ಶುಭಾಪೂಂಜಾ ಈಗ ದೇವತೆ..! ಅಷ್ಟೇ ಅಲ್ಲ, ಪೂಜಾಗಾಂಧಿ ಕೂಡ ದೇವತೆಯೇ!! ಹೌದು, ಕೆಲ ನಟಿಯರು ಅಭಿಮಾನಿಗಳ ಪಾಲಿಗೆ ದೇವತೆಯಾಗಿ ಕಾಣುವುದುಂಟು. ಇಲ್ಲೀಗ ಹೇಳಹೊರಟಿರುವ ವಿಷಯ, ಶುಭಾಪೂಂಜಾ ಮತ್ತು ಪೂಜಾಗಾಂಧಿ ದೇವತೆಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ದೇವತೆ ಪಾತ್ರದಲ್ಲಿ ಮಿಂಚುತ್ತಿರುವ ಶುಭಾಪೂಂಜಾ ಹಾಗೂ ಪೂಜಾಗಾಂಧಿ ಇಬ್ಬರಿಗೂ ದೈವಭಕ್ತಿ ಇನ್ನಷ್ಟು ಹೆಚ್ಚಾಗಿದೆ ಎಂಬುದು ಸುಳ್ಳಲ್ಲ. ಅಂದಹಾಗೆ, ಇವರಿಬ್ಬರು ದೇವತೆಯರಾಗಿ ಕಾಣಿಸಿಕೊಳ್ಳುತ್ತಿರುವುದು “ಹಾಸನಾಂಭ’ ಚಿತ್ರದಲ್ಲಿ. ಈ ಚಿತ್ರವನ್ನು ಬಿ.ಎ.ಪುರುಷೋತ್ತಮ್ ಓಂಕಾರ್ ನಿರ್ದೇಶಿಸುತ್ತಿದ್ದಾರೆ.
ಇದುವರೆಗೆ ಬಹುತೇಕ ಭಕ್ತಿಪ್ರಧಾನ ಚಿತ್ರಗಳನ್ನೇ ನಿರ್ದೇಶಿಸಿರುವ ಪುರುಷೋತ್ತಮ್ ಓಂಕಾರ್ ಅವರಿಗೆ ಇದು ಹದಿನೈದನೇ ಚಿತ್ರ ಎಂಬುದು ವಿಶೇಷ. ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಹಾಡು ಕೂಡ ನಿರ್ದೇಶಕರೇ ಬರೆದಿದ್ದಾರೆ. ಈಗಾಗಲೇ ಶೇ.90 ರಷ್ಟು ಚಿತ್ರೀಕರಣವನ್ನೂ ಮುಗಿಸಲಾಗಿದೆ.
ಚಿತ್ರದ ಶೀರ್ಷಿಕೆ ಹೇಳುವಂತೆ, ಇದು ಭಕ್ತಿ ಪ್ರಧಾನ ಸಿನಿಮಾ. “ಹಾಸನಾಂಭೆ’ ಹಾಸನದಲ್ಲಿ ಯಾಕೆ ನೆಲೆಸಿದ್ದು, ಅಲ್ಲಿಗೆ ಬಂದಿದ್ದು ಹೇಗೆ, ವರ್ಷಕ್ಕೊಮ್ಮೆ ಬಾಗಿಲು ತೆರೆಯಲು ಕಾರಣವೇನು ಎಂಬಿತ್ಯಾದಿ ಅಚ್ಚರಿಯ ವಿಷಯಗಳು ಚಿತ್ರದಲ್ಲಿರಲಿವೆ. ಚಿತ್ರದಲ್ಲಿ ಪೂಜಾಗಾಂಧಿ ಪಾರ್ವತಿಯಾಗಿ ನಟಿಸಿದರೆ, ಶುಭಾಪೂಂಜಾ ಅವರು ವೈಷ್ಣವಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶುಭಾಪೂಂಜಾ ಅವರು ಈ ಹಿಂದೆ “ಸಿಗಂಧೂರೇಶ್ವರಿ’ ಚಿತ್ರದಲ್ಲಿ ಭಕ್ತಿಯಾಗಿ ನಟಿಸಿದ್ದರು. ಈ ಹಿಂದೆ ಭಕ್ತಪ್ರಧಾನ ಚಿತ್ರಗಳಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದ ಶುಭಾಪೂಂಜಾ ಅವರಿಗೆ ಇಲ್ಲಿ ವೈಷ್ಣವಿ ದೇವತೆಯಾಗಿ ನಟಿಸುವ ಅವಕಾಶ ಸಿಕ್ಕಿದೆ. ಅಂತೆಯೇ ಪೂಜಾಗಾಂಧಿ ಅವರಿಗೆ ದೇವತೆಯಾಗಿ ಇದು ಮೊದಲ ಅನುಭವ.
