ಹೊಸದಿಲ್ಲಿ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್‌ನ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್‌ಗಾಗಿ ಇದೀಗ ಹರ್ಯಾಣ ಪೊಲೀಸರು ಬಲೆ ಬೀಸಿದ್ದಾರೆ. ಹನಿಪ್ರೀತ್ ಹಾಗೂ ಡೇರಾದ ಮತ್ತೂಬ್ಬ ಪ್ರಮುಖ ಆದಿತ್ಯ ಇನ್ಸಾನ್ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದು, ಎಲ್ಲ ವಿಮಾನ ನಿಲ್ದಾಣಗಳಿಗೆ ಅಲರ್ಟ್ ಕಳುಹಿಸಲಾಗಿದೆ ಎಂದು ಪಂಚಕುಲ ಪೊಲೀಸ್ ಆಯುಕ್ತ ಎ.ಎಸ್. ಚಾವ್ಲಾ ತಿಳಿಸಿದ್ದಾರೆ.
ಆ.25ರಂದು ಗುರ್ಮೀತ್ ವಿರುದ್ಧ ತೀರ್ಪು ಬಂದ ಕೂಡಲೇ ಆತನನ್ನು ಅಲ್ಲಿಂದ ಪರಾರಿಯಾಗಿಸಲು ಹನಿಪ್ರೀತ್ ಮತ್ತು ಆದಿತ್ಯ ಸಂಚು ರೂಪಿಸಿದ್ದರು. ಹೀಗಾಗಿ ಅವರಿಬ್ಬರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ದೇಶಾದ್ಯಂತದ ಏರ್‌ಪೋರ್ಟ್‌ಗಳು, ಬಸ್ ಹಾಗೂ ರೈಲು ನಿಲ್ದಾಣಗಳಿಗೆ ಈ ಕುರಿತು ಸೂಚನೆ ರವಾನಿಸಲಾಗಿದೆ.
ಗುರ್ಮೀತ್‌ನನ್ನು ಪರಾರಿ ಮಾಡಲು ಸಂಚು ರೂಪಿಸಿದ, ಹಿಂಸೆಗೆ ಪ್ರಚೋದಿಸಿದ ಆರೋಪ ಹನಿಪ್ರೀತ್ ಮೇಲಿದೆ. ತೀರ್ಪು ಗುರ್ಮೀತ್ ವಿರುದ್ಧ ಬಂದರೆ, ಆತನನ್ನು ಅಲ್ಲಿಂದ ಪರಾರಿಯಾಗಿಸಲು ಹನಿ ಮತ್ತು ಆದಿತ್ಯ ಪ್ಲಾನ್ ಮಾಡಿದ್ದರು. ಇದಕ್ಕೆ ಗುರ್ಮೀತ್‌ನ ಭದ್ರತಾ ಸಿಬ್ಬಂದಿಯ ನೆರವನ್ನೂ ಪಡೆದಿದ್ದರು. ತೀರ್ಪು ಹೊರಬಿದ್ದ ಕೂಡಲೇ ಗುರ್ಮೀತ್ ತನ್ನ ಬಟ್ಟೆಬರೆಯಿದ್ದ “ಕೆಂಪು ಬಣ್ಣದ’ ಬ್ಯಾಗ್ ನೀಡುವಂತೆ ಪೊಲೀಸರಿಗೆ ಕೋರಿದ್ದ. ಕೆಂಪು ಬ್ಯಾಗ್ ಕೈಗೆತ್ತಿಕೊಳ್ಳುವುದು, “ಬೆಂಬಲಿಗರಿಗೆ ಹಿಂಸಾಚಾರ ಆರಂಭಿಸಿ’ ಎಂದು ಕರೆ ನೀಡುವ ಕೋಡ್‌ವರ್ಡ್ ಆಗಿತ್ತು. ಅಲ್ಲದೆ, ಹನಿಪ್ರೀತ್ ಕೋರ್ಟ್ ಆವರಣದಲ್ಲಿ ಅತ್ತಿತ್ತ ಸಂಚರಿಸುತ್ತಾ ಕಾಲಹರಣ ಮಾಡುತ್ತಿದ್ದಳು. ಗುರ್ಮೀತ್ ಬೆಂಬಲಿಗರು ಕೋರ್ಟ್‌ಗೆ ಮುತ್ತಿಗೆ ಹಾಕುವುದಕ್ಕಾಗಿ ಆಕೆ ಕಾಯುತ್ತಿ ದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.