Advertisement

Haryana Election Result: ಹರ್ಯಾಣ ಹ್ಯಾಟ್ರಿಕ್‌ ಗೆಲುವು: ರಾಜ್ಯ ಬಿಜೆಪಿ ಸಂಭ್ರಮ

03:57 AM Oct 09, 2024 | Team Udayavani |

ಬೆಂಗಳೂರು: ಹರಿಯಾಣ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣಾ ಫ‌ಲಿತಾಂಶ ಪ್ರಕಟವಾಗು ತ್ತಿದ್ದಂತೆ ಬಿಜೆಪಿಯಲ್ಲಿ ಸಂತಸ ಮನೆ ಮಾಡಿದ್ದು, ಬೆಂಗ ಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಂಗಳವಾರದಂದು ಪಕ್ಷದ ನಾಯಕರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

Advertisement

ಒಳಮೀಸಲಾತಿ ಕುರಿತ ಸಭೆ, ಪಕ್ಷದ ಚಟು ವಟಿಕೆಯ ಸಲುವಾಗಿ ಬೆಳಗ್ಗೆಯಿಂದಲೇ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್‌.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಸಂಸದ ಬಸವರಾಜ ಬೊಮ್ಮಾಯಿ ಸೇರಿ ಅನೇಕರು ನಾಯಕರು ಕಚೇರಿಯತ್ತ ಆಗಮಿಸಿದರು. ಇತ್ತ 2 ರಾಜ್ಯಗಳ ಚುನಾವಣಾ ಮತ ಎಣಿಕೆಯೂ ನಡೆಯುತ್ತಿದ್ದರಿಂದ ಫ‌ಲಿತಾಂಶದತ್ತಲೇ ಎಲ್ಲರ ಚಿತ್ತ ನೆಟ್ಟಿತ್ತು. ಮತ ಎಣಿಕೆ ಆರಂಭವಾದಾಗಿನಿಂದಲೂ ಕ್ಷಣ ಕ್ಷಣಕ್ಕೂ ಫ‌ಲಿತಾಂಶದಲ್ಲಿ ಏರುಪೇರಾಗುತ್ತಿದ್ದರಿಂದ ಕುತೂಹಲವೂ ಹೆಚ್ಚಾಗಿತ್ತು.

ಕೊನೆಗೂ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿದ್ದು, ಹರಿಯಾಣದಲ್ಲಿ ಸತತವಾಗಿ 3ನೇ ಬಾರಿಗೆ ಬಿಜೆಪಿ ಸರ್ಕಾರ ರಚಿಸಲಿದೆ ಎಂಬುದು ಗೊತ್ತಾಗುತ್ತಿದ್ದಂತೆ ಪಕ್ಷದ ಕಚೇರಿಯಲ್ಲಿ ಸಡಗರ ಮನೆ ಮಾಡಿತ್ತು. ಅದೇ ವೇಳೆಗೇ ಸಭೆ ಸೇರಿದ್ದ ನಾಯಕರೂ ಹೊರಬಂದು ಸಂಭ್ರಮದಲ್ಲಿ ಭಾಗಿಯಾದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸವನ್ನೂ ಹಂಚಿಕೊಳ್ಳಲಾಯಿತು. ವಿಜಯೇಂದ್ರ ಆರ್‌.ಅಶೋಕ್‌ ಸೇರಿದಂತೆ ಹಲವು ನಾಯಕರು ಪರಸ್ಪರ ಲಡ್ಡು ತಿನ್ನಿಸುವ ಮೂಲಕ ಕಾರ್ಯಕರ್ತರ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಘಟಬಂಧನ್‌ಗೆ ಜಯ:
ಹರಿಯಾಣ ರಾಜ್ಯದಲ್ಲಿ ಸತತ 3ನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯಲಿದ್ದು, ಜಮ್ಮು-ಕಾಶ್ಮೀರದಲ್ಲೂ ಉತ್ತಮ ಸಾಧನೆಯಾಗಿದೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರ ಚುನಾವಣೆ ಮೇಲೂ ಇದು ಸತ್ಪರಿಣಾಮ ಬೀರಲಿದೆ. ಬಿಜೆಪಿಯ ಮಹಾಘಟಬಂಧನ್‌ಗೆ ಜಯ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ಲೇಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹರಿಯಾಣದಲ್ಲಿ ಬಿಜೆಪಿ ಧೂಳೀಪಟ ಆಗುವುದಾಗಿ ವಿಪಕ್ಷಗಳು ಬೊಬ್ಬೆ ಹೊಡೆಯುತ್ತಿದ್ದವು. ಅಧಿಕಾರ ಗಳಿಸುವ ಭ್ರಮೆಯಲ್ಲಿ ಕಾಂಗ್ರೆಸ್‌ ಇತ್ತು. ಅವರ ಎಲ್ಲ ಪಿತೂರಿಗಳ ನಡುವೆಯೂ ಅದಕ್ಕೆ ವಿರುದ್ಧವಾಗಿ ಬಿಜೆಪಿ ಮತ್ತೆ ಜಯಭೇರಿ ಬಾರಿಸಿದೆ ಎಂದರು.
ಕಾಂಗ್ರೆಸ್‌ ಏನೇ ತಿಪ್ಪರಲಾಗ ಹಾಕಿದರೂ ಪ್ರಧಾನಿ ನರೇಂದ್ರ ಮೋದಿ ಅವರ “ಅಭಿವೃದ್ಧಿಯ ಗ್ಯಾರಂಟಿ’ ಮುಂದೆ ಕಾಂಗ್ರೆಸ್‌ನ “ಗ್ಯಾರಂಟಿ’ ಯಾವುದೇ ಕೆಲಸ ಮಾಡಿಲ್ಲ. ಇನ್ನು ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ, ಕಾನೂನು ಸುವ್ಯವಸ್ಥೆ ಹತೋಟಿಗೆ ಬಂದ ಬಳಿಕ ಚುನಾವಣೆ ನಡೆದಿದೆ. ಅಭಿವೃದ್ಧಿ ಕೆಲಸಗಳೂ ಆಗುತ್ತಿದ್ದು, ಬಿಜೆಪಿ ಉತ್ತಮವಾಗಿ ಪ್ರದರ್ಶನ ನೀಡುತ್ತಿದೆ ವಿಜಯೇಂದ್ರ ಹೇಳಿದರು.

