Advertisement

ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮತ್ತೆ ಕುತ್ತು

05:22 PM Nov 10, 2020 | Suhan S |

ಹಾಸನ: ನಗರದ ಹೊರವಲಯದ ಬೂವನಹಳ್ಳಿ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಾಧೀನಪಡಿಸಿ ಕೊಂಡಿರುವ ಭೂಮಿ ಮತ್ತೆ ವಿವಾದಕ್ಕೀಡಾಗುತ್ತಿದೆ. ಸ್ವಾಧೀನಪಡಿಸಿಕೊಂಡಿರುವ ಹೆಚ್ಚುವರಿ ಭೂಮಿಯಲ್ಲಿ ಹೊಸ ಬಡಾವಣೆಯ ನಿವೇಶನಗಳ ನಿರ್ಮಾಣಕ್ಕೆ ಬಳಸಿಕೊಳ್ಳುವ ಚರ್ಚೆ ಆರಂಭವಾಗಿರುವುದು ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಅಡಚಣೆಯಾಗುವ ಮುನ್ಸೂಚನೆಯಾಗಿದೆ.

Advertisement

ಐದು ದಶಗಳ ಹಿಂದೆಯೇ ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಪ್ರಯತ್ನ ಆರಂಭವಾದರೂಇನ್ನೂ ವಿಮಾನ ನಿಲ್ದಾಣ ಯೋಜನಾ ಸಾಕಾರಗೊಂಡಿಲ್ಲ. 10 ವರ್ಷಗಳ ಹಿಂದೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮಾಜಿ ಪ್ರಧಾನಿ ದೇವೇಗೌಡಭೂಮಿ ಪೂಜೆ ನೆರವೇರಿ ಸಿದ್ದರು. ಆದರೆ,ಕಾಮಗಾರಿ ಆರಂಭವಾಗಲೇ ಇಲ್ಲ. ಆದರೆ, 761 ಎಕರೆ ಭೂಮಿಯನ್ನು ಸ್ವಾಧೀನಪಡಿಸಿ ಕೊಂಡು ವಿಮಾನ ನಿಲ್ದಾಣ ನಿರ್ಮಾಣಕ್ಕೆಕಾಯ್ದಿರಿಸಲಾಗಿತ್ತು.

ಭೂಮಿ ಇರುವುದರಿಂದ ಎಂದಾದರೊಂದು ದಿನ ವಿಮಾನ ನಿಲ್ದಾಣ ನಿರ್ಮಾಣವಾಗಬಹುದೆಂಬ ನಂಬಿಕೆ ಇತ್ತು. ಆದರೆ, ಹಾಸನನಗರಾಭಿವೃದ್ಧಿ ಪ್ರಾಧಿಕಾರವು ಬೂವನಹಳ್ಳಿ, ಕೆಂಚಟ್ಟಹಳ್ಳಿ, ಗೇಕವರವಳ್ಳಿ, ಸಮುದ್ರವಳ್ಳಿ ಗ್ರಾಮಗಳ ರೈತರ 1160ಎಕರೆಯಲ್ಲಿ ಹೊಸ ವಸತಿ ಬಡಾವಣೆ ನಿರ್ಮಾಣಕ್ಕೆ ನಿರ್ಧರಿಸಿದೆ.

ಮಾಲಿಕರ ಸಭೆಯಲ್ಲಿ ಚರ್ಚೆ: ಈ ಗ್ರಾಮಗಳ ಭೂಮಿಗೆ ಹೊಂದಿಕೊಂಡಂತಿರುವ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ಸ್ವಾಧೀನಪಡಿಸಿ ಕೊಂಡಿರುವ 447 ಎಕರೆಯನ್ನೂ ನಿವೇಶನಗಳನಿರ್ಮಾಣಕ್ಕೆ ಬಳಸಿಕೊಳ್ಳಬೇಕು ಎಂಬ ಚರ್ಚೆ ನಡೆದಿದೆ. ಶಾಸಕ ಪ್ರೀತಂ ಜೆ.ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಭೂ ಮಾಲಿಕರ ಸಭೆಯಲ್ಲಿ ಚರ್ಚೆಗೆ ಬಂದಿದೆ. ಶಾಸಕ ಪ್ರೀತಂ ಜೆ.ಗೌಡ ವಿಮಾನ ನಿಲ್ದಾಣನಿರ್ಮಾಣಕ್ಕೆ ಸ್ವಾಧೀನವಾಗಿರುವ ಹೆಚ್ಚುವರಿ ಭೂಮಿಯನ್ನು ನಿವೇಶನಗಳ ನಿರ್ಮಾಣಕ್ಕೆ ಬಳಸಿ ಕೊಳ್ಳುವಭರವಸೆ ನೀಡಿದ್ದಾರೆ. ಈ ಬೆಳವಣಿಗೆಯು ವಿಮಾನನಿಲ್ದಾಣ ನಿರ್ಮಾಣಕ್ಕೆಕುತ್ತು ತರುವಂತಿದೆ.

