Advertisement
ಸೋಲನ್ನೇ ಕಾಣದ ನಾಯಕರು ಹಾಗೂ ಹೊಸಬರ ನಡುವಿನ ಹಣಾಹಣಿ, ಮೈತ್ರಿ ವೈಫಲ್ಯ, ಜಾತಿ ರಾಜಕಾರಣದ ಪ್ರಾಬಲ್ಯ, ರೈತ ಪ್ರತಿಭಟನೆ, ಕುಸ್ತಿ ಪಟುಗಳ ರಾಜಕೀಯ ಪಟ್ಟು, ಆಡಳಿತ ವಿರೋಧಿ ಅಲೆ ಅದರ ಶಮನಕ್ಕೆ ಹೊಸಬರಿಗೆ ಮನ್ನಣೆ ಹೀಗೆ ವಿವಿಧ ವಿಚಾರಗಳಿಂದ ಹರ್ಯಾಣ ಚುನಾವಣಾ ಕಣ ರಂಗೇರಿದೆ. ಅಕ್ಟೋಬರ್ 5ರಂದು 90 ವಿಧಾನಸಭಾ ಕ್ಷೇತ್ರಗಳಲ್ಲಿನ 1,031 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಎಲ್ಲ ರಾಜ್ಯಗಳ ಚುನಾವಣೆಗಳಂತೆ ಹರ್ಯಾಣದಲ್ಲಿ ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿಯನ್ನೇ ಹೆಚ್ಚಾಗಿ ನೆಚ್ಚಿಕೊಂಡಿದೆ. ರಾಜ್ಯದ ಸಾಧನೆಗಳ ಜತೆಗೆ ಕೇಂದ್ರ ಸರ್ಕಾರದ ಸಾಧನೆಗಳನ್ನು ಹೆಚ್ಚಾಗಿ ಪ್ರಚಾರ ಮಾಡುತ್ತಿದೆ. ಇದರ ಹೊರತಾಗ್ಯೂ ಆಡಳಿತ ವಿರೋಧಿ ಅಲೆಯನ್ನು ಕಂಡುಕೊಂಡಿರುವ ಪಕ್ಷವು, ಬಹಳಷ್ಟು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ. ಟಿಕೆಟ್ ವಂಚಿತರು ಒಳೇಟು ನೀಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಒಬಿಸಿ ಮುಖ್ಯಮಂತ್ರಿಯನ್ನು ನೇಮಕ ಮಾಡಿರುವುದರಿಂದ ಹೆಚ್ಚಿನ ಮತಗಳು ಬರಬಹುದೆಂಬ ಲೆಕ್ಕಾಚಾರ ಬಿಜೆಪಿಯದ್ದು. ಕಾಂಗ್ರೆಸ್‌ಗೆ ವರದಾನ
ಹರ್ಯಾಣ ಚುನಾವಣೆ ಕಾಂಗ್ರೆಸ್ ಪಾಲಿಗೆ ವರದಾನವೂ ಹೌದು, ನಿರ್ಣಾಯಕವೂ ಹೌದು. ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಈ ಲೋಕಸಭೆ ಚುನಾವಣೆಯಲ್ಲಿ ಬರೀ 5 ಕ್ಷೇತ್ರಗಳನ್ನು ಗೆದ್ದಿದ್ದು ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಈ ಬಾರಿ ಬಿಜೆಪಿಗೆ ಟಕ್ಕರ್ ನೀಡಿ 5 ಸ್ಥಾನದಲ್ಲಿ ಗೆದ್ದಿದೆ. ಇದು ಪಕ್ಷದ ಆತ್ಮವಿಶ್ವಾಸ ಹೆಚ್ಚಿಸಿದೆ. ಅಲ್ಲದೇ, ಬಿಜೆಪಿಯ ಟಿಕೆಟ್ ಸಿಗದ ಕೆಲವರು ಕಾಂಗ್ರೆಸ್‌ಗೆ ಪûಾಂತರವಾಗಿರುವುದು ಕೂಡ ಅದರ ಬಲ ಹೆಚ್ಚಿಸಿದೆ. ಜತೆಗೆ, ಈ ಬಾರಿ ಜಾತಿ ಸಮೀಕರಣವನ್ನು ಪರಿಣಾಮಕಾರಿಯಾಗಿ ಬಳಸಿ, ಸೂಕ್ತ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ ಎಂಬುದು ರಾಜಕೀಯ ಪಂಡಿತರ ಅಂಬೋಣ.
