Advertisement

8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆಗೆ ಹ್ಯಾಶ್‌ಟ್ಯಾಗ್‌ ಅಭಿಯಾನ

08:35 AM Aug 11, 2017 | Harsha Rao |

ಮಂಗಳೂರು: ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕೆಂದು ಕೇಂದ್ರ ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸುವ ಸಲುವಾಗಿ ಕರಾವಳಿಯ ಯುವ ಪಡೆ ಗುರುವಾರ ಹಮ್ಮಿಕೊಂಡ ಟ್ವೀಟ್‌ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ದೊರೆತಿದೆ. #TuluTo8thSchedule ಹ್ಯಾಶ್‌ಟ್ಯಾಗ್‌ನೊಂದಿಗೆ ನಡೆದ ಈ ಅಭಿಯಾನ ಸಂಜೆ 7 ಗಂಟೆಯವರೆಗೂ ಟ್ವಿಟರ್‌ನಲ್ಲಿ ಟಾಪ್‌ ಟ್ರೆಂಡ್‌ ಆಗಿತ್ತು.

Advertisement

ತುಳು ಭಾಷಾವರ್ಧನೆಗಾಗಿ ಹುಟ್ಟಿಕೊಂಡ ಜೈ ತುಳುನಾಡು ಯುವಕರ ತಂಡವು ಸಂವಿಧಾನದ 8ನೇ ಪರಿಚ್ಛೇದಕ್ಕೆ ತುಳು ಸೇರ್ಪಡೆಗೊಳಿಸಬೇಕೆಂದು ಒತ್ತಾಯಿಸಿ ಈ ಟ್ವಿಟರ್‌ ಅಭಿಯಾನ ಹಮ್ಮಿಕೊಂಡಿತ್ತು. ಇದಕ್ಕಾಗಿ ಕಳೆದ ಹಲವಾರು ದಿನಗಳಿಂದ ಸಾಮಾಜಿಕ ತಾಣಗಳ ಮೂಲಕ ವ್ಯಾಪಕ ಪ್ರಚಾರವನ್ನು ನೀಡಲಾಗಿತ್ತಲ್ಲದೇ, ವಾಟ್ಸಾಪ್‌ ಗ್ರೂಪ್‌ಗ್ಳ ಮೂಲಕವೂ ಜನಮನಕ್ಕೆ ವಿಚಾರವನ್ನು ತಲುಪಿಸುವ ಕೆಲಸ ಮಾಡಲಾಗಿತ್ತು.  

45,200 ಟ್ವೀಟ್‌
ಗುರುವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಗೆ ಟ್ವೀಟ್‌ ಪ್ರಕ್ರಿಯೆ ನಡೆದಿದೆ. ಕನಿಷ್ಠ 30 ಸಾವಿರ ಟ್ವೀಟ್‌ ಮಾಡುವ ಗುರಿ ಹೊಂದಲಾಗಿದ್ದು, ಎಂಟು ಗಂಟೆ ವೇಳೆಗೆ ಟ್ವೀಟ್‌ಗಳ ಸಂಖ್ಯೆ 45,200 ದಾಟಿದ್ದು, 18,700 ರಿಟ್ವೀಟ್‌ಗಳಾಗಿವೆ. ಶೇ. 83ರಷ್ಟು ಪುರುಷರು ಮತ್ತು ಶೇ. 17ರಷ್ಟು ಮಹಿಳೆಯರು ಟ್ವೀಟ್‌ ಮಾಡಿದ್ದಾರೆ. ಈ ಪೈಕಿ ಸುಮಾರು 16,300ದಷ್ಟು ಟ್ವೀಟ್‌ಗಳನ್ನು ವಿದೇಶಗಳಲ್ಲಿ ನೆಲೆಸಿರುವ ತುಳುವರೇ ಮಾಡಿದ್ದಾರೆ. ಇದಲ್ಲದೇ ಬೆಂಗಳೂರು, ಮೈಸೂರು, ಮಡಿಕೇರಿ, ತಮಿಳುನಾಡು ಮುಂತಾದೆಡೆಗಳಲ್ಲಿ ನೆಲೆಸಿರುವ ತುಳುವರು ಕೂಡಾ ಟ್ವೀಟಿಸಿದ್ದಾರೆ. ತುಳು, ಕನ್ನಡ, ಹಿಂದಿ, ಇಂಗ್ಲಿಷ್‌, ತೆಲುಗು, ತಮಿಳು, ಬ್ಯಾರಿ, ಕೊಂಕಣಿ, ಕುಂದಾಪುರ ಕನ್ನಡ, ಮಲೆಯಾಳಂ, ಕೊಡವ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಭಾಷೆಗಳಲ್ಲಿ ಟ್ವೀಟಿಸಿ ತುಳುವಿಗೆ ಸಂವಿಧಾನಿಕ ಮಾನ್ಯತೆ ಕೊಡಲು ಒತ್ತಾಯಿಸಲಾಗಿದೆ ಎಂದು ಜೈ ತುಳುನಾಡು ಅಧ್ಯಕ್ಷ ಅಶ್ವತ್ಥ್ ‘ಉದಯವಾಣಿ’ಗೆ ತಿಳಿಸಿದ್ದಾರೆ. 