ವಿಮಾನ ನಿಲ್ದಾಣ ನಿರ್ಮಾಣದ ಇತಿಹಾಸ: ಹಾಸನದಲ್ಲಿ ವಿಮಾನ ನಿಲ್ದಾಣದ ಪ್ರಸ್ತಾವನೆ1963ರಲ್ಲಿ ಸಿದ್ಧಗೊಂಡಿತು. ಆಗಲೇ ಎಕರೆಗೆ 400 ರೂ. ಪರಿಹಾರ ನೀಡಿ 150 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆನಂತರ ಎಚ್‌ .ಡಿ.ದೇವೇಗೌಡ ಪ್ರಧಾನಿಯಾದಾಗ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ಗರಿಗೆದರಿ, ಮತ್ತೆ 400 ಎಕರೆಗೂ ಹೆಚ್ಚು ಎಕರೆ ಸ್ವಾಧೀನಪಡಿಸಿ ಕೊಳ್ಳಲಾಯಿತು.

Advertisement

ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಿ, ಮತ್ತೆ 440 ಎಕರೆ ಭೂಮಿಸ್ವಾಧೀನಪಡಿಸಿಕೊಳ್ಳುವಪ್ರಕ್ರಿಯೆಆರಂಭವಾಯಿತು. ಆದರೆ, ಭೂ ಸ್ವಾಧೀನ ಪರಿಷ್ಕರಣೆ ಗೊಂಡು ಅಂತಿಮವಾಗಿ 225 ಎಕರೆ ಸ್ವಾಧೀನ ಪ್ರಕ್ರಿಯೆ ಆರಂಭವಾಗಿ ಅಂತಿಮ ಅಧಿಸೂಚನೆಯೂ ಪ್ರಕಟವಾಯಿತು. ಆದರೆ, ಪರಿಹಾರ ನಿಗದಿಯ ವಿವಾದವುಂಟಾಗಿ ಪ್ರಕರಣ ನ್ಯಾಯಾಲಯದಲ್ಲಿದೆ. ಈಗ ಒಟ್ಟು 761 ಎಕರೆ ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ವಾಧೀನವಾಗಿದೆ.

ನಿರ್ಮಾಣಕ್ಕೆ ಒತ್ತು: ರಾಜ್ಯದಲ್ಲಿ ಜೆಡಿಎಸ್‌ – ಬಿಜೆಪಿ ಸರ್ಕಾರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ, ಎಚ್‌.ಡಿ.ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ವಿಮಾನ ನಿಲ್ದಾಣ ನಿರ್ಮಾಣವನ್ನು ಖಾಸಗಿ – ಸರ್ಕಾರಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲು ನಿರ್ಧರಿಸಿ ಜ್ಯಪಿಟರ್‌ ಏರ್‌ವೇಸ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. 2007 ಜುಲೈನಲ್ಲಿ ದೇವೇಗೌಡರು ಭೂಮಿಯನ್ನೂ ನೆರವೇರಿಸಿದ್ದರು.