Related Articles
ಇಂಡಿಯಾ ಒಕ್ಕೂಟದ ಯಶಸ್ಸು ಹರ್ಯಾಣದಲ್ಲೂ ಫಲ ಕೊಡ ಬಹುದೆಂದು ಆಪ್ ಜತೆಗಿನ ಮೈತ್ರಿಗೆ ಕಾಂಗ್ರೆಸ್ ಮುಂದಾಗಿತ್ತು. ಆದರಿದು ವಿಫಲವಾದ ಪರಿಣಾಮ ಈಗ ಆಪ್ ಕೂಡ ಏಕಾಂಗಿಯಾಗಿ ಹೋರಾಟಕ್ಕಿಳಿದಿದೆ. ಇತ್ತ ಬಿಜೆಪಿ ಕಳೆದ ಬಾರಿ ಸರ್ಕಾರ ರಚಿಸಲು ನೆರವಾಗಿದ್ದ ದುಶ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿ ಈ ಬಾರಿ ಅಜಾದ್ ಸಮಾಜ ಪಾರ್ಟಿ ಜತೆಗೆ ಮೈತಿ ಘೋಷಿಸಿದೆ. ಇನ್ನು ಆಪ್‌ನ ಏಕಾಂಗಿ ಹೋರಾಟವು ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುವುದಷ್ಟೇ ಅಲ್ಲ, ಕಾಂಗ್ರೆಸ್ ಮತಗಳನ್ನೂ ವಿಭಜಿಸಲಿದ್ದು ಯಾವುದೇ ಪಕ್ಷ ಬಹುಮತ ಪಡೆಯುವುದು ಕಷ್ಟ ಸಾಧ್ಯವಾಗಬಹುದು..
Advertisement
ಈ ಬಾರಿ ಘಟಾನುಘಟಿಗಳು ಕಣಕ್ಕೆ5 ದಶಕದಿಂದ ಸೋಲನ್ನೇ ಕಾಣದ 2 ಬಾರಿ ಮಾಜಿ ಸಿಎಂ ಆಗಿರುವ ಜಾಟ್ ನಾಯಕ ಭೂಪಿಂದರ್ ಸಿಂಗಾ ಹೂಡಾ ಅವರನ್ನು ಕಾಂಗ್ರೆಸ್ ಗಹಿì ಸಂಪ್ಲಾದಿಂದ ಕಣಕ್ಕಿಳಿಸಿದೆ. ಅಂಬಾಲಾ ದಂಡು ಪ್ರದೇಶದಲ್ಲಿ ಸೈನಿ ಸರ್ಕಾರದ ಪ್ರಭಾವಿ ಸಚಿವ, 6 ಬಾರಿ ಶಾಸಕರಾದ ಅನಿಲ್ ವಿಜ್ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ. ಲಾಡ್ವಾ ಕ್ಷೇತ್ರ ದಿಂದ ಸಿಎಂ ಸೈನಿ ಕಣಕ್ಕಿಳಿದಿದ್ದಾರೆ. ಹಿಸ್ಸಾರ್‌ನಿಂದ ಭಾರತದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್ ಸ್ವತಂತ್ರ ಅಭ್ಯರ್ಥಿ ಯಾಗಿ ದ್ದಾರೆ. ಜೂಲಾನಾದಿಂದ ಕಾಂಗ್ರೆಸ್ ವಿನೇಶ್ ಫೋಗಾಟ್‌ರನ್ನು ಕಣಕ್ಕಿಳಿಸಿದರೆ, ಬಿಜೆಪಿ ಕ್ಯಾಪ್ಟನ್ ಯೋಗೇಶ್ ಭೈರಾಗಿಗೆ ಟಿಕೆಟ್ ನೀಡಿದೆ. ಇತ್ತ ಆಪ್ ಕುಸ್ತಿಪಟು ಕವಿತಾ ದೇವಿ ಅವರನ್ನು ಅದೇ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕಾಂಗ್ರೆಸ್‌ನ ಹಿರಿಯ ನಾಯಕರ ಮಕ್ಕಳಿಗೂ ಮಣೆ ಹಾಕಲಾಗಿದೆ. ಬಿಜೆಪಿ ಕೂಡ ಹೊರತಾಗಿಲ್ಲ. ಆಮ್ ಆದ್ಮಿ ಪಾರ್ಟಿ ಕತೆ ಏನು?
