ಚಂಡೀಗಢ: ಹರ್ಯಾಣದ ಮೇವತ್ ಪ್ರದೇಶದ ನಂದ್‌ಗ್ರಾಮ್‌ನಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್ ವತಿಯಿಂದ ಆಯೋಜಿಸಲಾಗಿದ್ದ ಮೆರವಣಿಗೆ ಮೇಲೆ ಕಲ್ಲುತೂರಾಟ ನಡೆದಿದ್ದು, ಗಲಭೆ ತೀವ್ರ ಸ್ವರೂಪ ಪಡೆದು ಹಿಂಸಾಚಾರಕ್ಕೆ ತಿರುಗಿದೆ. ಕಿಡಿಗೇಡಿಗಳು ಹಲವಾರು ವಾಹನಗಳಿಗೆ ಬೆಂಕಿ ಹಚ್ಚಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪಡೆಯಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.
ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಗುರುಗ್ರಾಮದಿಂದ ಶೋಭಾಯಾತ್ರೆಯನ್ನು ಆರಂಭಿಸಿದ್ದರು. ಮೆರವಣಿಗೆ ನಂದ್‌ಗ್ರಾಮ ಸಮೀಪಿಸುತ್ತಿದ್ದಂತೆ ಅನ್ಯಕೋಮಿನ ಕೆಲವರು ಯಾತ್ರೆಯನ್ನು ತಡೆದು ಕಲ್ಲ ತೂರಾಟ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಸಂಘರ್ಷ ಏರ್ಪಟ್ಟಿದೆ.
ಭಿವಾನಿ ಹತ್ಯೆ ಪ್ರಕರಣದ ಆರೋಪಿ ಮೋನು ಮನೇಸರ್ ಎಂಬಾತ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿಯೇ ಸಮುದಾಯ ಆಕ್ರೋಶ ವ್ಯಕ್ತಪಡಿಸಿ, ಕಲ್ಲುತೂರಾಟಕ್ಕೆ ಮುಂದಾಗಿದೆ ಎನ್ನಲಾಗಿದ್ದು, ಮತ್ತೊಂದೆಡೆ ಭಜರಂಗದಳದ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ವಿಡಿಯೊ ಪೋಸ್ಟ್ ಮಾಡಿದ್ದಕ್ಕೆ ಸಂಬಂಧಿಸಿದಂತೆ ಗಲಭೆ ನಡೆದಿದೆ ಎಂದೂ ಹೇಳಲಾಗುತ್ತಿದೆ.
ಅಂತರ್ಜಾಲ ಸ್ಥಗಿತ: ಗಲಭೆಯ ವಿಡಿಯೊ ಜಾಲತಾಣಗಳಲ್ಲೂ ವೈರಲ್ ಆಗುತ್ತಿದ್ದು, ಸಂಘರ್ಷ ಮತ್ತಷ್ಟು ವಿಕೋಪಕ್ಕೆ ಹೋಗುವುದನ್ನು ತಡೆಯಲು ಆಗಸ್ಟ್ 2ರವರೆಗೆ ಹರ್ಯಾಣದ ನಹ್ ಜಿಲ್ಲೆಯಲ್ಲಿ ಅಂಜರ್ತಾಲ ಸೇವೆ ಸ್ಥಗಿತಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಅನುಮತಿ ಪಡೆದು ವಿಎಚ್‌ಪಿ ಆರಂಭಿಸಿದ್ದ ಯಾತ್ರೆ ಮೇಲೆ ನಂದ್‌ಗ್ರಾಮದಲ್ಲಿ ಕಲ್ಲುತೂರಾಟ ನೆಡದು, ಸಂಘರ್ಷ ಏರ್ಪಟ್ಟಿದೆ. ಪರಿಸ್ಥಿತಿಯನ್ನು ಸುಧಾರಿಸಲು ಬೇರೆ ಜಿಲ್ಲೆಗಳ ಭದ್ರತಾ ಸಿಬ್ಬಂದಿಯನ್ನೂ ಮೇವತ್‌ನಲ್ಲಿ ನಿಯೋಜಿಸಲಾಗಿದೆ. ಜನರು ಶಾಂತಿ ಕಾಯ್ದುಕೊಂಡು, ಯಾವುದೇ ಅನಾಹುತಕ್ಕೆ ದಾರಿಯಾಗದಂತೆ ಸಹಕರಿಸಬೇಕು
– ಅನಿಲ್ ವಿಜ್, ಹರ್ಯಾಣ ಗೃಹ ಸಚಿವ