ಯೋಜನೆ ಕೈಬಿಟ್ಟ ಜ್ಯೂಪಿಟರ್‌: ವಿಮಾನ ನಿಲ್ದಾಣ, ವಿಮಾನ ದುರಸ್ತಿಯ ಕಾರ್ಯಾಗಾರ ಮತ್ತು ಗಾಲ್ಫ್ ಕೋರ್ಟ್‌ ಸೇರಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಾಣದ ಯೋಜನೆಯ ಕಾಮಗಾರಿಯನ್ನು ರಾಜ್ಯ ಲೋಕೋಪಯೋಗಿ ಇಲಾಖೆ ಮತ್ತು ಜ್ಯೂಪಿಟರ್‌ ಸಂಸ್ಥೆ ಆನುಷ್ಠಾನಗೊಳಿಸಬೇಕಾಗಿತ್ತು. ಆದರೆ, ಸರ್ಕಾರ ಬದಲಾಯಿತು. ಜ್ಯೂಪಿಟರ್‌ ಸಂಸ್ಥೆಯೂ ಯೋಜನೆಯನ್ನುಕೈ ಬಿಟ್ಟಿತು. ಆನಂತರ ಜೆಡಿಎಸ್‌ – ಕಾಂಗ್ರೆಸ್‌ ಸರ್ಕಾರದಲ್ಲಿಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ, ಎಚ್‌ .ಡಿ.ರೇವಣ್ಣ ಜಿಲ್ಲಾ ಉಸ್ತುವಾರಿ ಸಚಿವರಾದಾಗ2018 -19ರಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆ ಆರಂಭವಾಗಿ ಟೆಂಡರ್‌ ಪ್ರಕ್ರಿಯೆ ಹಂತಕ್ಕೆ ಬಂದಿತ್ತು. ಆದರೆ, ಸರ್ಕಾರ ಬಿದ್ದುಹೋದ ನಂತರ ಯೋಜನೆ ನನೆಗುದಿಗೆ ಬಿದ್ದಿತು.

ವಿಮಾನ ನಿಲ್ದಾಣ ನಿರ್ಮಾಣದ ಪ್ರದೇಶದಲ್ಲಿ ಹೈಟೆನ್ಷನ್ ವಿದ್ಯುತ್‌ ಮಾರ್ಗ ಹಾದು ಹೋಗಿದೆ. ಅದನ್ನು ತೆರವುಗೊಳಿಸಿ ವಿಮಾನ ನಿಲ್ದಾಣದ ಪರಿಷ್ಕೃತ ಯೋಜನೆ ರೂಪಿಸಲು ರೈಟ್ಸ್‌ ಸಂಸ್ಥೆಗೆ ವಹಿಸಲಾಗಿತ್ತು. ವಿಮಾನ ನಿಲ್ದಾಣ ನಿರ್ಮಾಣದ ಅಡ್ಡಿ ನಿವಾರಣೆಗೆ 209 ಕೋಟಿ ರೂ. ಅಗತ್ಯ ಎಂದು ಸಂಸ್ಥೆ ವರದಿ ನೀಡಿತ್ತು. ಆ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವೇ ಎಂದು ಪರಿಶೀಲನೆ ನಡೆಯುತ್ತಿದೆ.

ಈಗ ಕರ್ನಾಟಕ ರಾಜ್ಯ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ( ಕೆಎಸ್‌ಐಡಿಸಿ)ವು ವಿಮಾನ ನಿಲ್ದಾಣ ನಿರ್ಮಾಣದ ನೋಡೆಲ್ಸ್‌ ಏಜೆನ್ಸಿಯಾಗಿದ್ದು, ಆ ಸಂಸ್ಥೆಯ ವಶದಲ್ಲಿ ವಿಮಾನ ನಿಲ್ದಾಣದ ಭೂಮಿ ಇದೆ. ಈಗ ವಿಮಾನ ನಿಲ್ದಾಣಕ್ಕೆ ಸ್ವಾಧೀನವಾದ ಭೂಮಿಯನ್ನೂ ಡೀ ನೋಟಿಫೈ ಮಾಡಿ ವಸತಿನಿವೇಶನಗಳ ನಿರ್ಮಾಣದ ಚರ್ಚೆ ಆರಂಭವಾಗಿದೆ. ಮುಂದೇನಾಗುತ್ತದೋಕಾದು ನೋಡಬೇಕು.