ಇನ್ನು ಆಮ್ ಆದ್ಮಿ ಪಕ್ಷವು ಕಳೆದ ಬಾರಿ ವಿಧಾನಸಭೆ ಚುನಾ ವಣೆ ಯಲ್ಲಿ ನೋಟಾಗಿಂತ ಕಡಿಮೆ ಮತ ಗಳಿಸಿತ್ತು. ಆದರೆ, 2024ರ ಲೋಕಸಭೆ ಚುನಾವಣೆ ಆಪ್‌ಗೆ ಹೊಸ ಭರವಸೆ ನೀಡಿದೆ. ಕಳೆದ ಬಾರಿ 1 ಪರ್ಸೆಂಟ್ ವೋಟ್ ಪಡೆದಿದ್ದ ಆಪ್ ಈ ಬಾರಿ ಲೋಕ ಸಭೆಯಲ್ಲಿ 3.5 ಪರ್ಸೆಂಟ್ ಮತ ಹಂಚಿಕೆ ಪಡೆದಿದೆ. ಈ ಹಿನ್ನೆಲೆ ಯಲ್ಲಿ ಏಕಾಂಗಿ ಸ್ಪರ್ಧೆಗೆ ಅಣಿ ಇಟ್ಟಿದೆ. ದಿಲ್ಲಿ ಮಾಜಿ ಸಿಎಂ, ಆಪ್ ಮುಖ್ಯಸ್ಥ ಕೇಜ್ರಿವಾಲ್ ಕೂಡ ರಾಜ್ಯದಲ್ಲಿ ಭರ್ಜರಿ ಪ್ರಚಾರ ಮಾಡಿದ್ದು, ನಾನು ಹರ್ಯಾಣದ ಮಗ ಎನ್ನುತ್ತಿದ್ದಾರೆ. ಆಪ್ ಪ್ರಚಾರವು ಹರ್ಯಾಣ ಪಂಜಾಬ್ ಗಡಿಯಲ್ಲಿರುವ ಕುರುಕ್ಷೇತ್ರ, ಪಂಚಕುಲ ಸೇರಿದಂತೆ 9 ಜಿಲ್ಲೆಗಳ ಸಿಖ್ ಸಮುದಾಯಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಹರ್ಯಾಣದಲ್ಲಿ ಜಾತಿ ಲೆಕ್ಕಾಚಾರವೇ ಗೆಲುವಿನ ಗುಟ್ಟು!
ಹರ್ಯಾಣದಲ್ಲಿ ಜಾಟ್, ಒಬಿಸಿ ಜನಸಂಖ್ಯಾ ಬಲವು ರಾಜಕೀಯದಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ರಾಜ್ಯದ ಒಟ್ಟು ಜನಸಂಖ್ಯೆ ಪೈಕಿ ಶೇ.22ರಷ್ಟು ಜಾಟ್ ಹಾಗೂ ಶೇ.35ರಷ್ಟು ಒಬಿಸಿ ಸಮುದಾಯವಿದೆ. ಮಧ್ಯ ಹರ್ಯಾಣದಲ್ಲಿ ಜಾಟ್ ಸಮುದಾಯದ ಪ್ರಾಬಲ್ಯ ಹೆಚ್ಚಿದ್ದು, ಕಾಂಗ್ರೆಸ್ ಪಕ್ಷದ ಮತಬುಟ್ಟಿಗೆ ಈ ಸಮುದಾಯವೇ ಬಲ. ಅದೇ ಕಾರಣಕ್ಕಾಗಿ ಕಾಂಗ್ರೆಸ್, ಜಾಟ್ ಸಮುದಾಯದ ಹಾಲಿ 24 ಶಾಸಕರಿಗೆ ಮತ್ತೆ ಟಿಕೆಟ್ ನೀಡಿದೆ. ಬಿಜೆಪಿ ಕೂಡ ಜಾಟ್ ಸಮುದಾಯಕ್ಕೆ 16 ಮಂದಿಗೆ ಟಿಕೆಟ್ ನೀಡಿದೆ. ಜತೆಗೆ ಒಬಿಸಿ, ಪಂಜಾಬಿ, ಬ್ರಾಹ್ಮಣರ ಮತ ಸೆಳೆಯಲು ಬಿಜೆಪಿ ಗಾಳ ಹಾಕಿದೆ. ಇನ್ನು ದಲಿತ ಮತ ಬಲವೂ ಬಿಜೆಪಿಗೆ ಕಡಿಮೆಯಾಗಿದೆ. ರಾಜ್ಯದಲ್ಲಿರುವ 17 ಮೀಸಲು ಕ್ಷೇತ್ರಗಳ ಪೈಕಿ 2014ರಲ್ಲಿ ಬಿಜೆಪಿ 9 ಕಾಂಗ್ರೆಸ್ 4 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು, ಆದರೆ, 2019ರಲ್ಲಿ ಬಿಜೆಪಿ 5 ಮತ್ತು ಕಾಂಗ್ರೆಸ್ 7 ಕ್ಷೇತ್ರಗಳನ್ನು ತಮ್ಮದಾಗಿಸಿಕೊಂಡಿವೆ. ಇಂದು ಮತದಾನ: 1031 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ
