ಈ ವರ್ಷದ ಆರಂಭದಲ್ಲಿಯೇ ಸ್ಯಾಂಡಲ್‌ವುಡ್‌ನ ಮತ್ತೂಂದು ತಾರಾ ಜೋಡಿ ವಸಿಷ್ಠ ಸಿಂಹ – ಹರಿಪ್ರಿಯಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದೇ ಜನವರಿ 26ಕ್ಕೆ ಶಾಸ್ತ್ರೋಕ್ತವಾಗಿ ನಡೆಯಲಿರುವ ವಿವಾಹದಲ್ಲಿ ವಸಿಷ್ಠ ಸಿಂಹ – ಹರಿಪ್ರಿಯಾ ಜೋಡಿ ಸಪ್ತಪದಿ ತುಳಿಯಲಿದೆ. ಇನ್ನು ಸ್ಯಾಂಡಲ್‌ವುಡ್‌ನಲ್ಲಿ ನಡೆಯುತ್ತಿರುವ ವರ್ಷದ ಮೊದಲ “ಸ್ಟಾರ್ ಮ್ಯಾರೇಜ್’ ಬಗ್ಗೆ ಸ್ಯಾಂಡಲ್‌ವುಡ್ ಮಂದಿಗೆ ಮಾತ್ರವಲ್ಲದೆ, ಸಿನಿಪ್ರಿಯರು ಮತ್ತು ಅಭಿಮಾನಿಗಳಿಗೂ ಸಾಕಷ್ಟು ಕಾತರ, ಕುತೂಹಲವಿದೆ. ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಲವ್‌ಸ್ಟೋರಿ ಶುರುವಾಗಿದ್ದು ಯಾವಾಗ? ಮೊದಲು ಪ್ರಪೋಸ್ ಮಾಡಿದ್ದು ಯಾರು? ಇಬ್ಬರ ಮದುವೆ ತಯಾರಿ ಹೇಗಿದೆ? ಭವಿಷ್ಯದ ಕನಸುಗಳೇನು? ಹೀಗೆ ಹತ್ತಾರು ಪ್ರಶ್ನೆಗಳಿಗೆ ಸಿಂಹಪ್ರಿಯಾ ಜೋಡಿ ಒಟ್ಟಾಗಿ ಉತ್ತರಿಸಿದೆ.
“2016 ರಿಂದ ನಾವಿಬ್ಬರೂ ಸ್ನೇಹಿತರು. ಈ ಸ್ನೇಹ ಹುಟ್ಟೋಕೆ ಕಾರಣ, ನಾನು ಅವರ ಅಪ್ಪಟ ಅಭಿಮಾನಿ. ಆಕ್ಟರ್ ಆಗಿ ನೋಡುವುದಾದರೆ, ಅವರು ನನಗಿಂತ ಸೀನಿಯರ್. “ನನ್ನ ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ನೋಡಿ, ಇಷ್ಟ ಆಗಿ ಅವರಾಗಿಯೇ ಬಂದು ಮಾತಾಡಿದ್ದರು. ಸೀನಿಯರ್ ಆಗಿ ಬಂದು ವಿಶ್ ಮಾಡಿದ್ರಲ್ಲ. ಎಷ್ಟು ಒಳ್ಳೆ ಗುಣ ಅಂತ ಅಂದ್ಕೊಂಡಿದ್ದೆ. ಈಕೆ ನಿಜವಾಗಲೂ ನನ್ನ ಇಷ್ಟದ ನಟಿ. ನಾನು ನೋಡಿರುವ ಸಿನಿಮಾಗಳದ್ದು ಲಿಸ್ಟ್ ಬೇಕಾದರೂ ಕೊಡುತ್ತೇನೆ. ಅವರ ಕೆಲಸ ನನಗೆ ಬಹಳ ಇಷ್ಟ. ಆನಂತರ ನಮ್ಮಿಬ್ಬರ ನಡುವೆ ಸ್ನೇಹ ಶುರುವಾಯ್ತು. ಫೋನ್‌ನಲ್ಲಿ ಮಾತುಕಥೆ ಶುರುವಾಯಿತು. ನಮ್ಮಿಬ್ಬರ ಪ್ರೀತಿಗೆ ಕೋವಿಡ್ ಲಾಕ್ ಡೌನ್ ಕೂಡ ಕಾರಣ ಆಯಿತು. ಸಮಯ ಸಿಕ್ತಾ ಇತ್ತು. ದಿನ ಮಾತಾಡುತ್ತಿದ್ವಿ. ಹರಿಪ್ರಿಯಾ ಮಾತು ಅವರ ನಡವಳಿಕೆ, ಅವರಲ್ಲಿರೋ ಟ್ಯಾಲೆಂಟ್ ನನ್ನನ್ನ ತುಂಬಾ ಇಂಪ್ರಸ್ ಮಾಡಿದೆ. ನಾನು ಮಾನಸಿಕವಾಗಿ ಕಷ್ಟದಲ್ಲಿದ್ದಾಗ ಅದರಿಂದ ಹೊರಗೆ ಕರೆದುಕೊಂಡು ಬಂದಿದ್ದು ಹರಿಪ್ರಿಯಾ. ಇಬ್ಬರಿಗೂ ಇಷ್ಟ ಇತ್ತು. ಸ್ನೇಹ ಪ್ರೀತಿಯಾಗಿ ಹೇಗೆ ಹೇಳ್ಳೋದು ಅಂತ ಪರದಾಡುತ್ತಿದ್ದೆವು. ನಂತರ ಅದಕ್ಕೂ ಒಂದು ದಿನ ಬಂತು. ಲಾಕ್‌ಡೌನ್‌ನಲ್ಲಿ ಇಬ್ಬರು ಪ್ರೀತಿಯನ್ನ ಹೇಳಿಕೊಂಡೆವು’ ಎನ್ನುತ್ತ ತಮ್ಮ ಲವ್‌ಸ್ಟೋರಿ ಬಗ್ಗೆ ಇಂಟ್ರೋಡಕ್ಷನ್ ಕೊಡುತ್ತಾರೆ ವಸಿಷ್ಠ ಸಿಂಹ.
ಮೊದಲು ಪ್ರಪೋಸ್ ಮಾಡಿದ್ದು ಯಾರು?
ಸಿಂಹಪ್ರಿಯಾ ಲವ್‌ಸ್ಟೋರಿಯಲ್ಲಿ ಮೊದಲು ಪ್ರಪೋಸ್ ಮಾಡಿದ್ದು ಯಾರು? ಎಂಬ ಪ್ರಶ್ನೆಗೆ ಉತ್ತರ ವಸಿಷ್ಠ ಸಿಂಹ. “ಸಿಂಹ ಪ್ರಪೋಸ್ ಮಾಡಿದಾಗ ನನಗೂ ಹೇಳಿಕೊಳ್ಳಬೇಕು ಅಂತ ಇತ್ತು. ಅಪ್ಪನ ನೆನ ಪಿನ ದಿನದಂದು ನನಗೆ ಸಿಂಹ ಪ್ರಪೋಸ್ ಮಾಡಿದ್ರು. ನಾನು ಅವರ ಪ್ರಪೋಸಲ್ ಒಪ್ಪಿಕೊಂಡೆ. ಯಾರಿಗೂ ಗೊತ್ತಾಗದ ಹಾಗೆ ಬಹಳ ಕಷ್ಟಪಟ್ಟು ಪ್ರೀತಿ ಕಾಪಾಡಿಕೊಂಡು ಬಂದಿದ್ದೇವೆ. ನಮ್ಮ ಪ್ರೀತಿಗೆ ಎರಡೂವರೆ -ಮೂರು ವರ್ಷ ಆಗಿದೆ. ವಸಿಷ್ಠ ಬಂದಮೇಲೆ ಬದುಕು ಬದಲಾಗಿದೆ. ತುಂಬಾಖುಷಿ ಆಗುತ್ತಿದೆ. ನಮ್ಮ ಪ್ರೀತಿನ ಹೇಳಿಕೊಳ್ಳೋಣ ಅಂತ ಅಂದುಕೊಂಡ್ವಿ. ಆದರೆ ಅದು ಆಗಲಿಲ್ಲ. ಇವತ್ತು ಮದುವೆ ಬಗ್ಗೆ ಮಾತಾಡೋಕೆ ತುಂಬಾ ಭಯ ಆಗ್ತಿದೆ’ ಎನ್ನುವುದು ಹರಿಪ್ರಿಯಾ ಮಾತು.
