ನವದೆಹಲಿ : ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನದ ಬೇಟೆಯಾಡಿರುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯವ್ಯಕ್ತಿಗಳು ಚಿನ್ನದ ಹುಡುಗ ಚೋಪ್ರಾ ಅವರನ್ನು ಅಭಿನಂದಿಸಿದ್ದಾರೆ.
ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಅವರು ಸಂತೋಷವನ್ನು ಹಿಡಿದಿಟ್ಟುಕೊಳ್ಳಲಾರದೆ ಕುಣಿದು ಕುಪ್ಪಳಿಸಿದ್ದಾರೆ. ಚೋಪ್ರಾ ಅವರ ಚಿನ್ನದ ಸಾಧನೆಯ ಕ್ಷಣಗಳನ್ನು ಟಿವಿಯಲ್ಲಿ ವೀಕ್ಷಿಸಿದ ಸಚಿವರು ಸ್ನೇಹಿತರೊಂದು ಖುಷಿಯಲ್ಲಿ ಸ್ಟೆಪ್ ಹಾಕಿದ್ದಾರೆ.
ಪುರುಷರ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಬಂಗಾರದ ಪದಕ ಗೆದ್ದು ಕೊಂಡಿದ್ದಾರೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಆರಂಭದಿಂದಲೇ ಉತ್ತಮ ಪ್ರದರ್ಶನ ತೋರಿದರು. ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಎಸೆದ ನೀರಜ್, ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಜಾವೆಲಿನ್ ಎಸೆದರು. ಆದರೆ ಮೂರನೇ ಪ್ರಯತ್ನದಲ್ಲಿ ನೀರಜ್ 76.79 ಮೀಟರ್ ಎಸೆದರು.
ನಾಲ್ಕನೇ ಸುತ್ತಿನಲ್ಲಿ ಫೌಲ್ ಆಯಿತು. ಐದನೇ ಸುತ್ತು ಕೂಡಾ ಫೌಲ್ ಆಯಿತು. ಅಂತಿಮ ಸುತ್ತಿನವರೆಗೂ ಗರಿಷ್ಠ ದೂರ ಕಾಪಾಡಿದ ನೀರಜ್ ಚೋಪ್ರಾ ಜಯಶಾಲಿಯಾದರು.