ಇವರೊಂದಿಗೆ ಧರಣಿ ಎಂಬ ಹೊಸ ಪ್ರತಿಭೆ ಬ್ರಾಹ್ಮಿಯಾಗಿ ನಟಿಸುತ್ತಿದ್ದಾರೆ. ಈ ಮೂವರು ದೇವತೆ ಸೇರಿ “ಹಾಸನಾಂಭೆ’ ಹೆಸರಲ್ಲಿ ಪ್ರತಿಷ್ಠಾಪನೆಯಾಗಿದೆ. ಏಳು ದೇವತೆಯರು ಹಾಸನಕ್ಕೆ ಬಂದು, ಕೊನೆಯಲ್ಲಿ ಮೂವರು ದೇವತೆಗಳು ಮಾತ್ರ ಅಲ್ಲಿ ನೆಲೆಸುತ್ತಾರೆಂಬ ಮಾತಿದೆ. ಅದೇ ವಿಷಯ ಇಟ್ಟುಕೊಂಡು ಚಿತ್ರ ಮಾಡಿರುವುದಾಗಿ ಹೇಳುತ್ತಾರೆ ನಿರ್ದೇಶಕರು.
ಇನ್ನು, ಈ ಚಿತ್ರದಲ್ಲಿ ನವೀನ್‌ಕೃಷ್ಣ ಅವರು ಈಶ್ವರನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ಕೃಷ್ಣಪ್ಪನಾಯಕ ಎಂಬ ರಾಜನ ಕಥೆಯೂ ಬರಲಿದ್ದು, ಆ ಕಥೆಯ ರಾಜನಾಗಿ ಶ್ರೀನಿವಾಸಮೂರ್ತಿ ನಟಿಸಿದರೆ, ಮಹಾಮಂತ್ರಿಯಾಗಿ ರಮೇಶ್ ಭಟ್, ನಾರದನಾಗಿ ಉಮೇಶ್, ಅಂಧಕಾಸುರ ಪಾತ್ರದಲ್ಲಿ ಉಮೇಶ್ ಬಣಕಾರ್ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರ ಶುರುವಾಗೋದೇ ಅಂಧಕಾಸುರನ ಮೂಲಕ ಎಂಬುದು ನಿರ್ದೇಶಕರ ಮಾತು. ರಾಜ್‌ಭಾಸ್ಕರ್ ಐದು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಗೌರಿ ವೆಂಕಟೇಶ್ ಛಾಯಾಗ್ರಹಣವಿದೆ. ಚಿತ್ರವನ್ನು ಹಾಸನ ಪ್ರಕಾಶ್ ಹರಳೆ ನಿರ್ಮಿಸುತ್ತಿದ್ದು, ಇದು ಅವರ ಮೊದಲ ಸಿನಿಮಾ. ಚಿತ್ರದಲ್ಲಿ ತಾರಾ, ಚಂದ್ರಕಲಾ ಮೋಹನ್ ಇತರರು ಇದ್ದಾರೆ.