ನಿಲ್ದಾಣಕ್ಕೆ ಹೆಚ್ಚುವರಿ ಭೂಮಿ ಬೇಕಿಲ್ಲ :  ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ 546 ಎಕರೆ ಭೂಮಿಯನ್ನು ರೈತರಿಗೆ ಪರಿಹಾರ ನೀಡಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, 2006-07ರಲ್ಲಿ ಮತ್ತೆ ಹೆಚ್ಚುವರಿಯಾಗಿ 447 ಎಕರೆ ಜಾಗ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಭೂ ಮಾಲಿಕರಿಗೆ ಪರಿಹಾರ ನೀಡಿಲ್ಲ. ಈಗ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ ಭೂಮಿಯ ಅಗತ್ಯತೆ ಇಲ್ಲ. ರೈತರ ಆಶಯದಂತೆ ನಿಲ್ದಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಹೆಚ್ಚುವರಿ ಭೂಮಿಯನ್ನೂ ಬಡಾವಣೆ ನಿರ್ಮಾಣಕ್ಕೆ ಬಳಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದ್ದಾರೆ.

ಸ್ವಾಧೀನದ ಸಮಸ್ಯೆ ಇಲ್ಲ :  ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಹಳ ವರ್ಷಗಳ ಹಿಂದೆಯೇ 536 ಎಕರೆ ಸ್ವಾಧೀನವಾಗಿದೆ.1997ರಲ್ಲಿ ಹೆಚ್ಚುವರಿಯಾಗಿ 440 ಎಕರೆ ಸ್ವಾಧೀನದ ಪ್ರಸ್ತಾವನೆ ಸಿದ್ಧಗೊಂಡಿತ್ತು. ಅಂತಿಮವಾಗಿ 225 ಎಕರೆ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಅಧಿಸೂಚನೆಯೂ ಪ್ರಕಟವಾಗಿದೆ. ರೈತರು ಹೆಚ್ಚು ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಧಿಸೂಚನೆ ಪ್ರಕಟವಾದ ದಿನದಿಂದ ಬಡ್ಡಿ ಸಹಿತ ರೈತರಿಗೆ ನ್ಯಾಯಾಲಯದಲ್ಲಿ ನಿಗದಿಯಾದ ಪರಿಹಾರ ಕೊಡಬೇಕಾಗುತ್ತದೆ. ಆದರೆ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂ ಸ್ವಾಧೀನದ ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದ್ದಾರೆ.

ಸುಮ್ಮನೇಕೂತಿರುತ್ತೇವಾ? : ಹಾಸನ ವಿಮಾನ ನಿಲ್ದಾಣ ನಿರ್ಮಾಣವಾಗಬೇಕೆಂಬುದು ಹಾಸನ ಜಿಲ್ಲೆಯ 6 ದಶಕಗಳ ಕನಸು. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎಲ್ಲ ಸಿದ್ಧತೆಯೂ ಮುಗಿದಿದೆ. ಇಂತಹ ಸಂದರ್ಭದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ವಾಧೀನವಾಗಿರುವ ಭೂಮಿಯನ್ನು ನಿವೇಶನಕ್ಕೆ ಬಳಸಲು ಮುಂದಾದರೆ ನಾವೇನು ಸುಮ್ಮನೆ ಕೂತಿರ್ತಿವಾ?ದೇವೇಗೌಡರು ಇನ್ನೂ ಬದುಕಿದ್ದಾರೆ, ಜೆಡಿಎಸ್‌ ಕೂಡ ಪ್ರಬಲವಾಗಿದೆ. ಈ ಬಿಜೆಪಿ ಸರ್ಕಾರ ಜಿಲ್ಲೆಗೆ ಏನೇನು ಅನ್ಯಾಯ ಮಾಡಿದೆ ಎಂಬುದನ್ನು ಮುಂದೆ ಹೇಳಿತ್ತೀವಿ. ಹಾಸನಕ್ಕೆ ಏನೇನು ಕೊಡುಗೆ ಕೊಟ್ಟಿದ್ದೀವಿ ಜನರಿಗೆ ಗೊತ್ತಿದೆ. ವಿಮಾನ ನಿಲ್ದಾಣ ನಿರ್ಮಾಣ ವಾಗಬೇಕಾದರೆ ಮತ್ತೆ ನಾನೇ ಅಧಿಕಾರಕ್ಕೆ ಬರ ಬೇಕೆಂದು ಮಾಜಿ ಸಚಿವ ರೇವಣ್ಣ ಹೇಳಿದ್ದಾರೆ.

 

ಎನ್‌.ನಂಜುಂಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next