Advertisement

ಉಕ್ಕೇರಿವೆ ನದಿಗಳು; ಪುನರ್ವಸು ಮಳೆಯ ಅಬ್ಬರಕ್ಕೆ ಮೂವರ ಸಾವು

06:00 AM Jul 08, 2018 | |

ಬೆಂಗಳೂರು: ರಾಜ್ಯದಲ್ಲಿ ಪುನರ್ವಸು ಮಳೆ ಚುರುಕಾಗಿದ್ದು,ರಾಜ್ಯದ ಕರಾವಳಿ,ಕೊಡಗು,ಮಲೆನಾಡು ಭಾಗಗಳಲ್ಲಿ ಭರ್ಜರಿ ವರ್ಷಧಾರೆಯಾಗುತ್ತಿದೆ.

Advertisement

ಭಾರೀ ಮಳೆಯಿಂದಾಗಿ ಶುಕ್ರವಾರ ತಡರಾತ್ರಿ ದಕ್ಷಿಣ ಕನ್ನ ಡದ ಪುತ್ತೂರಿನಲ್ಲಿ ಗೋಡೆ ಕುಸಿದು ಅಜ್ಜಿ ಹಾಗೂ ಮೊಮ್ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 

ಚಿಕ್ಕಮಗಳೂರು ಜಿಲ್ಲೆಯ ಗೋಣಿಬೈಲ್‌ನಲ್ಲಿ ಶನಿವಾರ ಕೃಷಿ ಹೊಂಡಕ್ಕೆ ಬಿದ್ದು ರೈತರೊಬ್ಬರು ಮೃತಪಟ್ಟಿದ್ದಾರೆ. ಕುಮಾರಧಾರಾ, ತುಂಗಾ, ಭದ್ರಾ, ನೇತ್ರಾವತಿ, ಶರಾವತಿ, ಅಘನಾಶಿನಿ ಸೇರಿದಂತೆ ಈ ಭಾಗದ ನದಿಗಳಲ್ಲಿ ನೆರೆ ಬಂದಿದ್ದು, ಶೃಂಗೇರಿಯ ಕಪ್ಪೆಶಂಕರ ಮತ್ತೆ ಮುಳುಗಿದೆ.

