ಹಾಸನ: ಈ ವರ್ಷ ಅ.13 ರಿಂದ 27 ರವರೆಗೆ ನಡೆದ ಶ್ರೀ ಹಾಸನಾಂಬ ಮತ್ತು ಸಿದ್ದೇಶ್ವರ ಜಾತ್ರಾ ಮಹೋತ್ಸವದ ಹುಂಡಿ ಎಣಿಕೆ ಶುಕ್ರವಾರ ಬೆಳಗ್ಗೆಯಿಂದ ರಾತ್ರಿವರೆಗೂ ನಿರಂತರವಾಗಿ ನಡೆದಿದ್ದು, 3 ಕೋಟಿ ರೂ.ಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ.
ಶ್ರೀ ಹಾಸನಾಂಬೆಯ ನೇರ ದರ್ಶನದ 1000ರೂ. ಮತ್ತು 300 ರೂ. ಟಿಕೆಟ್‌ಗಳ ಮಾರಾಟ ಹಾಗೂ ಲಾಡು ಪ್ರಸಾದದ ಮಾರಾಟದಿಂದ 1.77 ಕೋಟಿ ರೂ. ಸಂಗ್ರಹವಾಗಿದೆ. ಹುಂಡಿಯಿಂದ 1, 80, 17450 ರೂ. ಸಂಗ್ರಹವಾಗಿದೆ. ಚಿಲ್ಲರೆ ಎಣಿಕೆ ಕಾರ್ಯ ನಾಳೆ ಮುಂದುವರೆಯಲಿದ್ದು, ಸಿದ್ದೇಶ್ವರ ದೇಗುಲದ ಹುಂಡಿ ಎಣಿಕೆ ಕಾರ್ಯ ಮುಂದುವರೆದಿದೆ. ಈ ವರ್ಷ ಸುಮಾರು ಮೂರು ಕೋಟಿ ರೂ.ಅಧಿಕ ಆದಾಯ ದೇವಾಲಯಕ್ಕೆ ಹರಿದು ಬಂದಿದೆ. ವಿದೇಶಿ ಕರೆನ್ಸಿಗಳು, ಚಿನ್ನ,ಬೆಳ್ಳಿ ಆಭರಣಗಳು ಹುಂಡಿಯಲ್ಲಿದ್ದವು. ಶುಕ್ರವಾರ ಬೆಳಿಗ್ಗೆ 8 ಗಂಟೆಯಿಂದ ಕಾಣಿಕೆ ಹುಂಡಿಗಳ ಹಣ ಎಣಿಕೆ ಕಾರ್ಯ ಪ್ರಾರಂಭಿಸಿ ರಾತ್ರಿ ವೇಳೆಗೆ ಎಣಿಕೆ ಕಾರ್ಯ ಮುಕ್ತಾಯಗೊಂಡಿತು.
ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ಎಣಿಕೆ ಕಾರ್ಯ ಶಿಸ್ತುಬದ್ಧವಾಗಿ ನಡೆಯಿತು. ಕಂದಾಯ ಇಲಾಖೆ ಸಿಬ್ಬಂದಿ, ಸ್ಕೌಟ್ಸ್, ಗೈಡ್ಸ್ ಕಾರ್ಯಕರ್ತರು ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದು, ದೇವಾಲಯದ ಆಡಳಿತಾಧಿಕಾರಿಯೂ ಆದ ಹಾಸನ ಉಪ ವಿಭಾಗಾಧಿಕಾರಿ ಬಿ.ಎ.ಜಗದೀಶ್ ಅವರು ಮೇಲುಸ್ತುವಾರಿ ವಹಿಸಿದ್ದರು. ಮೊದಲು ಹುಂಡಿಗಳನ್ನು ತೆರೆದು ವಿವಿಧ ಮುಖ ಬೆಲೆಯ ನೋಟುಗಳನ್ನು ಪ್ರತ್ಯೇಕವಾಗಿ ಕಟ್ಟುಗಳನ್ನು ( ಬಂಡಲ್ಸ್) ಮಾಡಲಾಯಿತು. ಹಾಗೆಯೇ ನಾಣ್ಯಗಳನ್ನೂ ಪ್ರತ್ಯೇಕಗೊಳಿಸಲಾಯಿತು. ಆನಂತರ ಒಂದೊಂದು ಮುಖ ಬೆಲೆಯ ನೋಟುಗಳನ್ನು ಎಣಿಕೆ ಆರಂಭಿಸಲಾಯಿತು.
ಹುಂಡಿಯಲ್ಲಿದ್ದ ಚೀಟಿಗಳ ಬಹಿರಂಗ ನಿರ್ಬಂಧ: ಕಾಣಿಕೆ ಹುಂಡಿಯಲ್ಲಿ ಭಕ್ತರು ತಮ್ಮ ಕೋರಿಕೆಯ ಚೀಟಿಗಳನೂ ಹಾಕಿದ್ದರು. ಹಿಂದಿನ ವರ್ಷಗಳಲ್ಲಿ ಚೀಟಿಗಳು ಮಾಧ್ಯಮ ಪ್ರತಿನಿಧಿಗಳಿ ಕೈ ಗೆ ಸಿಕ್ಕು ಅವಾಂತರವಾಗುತಿತ್ತು. ಹಾಗಾಗಿ ಈ ವರ್ಷ ಹುಂಡಿಯಲ್ಲಿದ್ದ ಚೀಟಿಗಳನ್ನು ಬಹಿರಂಗೊಳಿದಂತೆ ಕಟ್ಟಪ್ಪಣೆ ಹೊರಡಿಸಿದ್ದರಿಂದ ಚೀಟಿಗಳು ಬಹಿರಂಗವಾಗಲಿಲ್ಲ. ಜಾತ್ರಾಮಹೋತ್ಸವದ ಯಶಸ್ಸಿಗೆ ಸಹಕರಿಸಿದ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಮಾಧ್ಯಮ ಪ್ರತಿನಿಧಿಗಳು ಸಾರ್ವಜನಿಕರು ಹಾಗೂ ಹಣ ಎಣಿಕೆ ಕಾñರ್ಯದಲ್ಲಿ ತೊಡಗಿದ ಎಲ್ಲ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರಿಗೆ ಜಿಲ್ಲಾಧಿಕಾರಿ ಅರ್ಚನಾ ಮತ್ತು ಉಪ ಭಾಗಾಧಿಕಾರಿ ಬಿ.ಎ. ಜಗದೀಶ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.