Advertisement

ಎಲ್ಲ ಸಮೀಕ್ಷೆಗಳೂ ಕಾಂಗ್ರೆಸ್‌ಗೆ ಬಹುಮತ ನೀಡಿದ್ದವು. ಕಾಂಗ್ರೆಸ್‌ ಕೂಡ ಬಿಜೆಪಿ ಧೂಳೀಪಟವಾಗುತ್ತದೆ ಎಂದಿತ್ತು. ಆದರೆ, ಹರಿಯಾಣದಲ್ಲಿ ಎಲ್ಲ ಸಮೀಕ್ಷೆಗಳನ್ನೂ ಚುನಾವಣಾ ಫ‌ಲಿತಾಂಶ ಸುಳ್ಳಾಗಿಸಿದೆ. ಕಾಂಗ್ರೆಸ್‌ ಧೂಳೀಪಟವಾಗಿದೆ. ಜಮ್ಮು-ಕಾಶ್ಮೀರ ದಲ್ಲೂ ಕಾಂಗ್ರೆಸ್‌ ಹೇಳಿಕೊಳ್ಳುವ ಸಾಧನೆಯ ನ್ನೇನೂ ಮಾಡಿಲ್ಲ. ಬಿಜೆಪಿ ಯಶಸ್ವಿಯಾಗಿದೆ.
– ಆರ್‌.ಅಶೋಕ್‌, ವಿಧಾನಸಭೆ ವಿರೋಧ ಪಕ್ಷದ ನಾಯಕ

ಫ‌ಲಿತಾಂಶ ಏನೇ ಬಂದರೂ ಚುನಾವಣಾ ಆಯೋಗವನ್ನು ದೂರುವುದು, ಇವಿಎಂ ಮೇಲೆ ದೋಷಾರೋಪ ಮಾಡುವುದು, ಜನರೇ ಸರಿಯಿಲ್ಲ ಎಂದು ಮತದಾರರನ್ನು ನಿಂದಿಸುವುದು ಕಾಂಗ್ರೆಸ್‌ಗೆ ಅಭ್ಯಾಸ ಆಗಿಬಿಟ್ಟಿದೆ. ಎಂತಹ ಫ‌ಲಿತಾಂಶ ಬಂದರೂ ಬಿಜೆಪಿ ಎಂದಿಗೂ ಆ ರೀತಿ ಮಾತನಾಡಿಲ್ಲ. ಇದು ಪ್ರಜಾಪ್ರಭುತ್ವಕ್ಕೆ ಸಿಕ್ಕಿರುವ ಜಯ. ಇದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.
– ಸಿ.ಟಿ. ರವಿ, ವಿಧಾನ ಪರಿಷತ್‌ ಸದಸ್ಯ

ಹರಿಯಾಣದಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆದಿರುವುದು ಇಡೀ ದೇಶದ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ದಿಕ್ಸೂಚಿಯಾಗಿದೆ. ಕಾಂಗ್ರೆಸ್‌ನ ಜಾತಿ ರಾಜಕಾರಣವನ್ನು ಹರಿಯಾಣ ಜನರು ತಿರಸ್ಕಾರ ಮಾಡಿದ್ದಾರೆ. ಜಮ್ಮು ಕಾಶ್ಮೀರ ಸಾಮಾಜಿಕವಾಗಿ ಸೂಕ್ಷ್ಮ ರಾಜ್ಯ. ಅಲ್ಲಿಯೂ ಕಣಿವೆ ಹೊರಗೆ ನಮಗೆ ಬೆಂಬಲ ಸಿಕ್ಕಿದೆ. ಇನ್ನೂ ರಾಜಕಾರಣ ಇದೆ. ಇದೇ ಅಂತಿಮ ಅಲ್ಲ
– ಬಸವರಾಜ ಬೊಮ್ಮಾಯಿ, ಸಂಸದ

ಹರಿಯಾಣದಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಎಲ್ಲ ಸಮೀಕ್ಷೆ ಮೀರಿ ಬಿಜೆಪಿ ಗೆದ್ದಿದೆ. ಅಲ್ಲಿನ ಜನರು ಪ್ರಧಾನಿ ಮೋದಿ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಎನ್‌ಸಿ ಜತೆ ಹೋದರೂ ಕಾಂಗ್ರೆಸ್‌ ಗೆದ್ದಿರುವುದು ಕೆಲವೇ ಸ್ಥಾನ. ಅಷ್ಟರಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್‌ ಗೆದ್ದಂತೆ ಬೀಗಿದ್ದರು. ಮಹಾರಾಷ್ಟ್ರದಲ್ಲೂ ಬಿಜೆಪಿ ಸ್ವಂತಬಲದ ಮೇಲೆ ಚುನಾವಣೆ ಎದುರಿಸಲಿದೆ.
– ಜನಾರ್ದನ ರೆಡ್ಡಿ, ಗಂಗಾವತಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next