ನಾಗ್ಪುರ: ಪ್ರೊ ಕಬಡ್ಡಿಯ ನೂತನ ತಂಡವಾದ ಹರ್ಯಾಣ ಸ್ಟೀಲರ್ನ ಅದೃಷ್ಟ ಖುಲಾಯಿಸಿದೆ. ಮಂಗಳವಾರದ ಪಂದ್ಯದಲ್ಲಿ ಅದು ಗುಜರಾತ್ ಫಾರ್ಚೂನ್‌ಜೈಂಟ್ಸ್ ವಿರುದ್ಧ 32-20 ಅಂತರದ ಜಯ ಸಾಧಿಸಿತು. ಇದು ಹರ್ಯಾಣಕ್ಕೆ ಒಲಿದ ಮೊದಲ ಜಯವೆಂಬುದು ಉಲ್ಲೇಖನೀಯ.
ಅತ್ಯಂತ ರೋಚಕವಾಗಿ ನಡೆದ ಬೆಂಗಳೂರು ಬುಲ್ಸ್-ತೆಲುಗು ಟೈಟಾನ್ಸ್ ನಡುವಿನ ದಿನದ ದ್ವಿತೀಯ ಪಂದ್ಯ 21-21 ಅಂಕಗಳಿಂದ ಟೈ ಆಯಿತು. ಇದರೊಂದಿಗೆ ಎರಡೂ ತಂಡಗಳು ಸೋಲಿನ ಸರಪಳಿ ಯನ್ನು ಕಡಿದುಕೊಂಡವು. ಇದು ಈ ಪಂದ್ಯಾವಳಿಯ 2ನೇ ಟೈ ಪಂದ್ಯ.
ಹೈದರಾಬಾದ್‌ನಲ್ಲಿ ನಡೆದ ಹರ್ಯಾಣ- ಗುಜರಾತ್ ನಡುವಿನ ಮೊದಲ ಪಂದ್ಯ ಟೈ ಆಗಿತ್ತು (27-27). ಆದರೆ ಮಂಗಳವಾರದ ಮುಖಾಮುಖೀಯಲ್ಲಿ ಅಂಥ ರೋಚಕತೆ ಸೃಷ್ಟಿಯಾಗಲಿಲ್ಲ. ಬಹುತೇಕ ಏಕಪಕ್ಷೀಯ ವಾಗಿಯೇ ಸಾಗಿತು ಮತ್ತು ಹರ್ಯಾಣ ತನ್ನ ಪ್ರಾಬಲ್ಯ ತೋರ್ಪಡಿಸಿತು.
ಮೊದಲಾರ್ಧದಲ್ಲಿ ಎರಡೂ ತಂಡಗಳು ರಕ್ಷಣಾತ್ಮಕ ಆಟಕ್ಕಿಳಿದವು. ಅರ್ಧ ಅವಧಿ ಮುಗಿದಾಗ ಹರ್ಯಾಣ 13-9ರ ಮುನ್ನಡೆಯಲ್ಲಿತ್ತು. ದ್ವಿತೀಯಾರ್ಧದಲ್ಲಿ ಹರ್ಯಾಣ ಆಕ್ರಮಣಕಾರಿ ಆಟಕ್ಕಿಳಿಯಿತು. ಅಮೋಘ ರೈಡ್ಸ್ ಮತ್ತು ಟ್ಯಾಕಲ್ಸ್‌ನಲ್ಲಿ ಹರ್ಯಾಣ ಸ್ಪಷ್ಟ ಮೇಲುಗೈ ಸಾಧಿಸಿತು; ಗುಜರಾತನ್ನು ತನ್ನ ಹಿಡಿತದಲ್ಲಿರಿಸಿಕೊಂಡಿತು. ಈ ಹಿಡಿತದಿಂದ ಪಾರಾಗಲು ಗುಜರಾತ್‌ಗೆ ಸಾಧ್ಯವಾಗಲೇ ಇಲ್ಲ. ಗುಜರಾತ್ ತಂಡದ ಸುಕೇಶ್ ಹೆಗ್ಡೆ ಮೊದಲಾರ್ಧದಲ್ಲಿ ಸ್ವಲ್ಪ ವೇಳೆಯಷ್ಟೇ ಕಣದಲ್ಲಿ ಕಾಣಿಸಿಕೊಂಡರು.
ವಿಜೇತ ಹರ್ಯಾಣ ತಂಡದ ಮೋಹಿತ್ ಚಿಲ್ಲಾರ್ ಪಂದ್ಯದ ಆಟಗಾರ, ವಿಕಾಸ್ ಖಂಡೋಲ ಪರಿಪೂರ್ಣ ರೈಡರ್ ಗೌರವಕ್ಕೆ ಪಾತ್ರರಾದರು. ಮೋಹಿತ್ ಕ್ಯಾಚಿಂಗ್ ಮೂಲಕ 7 ಅಂಕ ಸಂಪಾದಿಸಿದರೆ, ಖಂಡೋಲ ರೈಡಿಂಗ್‌ನಲ್ಲಿ 6 ಅಂಕ ಕಲೆಹಾಕಿದರು.
ಕರ್ನಾಟಕ ಮೂಲದ ಸುಕೇಶ್ ಹೆಗ್ಡೆ ನಾಯಕತ್ವದ ಗುಜರಾತ್ ಪರ ಸಚಿನ್ 8, ಮಹೇಂದ್ರ ರಜಪೂತ್ 5 ಅಂಕ ಗಳಿಸಿದರಾದರೂ ತಂಡದ ಗೆಲುವಿಗೆ ಇದು ನೆರವಾಗಲಿಲ್ಲ. 35ನೇ ನಿಮಿಷದಲ್ಲಿ ಹರ್ಯಾಣ ತಂಡವನ್ನು ಆಲೌಟ್ ಮಾಡುವ ಅವಕಾಶವನ್ನು ಗುಜರಾತ್ ಕೈಚೆಲ್ಲಿತು.