Advertisement

ಹರ್ಷಿಕಾ ಪೂಣಚ್ಚ- ಸಾರಾ ಮಹೇಶ ನಡುವೆ ವಾಕ್ಸಮರ

11:16 PM Jun 16, 2019 | Lakshmi GovindaRaj |

ಕೊಡಗು ಸಂತ್ರಸ್ತರಿಗೆ ಸರ್ಕಾರ ನಿರ್ಮಿಸಿರುವ ಮನೆಗಳು ಶೀಟ್‌ಮನೆಗಳ ಥರ ವೆಂಟಿಲೇಷನ್‌ ಇಲ್ಲದೆ ತುಂಬಾನೇ ಕೆಟ್ಟದ್ದಾಗಿತ್ತು ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿರುವುದಕ್ಕೆ ಸಚಿವ ಸಾರಾ ಮಹೇಶ್‌ ಕಿಡಿ ಕಾರಿದ್ದಾರೆ. ಸಂತ್ರಸ್ತರ ಬಗ್ಗೆ ಸಿನಿಮಾದವರಿಗೆ ಏನು ಗೊತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ವಿಡಿಯೋ ಮಾಡಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಹರ್ಷಿಕಾ ಪೂಣಚ್ಚ, ನಾನು ಕೊಡಗಿನ ಮನೆ ಮಗಳು, ನನಗೆ ಕೇಳ್ಳೋದಕ್ಕೆ ಎಲ್ಲಾ ರೈಟ್ಸ್‌ ಇದೆ ಎಂದು ತಿರುಗೇಟು ನೀಡಿದ್ದಾರೆ.

Advertisement

ಸಂತ್ರಸ್ತರ ಮನೆಗಳ ಬಗ್ಗೆ ಸಿನಿಮಾದವರಿಗೆ ಏನು ಗೊತ್ತು?
ಮೈಸೂರು: ಕೊಡಗು ಸಂತ್ರಸ್ತರಿಗೆ ನಿರ್ಮಿಸಿರುವ ಮನೆಗಳ ಗುಣಮಟ್ಟದ ಕುರಿತು ನಟಿ ಹರ್ಷಿಕಾ ಪೂಣಚ್ಚ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಪ್ರವಾಸೋದ್ಯಮ ಮತ್ತು ರೇಷ್ಮೆ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ಇಷ್ಟಕ್ಕೂ ಹರ್ಷಿಕಾ ಪೂಣಚ್ಚ ಯಾರು?

ಈಗ ಏನಾಗಿದ್ದಾರೆ? ಸಿನಿಮಾದವರಾದ ಅವರು ಅದರ ಬಗ್ಗೆ ಮಾತ್ರ ಮಾತನಾಡಬೇಕು. ಕೊಡಗು ಸಂತ್ರಸ್ತರ ಮನೆಗಳ ಬಗ್ಗೆ ಅವರಿಗೇನು ಗೊತ್ತು? ವಾಸ್ತವ ಅರ್ಥಮಾಡಿಕೊಳ್ಳದೆ ತಜ್ಞರಂತೆ ಮಾತನಾಡಬಾರದು ಎಂದು ತಿರುಗೇಟು ನೀಡಿದರು.

ಕೊಡಗಿನಲ್ಲಿ ಜಿಲ್ಲಾಸ್ಪತ್ರೆಯ ಅಭಿವೃದ್ಧಿಗೆ ಮುಖ್ಯಮಂತ್ರಿಗಳು 100 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಿದ್ದಾರೆ. ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಆಸ್ಪತ್ರೆ ಅಭಿವೃದ್ಧಿಗೆ ಎಲ್ಲಾ ಸಿದ್ಧತೆಯೂ ನಡೆದಿದೆ. ಕೆಲವರು ಪ್ರಚಾರದ ಹುಚ್ಚಿನಿಂದ ಹೀಗೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ನಾನು ಕೊಡಗಿನ ಮನೆ ಮಗಳು
“ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ, ಎದ್ದು ಬಂದು ಎದೆಗೆ ಹೊಡೆದರಂತೆ. ಹಾಗಾಯ್ತು ನನ್ನ ಪರಿಸ್ಥಿತಿ. ನನ್ನ ಹೇಳಿಕೆಗೆ ನಾನು ಸ್ಪಷ್ಟನೆ ಕೊಡಲು ಇಷ್ಟಪಡ್ತೀನಿ ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