Related Articles
ಸಿನಿಮಾದಿಂದ ಸ್ವಲ್ಪ ಬ್ರೇಕ್…
ಇನ್ನು ವಸಿಷ್ಠ ಸದ್ಯಕ್ಕೆ ಒಂದಷ್ಟು ಸಿನಿಮಾಗಳಲ್ಲಿ ನಾಯಕನಾಗಿ ಬಿಝಿಯಾಗಿದ್ದಾರೆ. ಹರಿಪ್ರಿಯಾ ಕೈಯಲ್ಲೂ ಒಂದಷ್ಟು ಸಿನಿಮಾಗಳಿದ್ದು, ಅದರಲ್ಲಿ ಕೆಲವು ಬಿಡುಗಡೆಗೆ ರೆಡಿಯಾಗಿವೆ. ಆದರೆ ಮದುವೆಯ ಬಳಿಕ ಇಬ್ಬರಿಗೂ ಕೊಂಚ ಬ್ರೇಕ್ ಬೇಕು ಎಂಬು ಸಿಂಹಪ್ರಿಯಾ ಜೋಡಿಯ ಒಕ್ಕೊರಲ ಮಾತು. “ನಾನು ಮದುವೆ ಆದ ಮೇಲೆ ಕೂಡ ಒಳ್ಳೆ ಕಥೆ ಬಂದ್ರೆ, ಖಂಡಿತ ಸಿನಿಮಾ ಮಾಡುತ್ತೇನೆ. ಮೊದಲು ಹೆಂಡತಿಯಾಗಿ ನಾನು ಸಕ್ಸಸ್ ಆಗಬೇಕು. ಮದುವೆ ಆದ ಮೇಲೆ ಚಿಕ್ಕ ಬ್ರೇಕ್ ನನಗೆ ಬೇಕು. ಸದ್ಯಕ್ಕೆ ನಾನು ಮದುವೆ, ಸಂಸಾರವನ್ನು ಎಂಜಾಯ್ ಮಾಡಬೇಕಿದೆ’ ಎಂಬುದು ಹರಿಪ್ರಿಯಾ ಮಾತು.
ಸಾಂಸ್ಕೃತಿಕ ನಗರಿಯಲ್ಲಿ ಮದುವೆಗೆ ತಯಾರಿ
ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿಯ ವಿವಾಹ ಮೈಸೂರಿನಲ್ಲಿ ನಡೆಯಲಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯಲಿರುವ ವಿವಾಹ ಸಮಾರಂಭದಲ್ಲಿ ಎರಡೂ ಕುಟುಂಬದ ಬಂಧುಗಳು, ಸ್ನೇಹಿತರು ಹಿತೈಷಿಗಳಿಗೆ ಆಮಂತ್ರಣ ನೀಡಲಾಗಿದೆ. ವಿವಾಹದ ಎರಡು ದಿನಗಳ ಬಳಿಕ ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್‌ನಲ್ಲಿ ಆರತಕ್ಷತೆ ಸಮಾರಂಭ ಏರ್ಪಡಿಸಲಾಗಿದ್ದು, ಚಿತ್ರರಂಗ, ರಾಜಕೀಯ ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ನೂತನ ವಧುವರರಿಗೆ ಶುಭ ಹಾರೈಸಲಿದ್ದಾರೆ.
ನಾಯಿ ಕೊಟ್ಟು ಪಟಾಯಿಸಿಲ್ಲ…
“ಮನೆಯವರು ಬರ್ತ್‌ಡೇಗೆ ಒಂದು ವಿಡಿಯೋ ಹಾಕಿದ್ದರು. ಅದನ್ನು ನೋಡಿ ಹಲವಾರು ಜನ ನಾಯಿಮರಿ ಕೊಟ್ಟು ಪಟಾಯಿಸಿಕೊಂಡೆ ಅಂದ್ರು. ಇಷ್ಟೊಂದು ಕಷ್ಟಪಟ್ಟಿದ್ದೀನಿ. ನಾಯಿ ಮರಿ ಕೊಟ್ಟು ಪಟಾಯಿಸಿಕೊಂಡು ಬಿಟ್ಟ ಅಂದ್ರಲ್ಲ ಅಂತ ಅನಿಸಿತ್ತು. ಆದರೆ, ಆ ಊಹೆ ಸಹಜ. ಯಾರು ಏನು ಬೇಕಾದ್ರೂ ಅಂದೊRಳ್ಳಬಹುದು. ಅಂದಹಾಗೆ, ಪ್ರೀತಿ ಆದಮೇಲೆ ನಾಯಿಮರಿ ಕೊಟ್ಟೆ. ಆ ಸಮಯದಲ್ಲಿಇಬ್ಬರು ಪ್ರೀತಿಸುತ್ತಿದ್ದೆವು’ ಎನ್ನುತ್ತಾರೆ ವಸಿಷ್ಠ.