ಚಂಡೀಗಢ: ಹರ್ಯಾಣ ವಿಧಾನಸಭೆಯ 90 ಕ್ಷೇತ್ರಗಳಿಗೆ ಶನಿವಾರ ಮತದಾನ ನಡೆಯಲಿದ್ದು, 1031 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಕಳೆದ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಈ ಬಾರಿ ಅಭ್ಯರ್ಥಿಗಳ ಸಂಖ್ಯೆ ಕುಸಿತ ಕಂಡಿದ್ದು, 930 ಮಂದಿ ಪುರುಷ ಅಭ್ಯರ್ಥಿಗಳು ಹಾಗೂ 101 ಮಂದಿ ಮಹಿಳಾ ಅಭ್ಯರ್ಥಿಗಳು ಸೇರಿ 1031 ಮಂದಿ ಕಣದಲ್ಲಿದ್ದಾರೆ. ಕಳೆದ ಬಾರಿ 1169 ಮಂದಿ ಕಣದಲ್ಲಿದ್ದರು. ಈ ಬಾರಿ ಬರೋಬ್ಬರಿ 464 ಮಂದಿ ಪಕ್ಷೇತರರಿದ್ದಾರೆ. ಮುಂಜಾನೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಅಕ್ಟೋಬರ್ 8ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಚುನಾವಣಾ ವಿಷಯಗಳು
1 ಹರ್ಯಾಣದಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲಕ್ಕೆ ಆಗ್ರಹಿಸಿ ರೈತರ ನಡೆಸುತ್ತಿರುವ ಪ್ರತಿಭಟನೆ ಹೆಚ್ಚು ಸದ್ದು ಮಾಡುತ್ತಿದೆ. ಹಾಗಾಗಿ ಪ್ರತಿಪಕ್ಷಗಳು ಇದೇ ವಿಷಯವನ್ನು ಹೆಚ್ಚಾಗಿ ಪ್ರಚಾರ ಮಾಡುತ್ತಿವೆ
2 ಇಡೀ ದೇಶದಲ್ಲಿ ಹರ್ಯಾಣದಲ್ಲೇ ನಿರುದ್ಯೋಗ ಪ್ರಮಾಣ ಹೆಚ್ಚು. ಸಹಜವಾಗಿಯೇ ಬಹುತೇಕ ಪಕ್ಷಗಳು ಈ ವಿಷಯವನ್ನು ನೆಚ್ಚಿಕೊಂಡಿವೆ.
3 ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ವಿರುದ್ಧ ವಿನೇಶ್ ಸೇರಿ ಕುಸ್ತಿಪಟುಗಳ ಪ್ರತಿಭಟನೆ, ಖೇಲೋ ಇಂಡಿಯಾ ಬಜೆಟಲ್ಲೂ ರಾಜ್ಯವನ್ನು ಕಡೆಗಣಿಸಿರುವ ಆಕ್ರೋಶವಿದೆ.
4 ಅಗ್ನಿಪಥ ಸೇನಾ ನೇಮಕ ಯೋಜನೆಯ ಬಗ್ಗೆಯೂ ಸಾಕಷ್ಟು ಅಸಮಾಧಾನವಿದೆ. ಈ ವಿಷಯವನ್ನೇ ಪ್ರತಿಪಕ್ಷಗಳು ಹೆಚ್ಚಾಗಿ ಪ್ರಸ್ತಾಪಿಸುತ್ತಿವೆ.
5 ಬೆಲೆ ಹೆಚ್ಚಳವೂ ಸೇರಿದಂತೆ ಸಾಕಷ್ಟು ಸ್ಥಳೀಯ ಸಮಸ್ಯೆಗಳೂ ಕೂಡ ಚುನಾವಣಾ ಚರ್ಚೆಯ ಅಖಾಡವನ್ನು ರಂಗೇರಿಸಿವೆ. ಪ್ರತಿಪಕ್ಷ ತನ್ನ ಸಾಧನೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡುತ್ತಿದೆ. – ಅಶ್ವಿನಿ ಸಿ. ಆರಾಧ್ಯ