ಇದೇ ವೇಳೆ,ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ,ಕೃಷ್ಣಾ,ವೇದಗಂಗಾ, ದೂದಗಂಗಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ನೆರೆ ಹೆಚ್ಚಿದ್ದು, ಮೂರು ಸೇತುವೆಗಳು ಮುಳುಗಡೆಯಾಗಿವೆ. ಮಳೆಯಿಂದಾಗಿ ಸುಬ್ರಹ್ಮಣ್ಯ, ಸಕಲೇಶಪುರ ಭಾಗದಲ್ಲಿ ಭೂಕುಸಿತ ಉಂಟಾಗಿದ್ದು, ರೈಲು ಸಂಚಾರ ವಿಳಂಬವಾಯಿತು. ಈ ಮಧ್ಯೆ, ರಾಜ್ಯದಲ್ಲಿ ಮುಂದಿನ 2-3 ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಎಲ್ಲೆಲ್ಲಿ ಅನಾಹುತ?
ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಪುತ್ತೂರು ರೈಲು ನಿಲ್ದಾಣ ಸಮೀಪದ ಸಾಲ್ಮರ ಹೆಬ್ಟಾರಬೈಲಿನಲ್ಲಿ ರಾತ್ರಿ 1.30ರ ವೇಳೆ ಮನೆಯೊಂದರ ಮೇಲೆ ಪಕ್ಕದ ಮನೆಯ ಬೃಹತ್‌ ಆವರಣದ ಗೋಡೆ ಜರಿದು ಬಿದ್ದಿದೆ. ಮಣ್ಣಿನಡಿ ಸಿಲುಕಿ ಪಾರ್ವತಿ (65) ಹಾಗೂ ಅವರ ಮೊಮ್ಮಗ ಧನುಷ್‌ (13) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದ 6 ಮಂದಿ ಪಕ್ಕದ ಕೋಣೆಯಲ್ಲಿ ಮಲಗಿದ್ದರಿಂದ ಬಚಾವಾಗಿದ್ದಾರೆ. ಚಿಕ್ಕಮಗಳೂರಿನ ಗಿಣಿಕಲ್‌ ಸಮೀಪದ ಗೋಣಿಬೈಲ್‌ ಗ್ರಾಮದ ಸುರೇಂದ್ರ (46) ಎಂಬುವರು ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಇದೇ ವೇಳೆ, ಉಡು ಪಿಯ ಪಡುಬಿದ್ರಿ ಸಮೀಪದ ಪಲಿಮಾರಿನಲ್ಲಿ ನೆರೆ ನೀರಿನಿಂದ ಆವೃತವಾದ 8 ಮನೆಗಳ ಸುಮಾರು 30 ಮಂದಿಯನ್ನು ಸ್ಥಳೀಯ ಯುವಕರು, ಜನನಾಯಕರು ಹಾಗೂ ಈಜು ಪಟುಗಳ ಸಹಾಯದಿಂದ ಸ್ಥಳಾಂತರಿಸಲಾಗಿದೆ. ಶಿವಮೊಗ್ಗದ ಅರಮನೆಕೇರಿಯ ಜಬೀನಾ ಎಂಬುವರ ಮನೆಯ ಗೋಡೆ ಕುಸಿದು ಬಿದ್ದಿದೆ. ಪಡವಗೋಡಿನಲ್ಲಿ ಕೊಟ್ಟಿಗೆಯೊಂದು ಕುಸಿದು ಬಿದ್ದು ಎಮ್ಮೆ ಮೃತಪಟ್ಟಿದೆ.

Advertisement

ಈ ಮಧ್ಯೆ, ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದ 73ನೇ ಮೈಲು ಎಡಕುಮೇರಿ ಸಮೀಪ ಶನಿವಾರ ಬೆಳಗ್ಗೆ ಮತ್ತೆ ಗುಡ್ಡ ಕುಸಿದಿದ್ದು, ಮಂಗಳೂರು-ಬೆಂಗಳೂರು ರೈಲು ಮುಕ್ಕಾಲು ತಾಸು ತಡವಾಗಿ ಸಂಚರಿಸಿತು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ಪಟ್ಟಣದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಬಾಳೆಹೊನ್ನೂರು, ಮಾಲಗೋಡು, ಹೊನ್ನವಳ್ಳಿ, ಕಿಕ್ರೆ ಹಳ್ಳದ ಸೇತುವೆ ಸೇರಿದಂತೆ ಹಲವು ಸೇತುವೆಗಳು ಮುಳುಗಿದ್ದು, ರಸ್ತೆ ಸಂಚಾರ ಬಂದ್‌ ಆಗಿದೆ. ಭಾರೀ ಮಳೆಯಿಂದ ರಸ್ತೆ ಕಾಣದೆ ಶೃಂಗೇರಿ-ಕೊಪ್ಪ ನಡುವಿನ ತೊರೆಹಡ್ಲು ಸಮೀಪ ಖಾಸಗಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ವಾಲಿದ್ದು, 22 ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಚಾರ್ಮಾಡಿ ಘಾಟ್‌ನಲ್ಲಿ ನಿರಂತರ ಮಳೆಯಿಂದ ಸಂಚಾರಕ್ಕೆ ಅಡ್ಡಿಯಾಗಿದೆ.

24 ಗಂಟೆ ಅವಧಿಯಲ್ಲಿ ಆಗುಂಬೆಯಲ್ಲಿ 206.6 ಮಿಮೀ ಹಾಗೂ ತೀರ್ಥಹಳ್ಳಿಯಲ್ಲಿ 43.02 ಮಿಮೀ ಮಳೆಯಾಗಿದೆ. ತುಂಗಾ ನದಿಯ ಶ್ರೀರಾಮ ಮಂಟಪದಲ್ಲಿ 72 ಅಡಿ ನೀರು ನಿಂತಿದೆ.

ಕೊಡಗಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ಗೆ ಒಳಹರಿವು ಹೆಚ್ಚಿದ್ದು, ಜಲಾಶಯದ ಮಟ್ಟ 108 ಅಡಿಗಳಿಗೆ ಏರಿದೆ. ಕೇರಳದ ವೈನಾಡು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯ ಭರ್ತಿಯಾಗಿದೆ (ಗರಿಷ್ಠ 2284 ಅಡಿ). ಕಾವೇರಿ ಕಣಿವೆಯ ಅತಿ ಚಿಕ್ಕ ಜಲಾಶಯ, ಹಾರಂಗಿ (2859 ಅಡಿ)ಗೆ 25 ಸಾವಿರ ಕ್ಯೂಸೆಕ್‌ ಒಳ ಹರಿವು ಬರುತ್ತಿದ್ದು, ಜಲಾಶಯದ ಮಟ್ಟ 56.46 ಅಡಿಗೆ ತಲುಪಿದೆ. ಭರ್ತಿಗೆ ಇನ್ನು 2 ಅಡಿಗಳಷ್ಟೇ ಬಾಕಿ ಇದೆ.

ಚಿಕ್ಕೋಡಿಯಲ್ಲಿ ಮೂರು ಸೇತುವೆ ಜಲಾವೃತ:
ಈ ಮಧ್ಯೆ, ನೆರೆಯ ಮಹಾರಾಷ್ಟ್ರ ಹಾಗೂ ಬೆಲಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷ್ಣಾ, ವೇದಗಂಗಾ, ದೂದಗಂಗಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ತುಂಬಿ ಹರಿಯುತ್ತಿವೆ. ಕೃಷ್ಣಾ ನದಿ ಭರ್ತಿಯಾಗಿ ಹರಿಯುತ್ತಿದ್ದು, ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ, ದತ್ತವಾಡ- ಮಲಿಕವಾಡ ಸೇತುವೆಗಳು ಜಲಾವೃತವಾಗಿವೆ. ಕೃಷ್ಣಾ ನದಿಯಿಂದ ಹಿಪ್ಪರಗಿ ಜಲಾಶಯಕ್ಕೆ 46,200 ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ಇಷ್ಟೇ ಪ್ರಮಾಣದ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿದು ಬಿಡಲಾಗುತ್ತಿದೆ. ಖಾನಾಪುರ ತಾಲೂಕಿನ ಕಣಕುಂಬಿ, ಜಾಂಬೋಟಿ ಅರಣ್ಯ ಪ್ರದೇಶದಲ್ಲಿ ಒಳ್ಳೆಯ ಮಳೆಯಾಗುತ್ತಿದ್ದು, ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ.

ಕೃಷ್ಣಾ ನದಿ ವ್ಯಾಪ್ತಿಯ ತಾಲೂಕುಗಳಲ್ಲಿ ಇದುವರೆಗೆ ಪ್ರವಾಹದ ಆತಂಕ ಇಲ್ಲ. ಚಿಕ್ಕೋಡಿ ತಾಲೂಕಿನಲ್ಲಿ ಎರಡು ಸೇತುವೆಗಳು ನೀರಿನಲ್ಲಿ ಮುಳುಗಿವೆ. ಆದರೆ ಬೇರೆ ಮಾರ್ಗ ಇರುವದರಿಂದ ಜನ ಸಂಚಾರಕ್ಕೆ ಸಮಸ್ಯೆ ಇಲ್ಲ. ಜನರಿಗೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
– ಜಿಯಾವುಲ್ಲಾ, ಬೆಳಗಾವಿ ಜಿಲ್ಲಾಧಿಕಾರಿ.

Advertisement

Udayavani is now on Telegram. Click here to join our channel and stay updated with the latest news.

Next