Advertisement

Haryana Election Result: ಹರಿಯಾಣದಲ್ಲಿ ಅಭಿವೃದ್ಧಿ ಗ್ಯಾರಂಟಿ ಗೆದ್ದಿದೆ: ಪ್ರಧಾನಿ ಮೋದಿ

04:07 AM Oct 09, 2024 | Team Udayavani |

ಹೊಸದಿಲ್ಲಿ: ನವರಾತ್ರಿಯ 6ನೇ ದಿನ ದೇವಿ ಕಾತ್ಯಾಯಿನಿಯ ಕೈಯಲ್ಲಿರುವ ಕಮಲ ಅರಳಿದೆ! ಹರ್ಯಾಣದ ಗೆಲುವಿನ ರೂಪದಲ್ಲಿ ದೇವಿಯ ಆಶೀರ್ವಾದ ದೊರೆತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹರ್ಷವ್ಯಕ್ತಪಡಿಸಿದ್ದಾರೆ.

Advertisement

ಸತತ ಮೂರನೇ ಬಾರಿಗೆ ರಾಜ್ಯದಲ್ಲಿ ಸರಕಾರ ಸ್ಥಾಪಿಸಲು ನೆರವಾಗಿದ್ದಕ್ಕಾಗಿ ರಾಜ್ಯದ ಜನತೆಗೆ ಧನ್ಯವಾದ ಅರ್ಪಿಸಿರುವ ಮೋದಿ, ಜಮ್ಮು ಕಾಶ್ಮೀರದಲ್ಲೂ ಬಿಜೆಪಿ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಬಹುನಿರೀಕ್ಷಿತ ಹರ್ಯಾಣ ಫಲಿತಾಂಶ ಹೊರಬೀಳುತ್ತಿದ್ದಂತೆ ದಿಲ್ಲಿಯ ಬಿಜೆಪಿ ಕೇಂದ್ರ ಕಚೇರಿ ಬಳಿ ಜನರನ್ನುದ್ದೇಶಿಸಿ ಪ್ರಧಾನಿ ವಿಜಯದ ಭಾಷಣ ಮಾಡಿದ್ದಾರೆ.

ಹರ್ಯಾಣದಲ್ಲಿ ಅಭಿವೃದ್ಧಿಯ ಗ್ಯಾರಂಟಿಗಳು ಸುಳ್ಳಿನ ಕಂತೆಯನ್ನು ನೆಲಕಚ್ಚಿಸಿವೆ. ಇದು ಪ್ರಜಾಪ್ರಭುತಕ್ಕೆ ಸಂದ ಜಯ. ಹರ್ಯಾಣ ರಚನೆಯಾದಾಗಿನಿಂದಲೂ ಜನರು ಸರಕಾರಗಳನ್ನು ಬದಲಿಸುತ್ತಾ ಬಂದಿದ್ದಾರೆ. ಆದರೆ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸತತ 3ನೇ ಅವಧಿಗೆ ಒಂದೇ ಪಕ್ಷ ಅಧಿಕಾರಕ್ಕೇರಿದೆ. ಇದು ಜನರು ನಮ್ಮ ಮೇಲಿಟ್ಟಿರುವ ನಂಬಿಕೆಯ ಪ್ರತೀಕವಾಗಿದೆ ಎಂದಿದ್ದಾರೆ.

ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದು ಸಮಾಜವನ್ನು ವಿಭಜಿಸಿ ಆರಾಜಕತೆ ತರಲು ಕಾಂಗ್ರೆಸ್‌ ಪ್ರಯತ್ನಗಳನ್ನು ಮಾಡಿದೆ. ರೈತರನ್ನು ಕೆರಳಿಸಿ, ಪ್ರಚೋದಿಸಿ ಬೆಂಕಿ ಹೊತ್ತಿಸಲು ಹೇಗೆಲ್ಲಾ ಪ್ರಯತ್ನಿಸಲಾಯಿತು ಎಂಬುದನ್ನು ಇಡೀ ದೇಶ ನೋಡಿದೆ. ರೈತರನ್ನು ಎತ್ತಿಕಟ್ಟಲು ನೋಡಿದ, ಪಿತೂರಿಗಳನ್ನು ಮಾಡಿದ ಕಾಂಗ್ರೆಸ್‌ಗೆ ಹರ್ಯಾಣ ರೈತರು ತಕ್ಕ ತಿರುಗೇಟು ನೀಡಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಕಾಶ್ಮೀರದ ಕಾರ್ಯಕರ್ತರಿಗೂ ಧನ್ಯವಾದ ಸಲ್ಲಿಸಿ, ನ್ಯಾಶನಲ್‌ ಕಾನ್ಫರೆನ್ಸ್‌ ಪಕ್ಷದ ಅಭೂತಪೂರ್ವ ಪ್ರದರ್ಶನವನ್ನೂ ಶ್ಲಾಘಿಸಿದ್ದಾರೆ.


ಡೋಲು, ನೃತ್ಯದೊಂದಿಗೆ ಲಡ್ಡು ಹಂಚಿಕೆ
ಹರ್ಯಾಣದಲ್ಲಿ ಬಿಜೆಪಿ ಮೂರನೇ ಬಾರಿಗೆ ಗೆದ್ದು, ಹ್ಯಾಟ್ರಿಕ್‌ ಸಾಧಿಸುತ್ತಿದ್ದಂತೆ ದೇಶಾದ್ಯಂತ ಕೇಸರಿ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ. ಹರ್ಯಾಣದಲ್ಲಿ ಕಳೆದ ಬಾರಿಗಿಂತಲೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆದಿದ್ದು, ಜಮ್ಮು-ಕಾಶ್ಮೀರದಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಗೆಲುವನ್ನು ದೇಶಾದ್ಯಂತ ಬಿಜೆಪಿ ನಾಯಕರು ಸಿಹಿ ಹಂಚುವ ಮೂಲಕ ಆಚರಿಸಿದ್ದಾರೆ.

Advertisement

ದಿಲ್ಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು ಪ್ರಧಾನಿ ಮೋದಿಯೂ ಇಲ್ಲಿ ಭಾಗಿಯಾಗಿದ್ದಾರೆ. ಇನ್ನು ಕರ್ನಾಟಕ, ಪಂಜಾಬ್‌ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಸಿಹಿ ಹಂಚಿದ ಬಿಜೆಪಿ ಕಾರ್ಯಕರ್ತರು ಗೆಲುವನ್ನು ಸಂಭ್ರಮಿಸಿದ್ದಾರೆ. ಚಂಡೀಗಢದಲ್ಲಿರುವ ಪಂಜಾಬ್‌ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಡೋಲು, ಸಂಗೀತ-ನೃತ್ಯದೊಂದಿಗೆ ಲಡ್ಡು ಹಂಚಿ ಸಂಭ್ರಮಿಸಲಾಗಿದೆ. ಬಹುತೇಕ ರಾಜ್ಯಗಳ ಪ್ರಧಾನ ಕಚೇರಿಗಳಲ್ಲಿ ಪಕ್ಷದ ಪ್ರಮುಖ ನಾಯಕರೆಲ್ಲ ಸೇರಿ ಗೆಲುವನ್ನು ಆಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next