Advertisement

ವಿಡಿಯೋ ಮಾಡಿ ಪ್ರತಿಕ್ರಿಯಿಸಿರುವ ಅವರು, “ನಾನು ಶನಿವಾರ ಮೈಸೂರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾನು ಕೆಲವು ಮಾಡೆಲ್‌ ಮನೆಗಳ ಫೋಟೋಗಳನ್ನು ನೋಡಿದೆ. ಅದರಲ್ಲಿ ನನಗೆ ಅದು ಇಷ್ಟವಾಗಿಲ್ಲ. ಯಾಕೆಂದರೆ, ಅದೊಂದು ಶೀಟ್‌ಮನೆಗಳ ಥರ ವೆಂಟಿಲೇಷನ್‌ ಇಲ್ಲದೆ ತುಂಬಾನೇ ಕೆಟ್ಟದ್ದಾಗಿತ್ತು. ಅದಕ್ಕೋಸ್ಕರ ನಾನು ಹೇಳಿದ್ದು.

ರಾಜ್ಯ ಸರ್ಕಾರ ಮನೆ ಕಟ್ಟಿಕೊಡಬೇಕಾದರೆ ಚೆನ್ನಾಗಿರುವ ಮನೆ ಕಟ್ಟಿಸಿಕೊಡಲಿ. ನಮ್ಮ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಒಳ್ಳೆಯ ಮನೆ ಕಟ್ಟಿಕೊಡಿ ಅಂತ ನಾನು ರಿಕ್ವೆಸ್ಟ್‌ ಮಾಡಿಕೊಂಡಿದ್ದೇನೆ ಅಷ್ಟೇ. ನಾನು ಯಾರನ್ನೂ ದೂಷಿಸಿಲ್ಲ. ನೀವು ಒಳ್ಳೆಯ ಮನೆ ಕಟ್ಟಿಸಿಕೊಟ್ಟರೆ ಅದಕ್ಕಿಂತ ಖುಷಿ ಪಡೋರು ಬೇರೆ ಯಾರು ಇಲ್ಲ. ದಯವಿಟ್ಟು ಒಳ್ಳೆಯ ಮನೆ ಕಟ್ಟಿಸಿಕೊಡಿ’ ಎಂದು ಹೇಳಿದ್ದಾರೆ.

ಇನ್ನೊಂದು ವಿಷಯ ಏನು ಅಂದರೆ, ಅವರು ಏನು ಓದಿದ್ದಾರೆ, ಅವರಿಗೆ ಏನು ಅರ್ಹತೆ ಇದೆ ಅಂತ ಸಚಿವ ಮಹೇಶ್‌ ಕೇಳಿದ್ದಾರೆ. ನಾನು ಎಂಜಿನಿಯರ್‌, ನಾನು ಬಿಇ ಪದವೀಧರೆ, ನಾನು ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿದ್ದೀನಿ. ಹಾಗೆ ನಾನು ಕೇಳ್ಳೋದಕ್ಕೆ ನನಗೆ ಎಲ್ಲಾ ರೈಟ್ಸ್‌ ಇದೆ. ಯಾಕೆಂದರೆ ನಾನು ಕೊಡಗಿನ ಮನೆ ಮಗಳು.

ಹಾಗೆ, ಭಾರತದ ಪ್ರಜೆಯಾಗಿ ನನಗೆ ಕೇಳ್ಳೋದಕ್ಕೆ ಎಲ್ಲಾ ರೈಟ್ಸ್‌ ಇದೆ. ಹಾಗೆ ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡೋದು, ಸಿನಿಮಾದವರು ಸಿನಿಮಾ ಬಗ್ಗೆ ಮಾತ್ರ ಮಾತಾಡಲಿ, ಬೇರೆ ವಿಷಯದ ಬಗ್ಗೆ ಮಾತಾಡುವುದು ಬೇಡ ಅನ್ನೋದು ಸರಿನಾ?. ನಮ್ಮ ದೇಶದ ಮಹಿಳಾ ಮತ್ತು ಕಲ್ಯಾಣ ಸಚಿವೆ ಸ್ಮತಿ ಇರಾನಿ ಅವರು ಕೂಡ ಸಿನಿಮಾದವರು.

ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದವರು ಸಾಕಷ್ಟು ವರ್ಷಗಳ ಹಿಂದೆ ಇದ್ದದ್ದು ಸಿನಿಮಾದಲ್ಲಿ. ಹಾಗೆ, ಇತ್ತೀಚೆಗಷ್ಟೇ ಸಿನಿಮಾದವರು ಏನು ಮಾಡಬಹುದು ಅಂತ ಮಂಡ್ಯ ಲೋಕಸಭೆ ಎಲೆಕ್ಷನ್‌ನಲ್ಲಿ ಗೊತ್ತಾಗಿದೆ. ದಯವಿಟ್ಟು ಸಿನಿಮಾದವರ ಬಗ್ಗೆ ಹಗುರವಾಗಿ ಮಾತಾಡಬೇಡಿ. ಹಾಗೆಯೇ, ಕೊಡಗಿನಲ್ಲಿ ಎಮರ್ಜೆನ್ಸಿ ಆಸ್ಪತ್ರೆ ಬರಬೇಕು ಎಂಬುದು ನಮ್ಮ ರಿಕ್ವೆಸ್ಟ್‌ ಯಾಕೆಂದರೆ, ಕೊಡಗಲ್ಲಿ ಏಳು ಲಕ್ಷದಷ್ಟು ಜನ ನೆಲೆಸಿದ್ದಾರೆ.

ಅಂದರೆ, ಅಲ್ಲೇ ಇದ್ದು, ಬದುಕುತ್ತಿದ್ದಾರೆ. ಹಾಗೆಯೇ 35 ಲಕ್ಷದಷ್ಟು ಜನ ಪ್ರತಿ ವರ್ಷ ಪ್ರವಾಸಿಗರು ಅಲ್ಲಿಗೆ ಬರುತ್ತಾರೆ. ಇಷ್ಟೊಂದು ಜನಸಂಖ್ಯೆ ಇರುವಂತಹ ಕೊಡಗಿನಲ್ಲಿ ಒಂದು ಎಮರ್ಜೆನ್ಸಿ ಹಾಸ್ಪಿಟಲ್‌ ಇಲ್ಲ ಅಂತ ಹೇಳಿದರೆ, ಅದರಷ್ಟು ಬೇಜಾರಿನ ವಿಷಯ ಯಾವುದೂ ಇಲ್ಲ. ಸೋ, ದಯವಿಟ್ಟು ಒಂದು ಎಮರ್ಜೆನ್ಸಿ ಹಾಸ್ಪಿಟಲ್‌ ಮಾಡಿಕೊಡಿ ಅಂತ ಅಭಿಯಾನ ಶುರು ಮಾಡಿದ್ದೇವೆ.

ಅದಕ್ಕೆ ನಿಮ್ಮ ಸಹಕಾರ ಬೇಕು. ಮಾಡಿಕೊಡಿ ಅಂತ ನಿಮ್ಮಲ್ಲಿ ರಿಕ್ವೆಸ್ಟ್‌ ಮಾಡ್ತೀವಿ. ಅದರ ಕಡೆ ಒಲವು ತೋರಿಸಿ, ಮತ್ತೆ, ಕೊಡಗಿನಲ್ಲಿ ಆಗುತ್ತಿರುವ ಸಮಸ್ಯೆ, ಅಲ್ಲಿ ಪ್ರಳಯ ಆದಾಗ, ಸಮಸ್ಯೆ ಎದುರಾದಾಗ, ಏನೆಲ್ಲಾ ಆಯ್ತು ನಮಗೆ ಗೊತ್ತು. ಯಾಕೆಂದರೆ, ನಾವೂ ಕೊಡಗಿನವರು. ಅಲ್ಲಿ ಮಳೆಗಾಲ ಶುರುವಾದರೆ, ಮತ್ತೆ ಅಲ್ಲಿ ಶಿಫ್ಟ್ ಆಗಲು ಕಷ್ಟ ಆಗುತ್ತೆ. ಮಳೆಗಾಲ ಶುರುವಾಗುವ ಮುನ್ನ, ದಯವಿಟ್ಟು ಮನೆ ನಿರ್ಮಿಸಿಕೊಡಿ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next