ್ಲಾ ತಾಲೂಕುಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.
ಅರಕಲ ಗೂಡು ತಾಲೂಕು ಕಸಬಾ ಹೋಬಳಿಯಲ್ಲಿ ಶೇ.39ರಷ್ಟು ಮಳೆ ಕೊರತೆಯಾಗಿದ್ದರೆ, ಕೊಣನೂರು ಹೋಬಳಿಯಲ್ಲಿ ಶೇ.6ರಷ್ಟು, ಮಲ್ಲಿಪಟ್ಟಣ ಹೋಬಳಿಯಲ್ಲಿ ಶೇ.38ರಷ್ಟು ಹಾಗೂ ರಾಮನಾಥಪುರ ಹೋಬಳಿಯಲ್ಲಿ ಶೇ.2ರಷ್ಟು ಮಳೆ ಕೊರತೆಯಾಗಿದೆ.
ಅರಸೀಕೆರೆ, ಹೊಳೆನರಸೀಪುರದಲ್ಲಿ ಹೆಚ್ಚು ಮಳೆ: ಅರಸೀಕೆರೆ ಮತ್ತು ಹೊಳೆನರಸೀಪುರ ತಾಲೂಕಿನಲ್ಲಿ ವಾಡಿಕೆಗಿಂತ ಕ್ರಮವಾಗಿ ಶೇ.5 ಮತ್ತು ಶೇ.3ರಷ್ಟು ಹೆಚ್ಚು ಮಳೆಯಾಗಿದೆ. ಅರಸೀಕೆರೆ ತಾಲೂಕಿನ ಕಸಬಾ ಹೋಬಳಿಯಲ್ಲಿ ಶೇ.15ರಷ್ಟು, ಬಾಣಾವರ ಹೋಬಳಿಯಲ್ಲಿ ಶೇ.8ರಷ್ಟು ಹಾಗೂ ಜಾವಗಲ್ ಹೋಬಳಿಯಲ್ಲಿ ಶೇ.12ರಷ್ಟು ಮಳೆ ಕೊರತೆಯಾಗಿದೆ.
ಹೊಳೆನರಸೀಪುರ ತಾಲೂಕಿನ ಹಳೆಕೋಟೆ ಹೋಬಳಿಯಲ್ಲಿ ಶೇ. 8ರಷ್ಟು ಕೊರತೆಯಾಗಿದ್ದರೆ, ಸಕಲೇಶಪುರ ತಾಲೂಕಿನ ಯಸಳೂರು ಹೋಬಳಿಯಲ್ಲಿ ಶೇ.10ರಷ್ಟು ಮಳೆ ಕೊರತೆ ದಾಖಲಾಗಿದೆ. ಇನ್ನುಳಿದಂತೆ ಜಿಲ್ಲೆಯ ಎಲ್ಲ ಹೋಬಳಿಗಳಲ್ಲೂ ವಾಡಿಕೆಯಷ್ಟು ಮಳೆ ಸುರಿದಿದೆ.
ಮೆಕ್ಕೆ ಜೋಳ ಬಿತ್ತನೆ ಹೆಚ್ಚು: ಜಿಲ್ಲೆಯಲ್ಲಿ ಏಕದಳ ಧಾನ್ಯಗಳ ಬಿತ್ತನೆಯ ವಾರ್ಷಿಕ ಗುರಿ 1,87,750 ಹೆಕ್ಟೇರ್. ಅದರಲ್ಲಿ ಮೆಕ್ಕೆಜೋಳದ ಪ್ರಮಾಣ 78,000 ಹೆಕ್ಟೇರ್. ಇದುವರೆಗೆ 14,009 ಹೆಕ್ಟೇರ್‌ನಲ್ಲಿ ಮೆಕ್ಕೆ ಜೋಳ ಬಿತ್ತನೆಯಾಗಿದೆ. ಏಕದಳ ಧಾನ್ಯಗಳ ಒಟ್ಟು ಬಿತ್ತನೆ ಪ್ರಮಾಣ 14,009 ಹೆಕ್ಟೇರ್. ಮೆಕ್ಕೆ ಜೋಳ ಹೊರತುಪಡಿಸಿ ಇನ್ನುಳಿದ ಏಕದಳ ಧಾನ್ಯಗಳ ಬಿತ್ತನೆ ಇನ್ನೂ ಆರಂಭವಾಗಿಲ್ಲ.
ವಾಣಿಜ್ಯ ಬೆಳೆಗಳ ಒಟ್ಟು ಗುರಿ 12,850 ಹೆಕ್ಟೇರ್. ಆ ಪೈಕಿ ಇದುವರೆಗೆ 4,420 ಹೆಕ್ಟೇರ್ ಬಿತ್ತನೆಯಾಗಿದೆ. ಆ ಪೈಕಿ ತಂಬಾಕು ಬೆಳೆಯ ಬಿತ್ತನೆ ಗುರಿಗೆ 4,375 ಹೆಕ್ಟೇರ್‌ಸಾಧನೆಯಾಗಿದೆ. ತಂಬಾಕು ಹೊರತು ಪಡಿಸಿ ಉಳಿದ ವಾಣಿಜ್ಯ ಬೆಳೆಗಳ ಬಿತ್ತನೆ ಯಾಗಿರುವ ಪ್ರಮಾಣ 147 ಹೆಕ್ಟೇರ್ ಮಾತ್ರ. ಅದರಲ್ಲಿ ನೆಲಗಡಲೆ 145 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.
ಜಿಲ್ಲೆಯಲ್ಲಿಈವರೆಗೆ ಆಶಾದಾಯಕ ಮಳೆ ಯಾಗಿದೆ. ಬಿತ್ತನೆ ಚಟುವಟಿಕೆಗಳು ಆರಂಭವಾಗಿದ್ದು, ರೈತರಿಗೆ ಅಗತ್ಯ ವಿರುವಷ್ಟು ಬಿತ್ತನೆ ಬೀಜ ಮತ್ತು ರಸ ಗೊಬ್ಬರದ ದಾಸ್ತಾನು ಮಾಡಲಾಗಿದೆ.
-ಮಧುಸೂದನ್, ಜಂಟಿ ಕೃಷಿ ನಿರ್ದೇಶಕ
* ಎನ್. ನಂಜುಂಡೇಗೌಡ