ಕೋವಿಡ್ ಎರಡನೇ ಲಾಕ್‌ಡೌನ್‌ಗೂ ಮೊದಲು “ಲಗಾಮ್’ ಚಿತ್ರತಂಡ ಅದ್ಧೂರಿಯಾಗಿ ಚಿತ್ರದ ಮುಹೂರ್ತವನ್ನು ನೆರವೇರಿಸಿತ್ತು. ಆದರೆ “ಲಗಾಮ್’ ಮುಹೂರ್ತದ ಬಳಿಕ ಲಾಕ್ ಡೌನ್ ಘೋಷಣೆಯಾಗಿದ್ದರಿಂದ, ಚಿತ್ರತಂಡ ಅನಿವಾರ್ಯವಾಗಿ ಚಿತ್ರದ ಚಿತ್ರೀಕರಣವನ್ನು ಮುಂದೂಡಿತ್ತು. ಇದೀಗ ಮತ್ತೆ ಚಿತ್ರೀಕರಣಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, “ಲಗಾಮ್’ ಚಿತ್ರತಂಡ ಚಿತ್ರದ ಚಿತ್ರೀಕರಣವನ್ನು ಪುನಃ ಆರಂಭಿಸಿದೆ.
ಇನ್ನು ಕೋವಿಡ್ ಎರಡನೇ ಅಲೆಯ ಲಾಕ್‌ಡೌನ್‌ನಿಂದ ಮನೆಯಲ್ಲೇ ಲಾಕ್ ಆಗಿದ್ದ ನಟಿ ಹರಿಪ್ರಿಯಾ, “ಲಗಾಮ್’ ಚಿತ್ರದ ಮೂಲಕ ಮತ್ತೆ ಶೂಟಿಂಗ್‌ನತ್ತ ಮುಖ ಮಾಡಿದ್ದಾರೆ. ಇದೇ ವೇಳೆ “ಲಗಾಮ್’ ಚಿತ್ರೀಕರಣದ ನಡುವೆ ಮಾತಿಗೆ ಸಿಕ್ಕ ಹರಿಪ್ರಿಯಾ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
“ನಾನು ಯಾವಾಗಲೂ ಸಿನಿಮಾ ಕೆಲಸದಲ್ಲೇ ಬಿಝಿಯಾಗಿರುತ್ತಿದ್ದರಿಂದ, ಮನೆಯಲ್ಲಿ ತುಂಬ ದಿನ ಇರುತ್ತಿದ್ದದ್ದು ಅಪರೂಪ. ಆದ್ರೆಕಳೆದ ಒಂದೂವರೆ ವರ್ಷದಿಂದ ಕೋವಿಡ್ ಭಯ, ಲಾಕ್‌ಡೌನ್‌ನಿಂದಾಗಿ ಅನಿವಾರ್ಯವಾಗಿ ಮನೆಯಲ್ಲೇ ಇರುವಂತಾಗಿದೆ. ಆದ್ರೆ ಕೋವಿಡ್, ಲಾಕ್‌ಡೌನ್ ಅಂಥ ಎಷ್ಟು ದಿನ ಮನೆಯಲ್ಲಿ ಇರೋದಕ್ಕೆ ಸಾಧ್ಯ? ನಾನುಕೂಡ ಯಾವಾಗ ಈ ಲಾಕ್‌ಡೌನ್ ಮುಗಿಯುತ್ತದೆ, ಮತ್ತೆ ಯಾವಾಗ ಶೂಟಿಂಗ್ ಮಾಡ್ತೀನಿ ಅಂಥಕಾಯ್ತುತ್ತಿದೆ. ಈಗ “ಲಗಾಮ್’ ಸಿನಿಮಾದ ಶೂಟಿಂಗ್ ಮೂಲಕ ಮತ್ತೆ ನನ್ನ ಕೆಲಸ ಶುರುವಾಗಿದೆ. ಶೂಟಿಂಗ್ ಶುರುವಾಗಿರುವುದಕ್ಕೆ ನಿಜಕ್ಕೂ ಖುಷಿಯಾಗುತ್ತಿದೆ’ ಎನ್ನುತ್ತಾರೆ ಹರಿಪ್ರಿಯಾ.
ಇನ್ನು “ಲಗಾಮ್’ ಚಿತ್ರದಲ್ಲಿ ಹರಿಪ್ರಿಯಾ ತನಿಖಾ ಪತ್ರಕರ್ತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಮೊದಲ ಬಾರಿಗೆ ಇಂಥದ್ದೊಂದು ಪಾತ್ರ ಮಾಡುತ್ತಿರುವುದರ ಬಗ್ಗೆ ಖುಷಿಯಾಗಿರುವ ಹರಿಪ್ರಿಯಾ, “ಅನೇಕ ಜರ್ನಲಿಸ್ಟ್‌ಗಳನ್ನು ಹತ್ತಿರದಿಂದ ನೋಡಿದ್ದೇನೆ. ಜರ್ನಲಿಸ್ಟ್‌ಗಳದ್ದು ಒಂಥರಾ ಥ್ರಿಲ್ಲಿಂಗ್ ಜಾಬ್. ಜರ್ನಲಿಸ್ಟ್‌ಗಳ ಹಾವಭಾವ ಎಲ್ಲವನ್ನು ಗಮನಿಸಿದ್ದೇನೆ. ಅದೆಲ್ಲವನ್ನೂ ಈ ಪಾತ್ರದಲ್ಲಿ ಅಳವಡಿಸಿಕೊಂಡಿದ್ದೇನೆ’ ಎನ್ನುತ್ತಾರೆ.