ಪಿಎಂ, ಸಿಎಂಗೆ ಟ್ವೀಟ್‌
ಈಗಾಗಲೇ ಅನೇಕ ಬಾರಿ ತುಳು ವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಆದರೆ ಇದುವರೆಗೂ ಆ ಕುರಿತು ಯಾರೂ ಗಮನ ಹರಿಸಿರಲಿಲ್ಲ. ಅದಕ್ಕಾಗಿ ನೇರವಾಗಿಯೇ ಪ್ರಧಾನಿ, ಮುಖ್ಯಮಂತ್ರಿಯವರಿಗೇ ಟ್ವೀಟರ್‌ ಮೂಲಕ ಮೊರೆ ಹೋಗಲಾಗಿದೆ. #TuluTo8thSchedule ಹ್ಯಾಶ್‌ಟ್ಯಾಗ್‌ನೊಂದಿಗೆ ಪಿಎಂಆಫ್‌ಇಂಡಿಯಾ, ಸಿಎಂಆಫ್‌ ಕರ್ನಾಟಕ, ರಾಜ್‌ನಾಥ್‌ಸಿಂಗ್‌, ಸುಷ್ಮಾ ಸ್ವರಾಜ್‌ ಅವರಿಗೆ ಟ್ವೀಟ್‌ ಮಾಡಿ ಒತ್ತಾಯಿಸಲಾಗಿದೆ.

ಸರಣಿ ಟ್ವೀಟ್‌ ಮಾಡಿದ ಸಿ. ಟಿ. ರವಿ
ಮಧ್ಯಾಹ್ನ 2 ಗಂಟೆ ವೇಳೆಗೆ ಈ ಟ್ವೀಟರ್‌ ಅಭಿಯಾನವು ಟ್ವೀಟರ್‌ನ ಟಾಪ್‌ ಟ್ರೆಂಡ್‌ ಆಗಿತ್ತು. ರಾತ್ರಿ 9 ಗಂಟೆ ವೇಳೆಗೆ 45,200ಕ್ಕೂ ಅಧಿಕ ಮಂದಿ ಟ್ವೀಟಿಸಿದ್ದಾರೆ.  ಈ ಟ್ವೀಟರ್‌ ಹ್ಯಾಶ್‌ಟ್ಯಾಗ್‌ ಅಭಿಯಾನದಲ್ಲಿ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರು ಪಾಲ್ಗೊಂಡಿರುವುದು ವಿಶೇಷ. ತುಳು ಭಾಷೆ ಮತ್ತು ತುಳುನಾಡನ್ನು ಬೆಂಬಲಿಸಿ ಸಿ.ಟಿ. ರವಿ ಅವರು ಸರಣಿ ಟ್ವೀಟ್‌ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next