Advertisement
ಮಳೆ ಭೀತಿ ಕೃಷಿ ಚಟುವಟಿಕೆಗೆ ಎದುರಾದ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ, ಅನಿರೀಕ್ಷಿತವಾಗಿ ಮಳೆ ಬರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರಾವಳಿಯ ಸಾಂಪ್ರದಾಯಿಕ ಕೃಷಿ ಕುಟುಂಬಿಕರು ಯಾಂತ್ರಿಕೃತ ಕೃಷಿ ಚಟುವಟಿಕೆಯೆಡೆಗೆ ಆಸಕ್ತಿ ತಳೆಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬರದೇ ಇದ್ದಲ್ಲಿ ಕಟಾವು ಕಾರ್ಯ ಇನ್ನು 15 ದಿನಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಹೊರ ಜಿಲ್ಲೆಗಳಿಂದ ಬಂದಿರುವ ಯಾಂತ್ರಿಕ ಕಟಾವು ಯಂತ್ರಗಳು ಅಲ್ಲಲ್ಲಿ ಬೀಡು ಬಿಟ್ಟಿದ್ದು ಈ ನಡುವೆ ಮಧ್ಯವರ್ತಿಗಳ ಮೂಲಕ ಕೆಲವೊಂದು ಕಡೆಗಳಲ್ಲಿ ಯಂತ್ರಗಳ ಸದ್ದು ಶುರುವಾಗಿದೆ. ಆದರೆ ಭತ್ತದ ಕಟಾವಿಗೆ ಪ್ರತಿ ಗಂಟೆಯ ಬಾಡಿಗೆ ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯಲ್ಲಿ ತೆಗೆದುಕೊಳ್ಳುವುದರಿಂದ ರೈತರಲ್ಲಿ ಗೊಂದಲ ಏರ್ಪಟ್ಟಿದೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣಕ್ಕೆ ಆಗ್ರಹ
ಕೃಷಿ ಇಲಾಖೆಯಲ್ಲಿ ಕಟಾವು ಯಂತ್ರಗಳ ಬಾಡಿಗೆ ಕಡಿಮೆ ಇದ್ದರೂ ಕೂಡಾ ಖಾಸಗಿ ಕಟಾವು ಯಂತ್ರಗಳ ದರ್ಬಾರ್ ಜೋರಾಗಿದೆ, ಈ ನಡುವೆ ಗ್ರಾಮೀಣ ಭಾಗದಲ್ಲಿನ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವ ಪರಿಣಾಮ ಈ ಹಿಂದೆ ಇಲಾಖೆಯಿಂದ ಕಟಾವು ಯಂತ್ರಗಳ ಬಾಡಿಗೆ ರೂ. 1,800 ಇದ್ದದ್ದು ಏಕಾಏಕಿ ಸ್ಫರ್ಧಾತ್ಮಕವಾಗಿ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದೆ. ಮಧ್ಯವರ್ತಿಗಳ ಹಾವಳಿ ನಿಯಂತ್ರಿಸುವ ನಿಟ್ಟಿನಿಂದ ಕೃಷಿ ಇಲಾಖೆ ಹಾಗೂ ಸಂಬಂಧಪಟ್ಟ ಸ್ಥಳಿಯಾಡಳಿತ ರೈತರ ಹಿತದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎನ್ನುವುದು ಗ್ರಾಮೀಣ ರೈತರ ಆಗ್ರಹ.
Related Articles
ದಿನಕ್ಕೆ ಸುಮಾರು 10 ಗಂಟೆಗಳ ಕಾಲ ಸುಮಾರು 4 ಎಕರೆಗೂ ಅಧಿಕ ಕೃಷಿ ಭೂಮಿಯನ್ನು ಕಟಾವು ಮಾಡಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಯಂತ್ರಗಳು ಹಾಗೂ ಕಾರ್ಮಿಕರ ನಿರ್ವಹಣೆ ವೆಚ್ಚ ಹೆಚ್ಚಾಗಿರುವುದರಿಂದ ಅಷ್ಟೇನೂ ಲಾಭ ತರುವಂತದಲ್ಲ . ಡೀಸೆಲ್ ದರ ಗಗನಕ್ಕೆ ಏರಿಕೆಯಾದ್ದರಿಂದ ಈ ಬಾರಿಯೂ ಕೂಡಾ ಭತ್ತದ ಕಟಾವಿಗೆ ಪ್ರತಿ ಗಂಟೆಗೆ 2,200ರೂ.ಗಳಿಂದ 2,400 ರೂ. ಬೆಲೆ ನಿಗದಿಪಡಿಸಿದ್ದೇವೆ.
– ಪ್ರಸಾದ್ , ಕಟಾವು ಯಂತ್ರದ ಮಾಲಕರು
Advertisement
ರೈತರಿಗೆ ಗಾಯದ ಮೇಲೆ ಬರೆ !ಕರಾವಳಿಗೆ ಹೊರ ಜಿಲ್ಲೆಗಳಿಂದ ಬಂದಿರುವ ಕಟಾವು ಯಂತ್ರಗಳ ಸಂಖ್ಯೆ ಬಹುತೇಕ ಹೆಚ್ಚಾಗಿದೆ. ಅಕಾಲಿಕ ಮಳೆಯಿಂದಾಗಿ ಗದ್ದೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಬೆಳೆದು ನಿಂತ ಭತ್ತದ ತೆನೆಗಳು ಉದುರಿಗೆ ಭೂಮಿಯ ಪಾಲಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದಲ್ಲಿ ಭತ್ತ ಕಟಾವು ಕಾರ್ಯವನ್ನು ಚುರುಕುಗೊಳಿಸಿದ್ದೇವೆ. ಕಳೆದ ಬಾರಿಗಿಂತಲೂ ಈ ಬಾರಿ ಕಟಾವಿನ ಯಂತ್ರದ ಬಾಡಿಗೆ ಪ್ರತಿ ಗಂಟೆಗೆ ಸುಮಾರು ರೂ. 300 ರಿಂದ ರೂ. 400 ಹೆಚ್ಚಳವಾಗಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗ್ರಾಮೀಣ ರೈತರು ನೇರವಾಗಿ ಯಂತ್ರಗಳ ಮಾಲಕರನ್ನು ಸಂಪರ್ಕಿಸಿ ಬದಲಾಗಿ ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ .
– ಕೆ. ಜಗದೀಶ್ ರಾವ್ ಕುಂಭಾಸಿ,
ಕುಂದಾಪುರ ಕಿಸಾನ್ ಸಂಘದ ಸದಸ್ಯರು (ಕೋಟೇಶ್ವರ ವಲಯ) – ಟಿ. ಲೋಕೇಶ್ ಆಚಾರ್ಯ ತೆಕ್ಕಟ್ಟೆ